
ಬಾಗಲಕೋಟೆ, 30 ಅಕ್ಟೋಬರ್ (ಹಿ.ಸ.)
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 24ನೇ ಕಂತಿನ ಹಣ ಬಿಡುಗಡೆ ಕಾರ್ಯಕ್ರಮವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದು, ಇದರ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಬಾಗಲಕೋಟೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಭಾಗವಹಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ರೈತರನ್ನು ಉದ್ದೇಶಿಸಿ ಮಾತನಾಡಿದ ಕಾರ್ಯಕ್ರಮದ ನೇರ ಪ್ರಸಾರವನ್ನು ರೈತರು ಹಾಗೂ ಕೃಷಿ ಕ್ಷೇತ್ರದ ಪ್ರತಿನಿಧಿಗಳೊಂದಿಗೆ ವೀಕ್ಷಿಸಲಾಯಿತು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ನೀಡಲಾಗುತ್ತಿರುವ ಆರ್ಥಿಕ ನೆರವು ಹಾಗೂ ಯೋಜನೆಯ ಮಹತ್ವದ ಕುರಿತು ಚರ್ಚಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ದೇಶದ ಕೃಷಿ ಕ್ಷೇತ್ರದ ಅಭಿವೃದ್ಧಿ ಹಾಗೂ ರೈತರ ಆರ್ಥಿಕ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸುತ್ತಿದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ರೈತರಿಗೆ ನೇರವಾಗಿ ಆರ್ಥಿಕ ನೆರವು ತಲುಪಿಸುವ ಪ್ರಮುಖ ಯೋಜನೆಯಾಗಿದ್ದು, ರೈತರ ಕೃಷಿ ಚಟುವಟಿಕೆಗಳಿಗೆ ಈ ನೆರವು ಸಹಕಾರಿಯಾಗುತ್ತಿದೆ ಎಂದು ಹೇಳಿದರು.
ರೈತರ ಆದಾಯ ಹೆಚ್ಚಳ, ಕೃಷಿ ಉತ್ಪಾದಕತೆ ಸುಧಾರಣೆ, ಆಧುನಿಕ ಕೃಷಿ ಪದ್ಧತಿಗಳ ಅಳವಡಿಕೆ ಹಾಗೂ ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರದ ವಿವಿಧ ಯೋಜನೆಗಳು ಸಹಕಾರಿಯಾಗುತ್ತಿವೆ. ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೃಷಿ ಸಂಬಂಧಿತ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ವೆಂಕಟೇಶ ಕುಲಕರ್ಣಿ ಮಾತನಾಡಿ, ರೈತರಿಗೆ ವೈಜ್ಞಾನಿಕ ಕೃಷಿ ಪದ್ಧತಿಗಳ ಕುರಿತು ನಿರಂತರವಾಗಿ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುತ್ತಿದೆ. ಕೃಷಿ ವಿಜ್ಞಾನ ಕೇಂದ್ರದ ಮೂಲಕ ರೈತರಿಗೆ ತರಬೇತಿ, ತಾಂತ್ರಿಕ ಸಲಹೆ ಹಾಗೂ ವಿವಿಧ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ವೈಜ್ಞಾನಿಕ ಮಾರ್ಗದರ್ಶನ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಕೃಷಿ ಕ್ಷೇತ್ರದಲ್ಲಿ ಎದುರಾಗುತ್ತಿರುವ ಹವಾಮಾನ ವೈಪರೀತ್ಯ, ಬೆಳೆ ನಿರ್ವಹಣೆ, ಮಣ್ಣಿನ ಆರೋಗ್ಯ, ನೀರಿನ ಸಮರ್ಪಕ ಬಳಕೆ, ಸುಧಾರಿತ ತಳಿಗಳ ಅಳವಡಿಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ರೈತರು ಕೃಷಿ ವಿಜ್ಞಾನ ಕೇಂದ್ರದ ತಜ್ಞರ ಸಲಹೆ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕರಾದ ರಫೀ ಕಾಂಟ್ರಾಕ್ಟರ್ ಸೇರಿದಂತೆ ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ, ಅಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತ ಬಾಂಧವರು ಉಪಸ್ಥಿತರಿದ್ದರು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 24ನೇ ಕಂತಿನ ಹಣ ಬಿಡುಗಡೆ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸುವ ಮೂಲಕ ರೈತರು ಕೇಂದ್ರ ಸರ್ಕಾರದ ಯೋಜನೆಯ ಕುರಿತು ಮಾಹಿತಿ ಪಡೆದುಕೊಂಡರು. ಕಾರ್ಯಕ್ರಮವು ರೈತರು, ಕೃಷಿ ವಿಜ್ಞಾನಿಗಳು ಹಾಗೂ ಅಧಿಕಾರಿಗಳ ನಡುವಿನ ಸಂವಾದಕ್ಕೆ ಸಹ ವೇದಿಕೆಯಾಯಿತು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande