
ನವದೆಹಲಿ, 30 ಅಕ್ಟೋಬರ್ (ಹಿ.ಸ.):
ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನಗಳ ಕಾಲ ಗುಜರಾತ್ ಪ್ರವಾಸ ಕೈಗೊಳ್ಳಲಿದ್ದು, ಈ ಸಂದರ್ಭದಲ್ಲಿ ಬನಸ್ಕಾಂಠ ಜಿಲ್ಲೆಯಲ್ಲಿ 14 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ಲೋಕಾರ್ಪಣೆ ನೆರವೇರಿಸಲಿದ್ದಾರೆ. ಇದೇ ವೇಳೆ ದೇಶದ ರೈತರಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 24ನೇ ಕಂತಿನಡಿ ಸುಮಾರು 19 ಸಾವಿರ ಕೋಟಿ ರೂ. ನೆರವನ್ನು ಬಿಡುಗಡೆ ಮಾಡಲಿದ್ದಾರೆ.
ಪ್ರಧಾನಿ ಕಚೇರಿ ಗುರುವಾರ ಬಿಡುಗಡೆ ಮಾಡಿರುವ ಪ್ರಕಟಣೆಯ ಪ್ರಕಾರ, ಅ. 30ರಂದು ಮೋದಿ ಅವರು ಬನಸ್ಕಾಂಠದಲ್ಲಿ ಭ್ರೂಣ ವರ್ಗಾವಣೆ ತಂತ್ರಜ್ಞಾನ ಮತ್ತು ಕೃತಕ ಗರ್ಭಧಾರಣೆ ಪ್ರಯೋಗಾಲಯ ಹಾಗೂ ಭಾರತ ಗೋವಂಶ ತಳಿ ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವುದರ ಜತೆಗೆ ಎರಡು ರೈಲು ಸೇವೆಗಳಿಗೆ ಹಸಿರು ನಿಶಾನೆ ತೋರಿಸಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಬನಸ್ಕಾಂಠ ಜಿಲ್ಲೆಯ ಭಿಲ್ಡಿಯಲ್ಲಿ ಸ್ಥಾಪಿಸಲಾಗಿರುವ ಭಾರತ ಗೋವಂಶ ತಳಿ ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. 127 ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ಈ ಕೇಂದ್ರವು ಗೋವಿನ ತಳಿಗಳ ಸುಧಾರಣೆ, ಆನುವಂಶಿಕ ಅಭಿವೃದ್ಧಿ ಹಾಗೂ ಆಧುನಿಕ ಸಂತಾನೋತ್ಪತ್ತಿ ತಂತ್ರಜ್ಞಾನಗಳಿಗೆ ಉತ್ತೇಜನ ನೀಡಲಿದೆ. ಕಂಕ್ರೇಜ್ ತಳಿಯ ಗೋವುಗಳ ಅಭಿವೃದ್ಧಿಗಾಗಿ ದೇಶದಲ್ಲೇ ಮೊದಲ ಬಾರಿಗೆ ಇಂತಹ ಕೇಂದ್ರ ಸ್ಥಾಪಿಸಲಾಗಿದೆ. ಇದರ ಮೂಲಕ ತಳಿ ಸುಧಾರಣೆಯ ವೇಗವನ್ನು 10ರಿಂದ 20 ಪಟ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ.
ಬನಾಸ್ ಡೇರಿ ವತಿಯಿಂದ ಥರಾಡ್ ಮತ್ತು ರಾಧನಪುರದಲ್ಲಿ ಸ್ಥಾಪಿಸಲಿರುವ ಎರಡು ಜೈವಿಕ ಸಂಕುಚಿತ ನೈಸರ್ಗಿಕ ಅನಿಲ ಘಟಕಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಘಟಕಗಳು ಪ್ರತಿದಿನ ಕ್ರಮವಾಗಿ 75 ಮತ್ತು 100 ಮೆಟ್ರಿಕ್ ಟನ್ ಗೋವಿನ ಸಗಣಿಯನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿರಲಿವೆ.
ಅಹಮದಾಬಾದ್ ಮೆಟ್ರೊ ಎರಡನೇ ಹಂತದ ವಿಸ್ತರಣಾ ಯೋಜನೆಗಳಿಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ವಿಮಾನ ನಿಲ್ದಾಣದವರೆಗಿನ 6 ಕಿ.ಮೀ.ಗೂ ಅಧಿಕ ಉದ್ದದ ಮಾರ್ಗದಲ್ಲಿ ಐದು ನಿಲ್ದಾಣಗಳು ಹಾಗೂ ಗಿಫ್ಟ್ ಸಿಟಿವರೆಗಿನ 3.3 ಕಿ.ಮೀ.ಗೂ ಅಧಿಕ ಉದ್ದದ ಮಾರ್ಗದಲ್ಲಿ ಮೂರು ನಿಲ್ದಾಣಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.
ಸುಮಾರು 2,600 ಕೋಟಿ ರೂ. ವೆಚ್ಚದಲ್ಲಿ ಅಹಮದಾಬಾದ್-ಮೆಹಸಾಣ ರಸ್ತೆ (ರಾಜ್ಯ ಹೆದ್ದಾರಿ-41)ಯನ್ನು ನಾಲ್ಕು ಪಥಗಳಿಂದ ಎಂಟು ಪಥಗಳಿಗೆ ವಿಸ್ತರಿಸುವ ಯೋಜನೆಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಗುಜರಾತ್ನಲ್ಲಿ 4,030 ಮಕ್ಕಳ ಸ್ನೇಹಿ ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದು, ಈಗಾಗಲೇ ಪೂರ್ಣಗೊಂಡಿರುವ 361 ಕೇಂದ್ರಗಳನ್ನು ಉದ್ಘಾಟಿಸಲಿದ್ದಾರೆ. ಸುಮಾರು 800 ಕೋಟಿ ರೂ. ವೆಚ್ಚದ ಈ ಯೋಜನೆಯಿಂದ ನಾಲ್ಕು ಲಕ್ಷಕ್ಕೂ ಅಧಿಕ ಜನರಿಗೆ ಅನುಕೂಲವಾಗುವ ನಿರೀಕ್ಷೆಯಿದೆ.
ಕೃಷಿ ಮೂಲಸೌಕರ್ಯ ನಿಧಿಯಡಿ ಪೂರ್ಣಗೊಂಡಿರುವ 521 ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಸುಮಾರು 4,950 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಶೀತಲ ಸಂಗ್ರಹಾಗಾರ, ಉಗ್ರಾಣ, ಧಾನ್ಯ ಸಂಗ್ರಹಾಗಾರ, ಬಹುಮನೆ ಕೃಷಿ ಘಟಕಗಳು ಹಾಗೂ ಕೃಷಿ ಉತ್ಪನ್ನಗಳ ಸಂಸ್ಕರಣಾ ಸೌಲಭ್ಯಗಳು ಇದರಲ್ಲಿ ಸೇರಿವೆ.
ಸನಾದರ್ನಲ್ಲಿರುವ ಆಲೂಗಡ್ಡೆ ಸಂಸ್ಕರಣಾ ಘಟಕದ ವಿಸ್ತರಣೆಯನ್ನು ಉದ್ಘಾಟಿಸಲಿದ್ದು, ಪಾಲನಪುರದಲ್ಲಿ ಅತಿ ಹೆಚ್ಚಿನ ತಾಪಮಾನದಲ್ಲಿ ಸಂಸ್ಕರಿಸಿದ ಉತ್ಪನ್ನಗಳಿಗಾಗಿ ಸ್ವಯಂಚಾಲಿತ ಸಂಗ್ರಹಣೆ ಮತ್ತು ವಿತರಣಾ ವ್ಯವಸ್ಥೆಯನ್ನು ಆರಂಭಿಸಲಿದ್ದಾರೆ.
ಸಾಬರಮತಿ-ವಾರಾಣಸಿ ಎಕ್ಸ್ಪ್ರೆಸ್ ಹಾಗೂ ಮೆಹಸಾಣ-ಬೆಚರಾಜಿ-ಸಾಬರಮತಿ ಮೆಮು ರೈಲು ಸೇವೆಗಳಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಪಿಎಂ ಕಿಸಾನ್ ಯೋಜನೆಯ 24ನೇ ಕಂತಿನ ಹಣ ಬಿಡುಗಡೆ ಜತೆಗೆ, ಅನುಮೋದನೆಗೊಂಡಿರುವ 12 ತೋಟಗಾರಿಕೆ ಸಮೂಹಗಳ ಕಾರ್ಯಚಟುವಟಿಕೆಗಳಿಗೂ ಚಾಲನೆ ನೀಡಲಿದ್ದಾರೆ. ಸುಮಾರು 1.46 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿರುವ ಈ ಸಮೂಹಗಳಿಂದ 1.3 ಲಕ್ಷಕ್ಕೂ ಅಧಿಕ ರೈತರಿಗೆ ಅನುಕೂಲವಾಗುವ ನಿರೀಕ್ಷೆಯಿದೆ. ಉತ್ತರ ಗುಜರಾತ್ನ ಎರಡು ಸಮೂಹಗಳು ಆಲೂಗಡ್ಡೆ ಉತ್ಪಾದನೆಗೆ ಆದ್ಯತೆ ನೀಡಲಿವೆ.
ಇದೇ ದಿನ ಕೆವಾಡಿಯಾದ ಏಕತಾ ನಗರದಲ್ಲಿ ಭಾರತ ಪರ್ವ-2026ಕ್ಕೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ನವೆಂಬರ್ 15ರವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜಾನಪದ ಕಲೆ, ಸಾಂಪ್ರದಾಯಿಕ ಆಹಾರ, ಕರಕುಶಲ ವಸ್ತುಗಳು ಹಾಗೂ ಪ್ರವಾಸಿ ತಾಣಗಳನ್ನು ಪ್ರದರ್ಶಿಸಲಾಗುತ್ತದೆ. ಸಂಜೆ ದೇಶದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಏಕತೆಯನ್ನು ಬಿಂಬಿಸುವ ಏಕತಾ ಪ್ರಕಾಶ ಪರ್ವ ಕಾರ್ಯಕ್ರಮದಲ್ಲಿಯೂ ಪಾಲ್ಗೊಳ್ಳಲಿದ್ದಾರೆ.
**ಅ. 31ರಂದು ರಾಷ್ಟ್ರೀಯ ಏಕತಾ ದಿನಾಚರಣೆ**
ಅ. 31ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 151ನೇ ಜನ್ಮದಿನದ ಅಂಗವಾಗಿ ನಡೆಯಲಿರುವ ರಾಷ್ಟ್ರೀಯ ಏಕತಾ ದಿನಾಚರಣೆಯಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ. ಏಕತೆಯ ಪ್ರತಿಮೆ ಬಳಿ ಪುಷ್ಪನಮನ ಸಲ್ಲಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಏಕತಾ ನಗರದಲ್ಲಿ 400 ಕೋಟಿ ರೂ.ಗೂ ಅಧಿಕ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ಲೋಕಾರ್ಪಣೆ ನೆರವೇರಿಸಲಿದ್ದಾರೆ.
ಒಳಚರಂಡಿ ಮತ್ತು ನೀರು ಸಂಸ್ಕರಣಾ ಘಟಕಗಳು, ನರ್ಮದಾ ಘಾಟ್ ಅಭಿವೃದ್ಧಿ, ಕಟ್ಟಡಗಳಿಗೆ ಬೆಳಕಿನ ವ್ಯವಸ್ಥೆ, ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದ ಹೋಟೆಲ್ ಹಾಗೂ ಮಳೆಕಾಡು ಸೇರಿದಂತೆ ಪ್ರವಾಸೋದ್ಯಮ ಸೌಲಭ್ಯಗಳು ಈ ಯೋಜನೆಗಳಲ್ಲಿ ಸೇರಿವೆ. ಶೂನ್ಯ ತ್ಯಾಜ್ಯ ನಿರ್ವಹಣೆ, ಪರಿಸರ ಪ್ರವಾಸೋದ್ಯಮ ಮತ್ತು ರಸ್ತೆ ಅಭಿವೃದ್ಧಿ ಯೋಜನೆಗಳಿಗೂ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ.
ಈ ವರ್ಷದ ರಾಷ್ಟ್ರೀಯ ಏಕತಾ ದಿನದ ಪಥಸಂಚಲನದಲ್ಲಿ ಎಡಪಂಥೀಯ ಉಗ್ರವಾದದ ವಿರುದ್ಧ ಭದ್ರತಾ ಪಡೆಗಳು ಸಾಧಿಸಿರುವ ಯಶಸ್ಸು ಹಾಗೂ ಈ ಹಿಂದೆ ಉಗ್ರವಾದದಿಂದ ಪ್ರಭಾವಿತವಾಗಿದ್ದ ಪ್ರದೇಶಗಳಲ್ಲಿ ಶಾಂತಿ, ಭದ್ರತೆ ಮತ್ತು ಅಭಿವೃದ್ಧಿಯ ದಿಕ್ಕಿನಲ್ಲಿ ಆಗಿರುವ ಬದಲಾವಣೆಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ.
ರಾಷ್ಟ್ರೀಯ ನಾಟಕ ಶಾಲೆಯ ವತಿಯಿಂದ 'ನಕ್ಸಲ್ ಮುಕ್ತ ಭಾರತ' ವಿಷಯದಡಿ ವಿಶೇಷ ನಾಟಕ ಪ್ರದರ್ಶನ ನಡೆಯಲಿದೆ. ಎಡಪಂಥೀಯ ಉಗ್ರವಾದದಿಂದ ಪ್ರಭಾವಿತವಾಗಿದ್ದ 126 ಜಿಲ್ಲೆಗಳ ಸುಮಾರು 2,000 ಕಲಾವಿದರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಪಥಸಂಚಲನದ ಸ್ತಬ್ಧಚಿತ್ರಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮುಖ್ಯ ವಿಷಯ 'ವಂದೇ ಮಾತರಂ' ಆಗಿರಲಿದೆ. ದೇಶದ ವಿವಿಧ ಭಾಗಗಳಿಂದ ಆಗಮಿಸುವ ಸುಮಾರು 5,000 ಕಲಾವಿದರು ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ಕಲೆ, ಸಂಗೀತ, ನೃತ್ಯ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.