ಆನೆ ಪಾರ್ಕ್ ಸ್ವಚ್ಛತಾ ಕಾರ್ಯಕ್ಕೆ ರಾಜಕೀಯ ಬಣ್ಣ; ಶಾಸಕ ಅಶ್ವತ್ಥನಾರಾಯಣ ಹೆಸರಿನ ಬ್ಯಾನರ್ ಗೆ ಆಕ್ಷೇಪ
ಮಲ್ಲೇಶ್ವರಂನ ಆನೆ ಪಾರ್ಕ್ ಸ್ವಚ್ಛತಾ ಕಾರ್ಯದಲ್ಲಿ ಸ್ಥಳೀಯ ನಿವಾಸಿಗಳು ಮತ್ತು ಸ್ವಯಂಸೇವಕರು ಶ್ರಮವಹಿಸಿದ ಬೆನ್ನಲ್ಲೇ ಬಿಜೆಪಿ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ಹೆಸರಿನ ಬ್ಯಾನರ್ ಅಳವಡಿಕೆ ವಿವಾದಕ್ಕೆ ಕಾರಣವಾಗಿದೆ. ನಾಗರಿಕರ ಸೇವೆಗೆ ರಾಜಕೀಯ ಶ್ರೇಯಸ್ಸು ಪಡೆಯಲಾಗುತ್ತಿದೆ ಎಂದು ಸ್ವಯಂಸೇವಕರು ಆ
Malleswaram-Ane-Park-Cleaning-Credit-Row-BJP-MLA-Banner-Sparks-Controversy


ಬೆಂಗಳೂರು, 30 ಅಕ್ಟೋಬರ್ (ಹಿ.ಸ.):

ಮಲ್ಲೇಶ್ವರಂನ ಆನೆ ಪಾರ್ಕ್ ಸ್ವಚ್ಛತೆ ಮತ್ತು ಅಭಿವೃದ್ಧಿ ಕಾರ್ಯಕ್ಕೆ ರಾಜಕೀಯ ಬಣ್ಣ ಬಳಿದಿರುವ ಆರೋಪ ಕೇಳಿಬಂದಿದ್ದು, ನಾಗರಿಕರು ಹಾಗೂ ಸ್ವಯಂಸೇವಕರು ಒಟ್ಟಾಗಿ ಕೈಗೊಂಡ ಸ್ವಚ್ಛತಾ ಕಾರ್ಯದ ಮರುದಿನವೇ ಉದ್ಯಾನದಲ್ಲಿ ಬಿಜೆಪಿ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ಹೆಸರಿನ ಬ್ಯಾನರ್ ಕಾಣಿಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.

ಮಲ್ಲೇಶ್ವರಂನ 9ನೇ ಕ್ರಾಸ್ನಲ್ಲಿರುವ ಸುಮಾರು 60 ವರ್ಷಗಳಷ್ಟು ಹಳೆಯದಾದ ಆನೆ ಪಾರ್ಕ್ ಕಳೆದ ಎರಡು ದಶಕಗಳಿಂದ ಸಮರ್ಪಕ ನಿರ್ವಹಣೆಯಿಲ್ಲದೆ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

ಉದ್ಯಾನದ ದುಸ್ಥಿತಿಯನ್ನು ಗಮನಿಸಿದ ಸ್ಥಳೀಯರು ಹಾಗೂ ಸ್ವಯಂಸೇವಕರಾದ ಪ್ರೀತಿ ಸುಂದರರಾಜನ್ ಮತ್ತು ಅನೂಪ್ ಅಯ್ಯಂಗಾರ್ ಅವರು ಸ್ವಯಂಪ್ರೇರಿತವಾಗಿ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದರು.

ಈ ಕಾರ್ಯಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಸಹಕಾರವೂ ದೊರೆತಿತ್ತು. ಅಲ್ಲದೆ, ಕೆಲವರು ತಮ್ಮ ಸ್ವಂತ ಹಣವನ್ನೂ ವೆಚ್ಚ ಮಾಡಿ ಉದ್ಯಾನದ ಸ್ವಚ್ಛತೆ ಮತ್ತು ಸುಧಾರಣೆಗೆ ಕೈಜೋಡಿಸಿದ್ದರು ಎನ್ನಲಾಗಿದೆ.

ಆದರೆ, ಸ್ವಚ್ಛತಾ ಕಾರ್ಯ ನಡೆದ ಮರುದಿನವೇ ಉದ್ಯಾನದಲ್ಲಿ ಬಿಜೆಪಿ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ಹೆಸರಿನ ಬ್ಯಾನರ್ ಅಳವಡಿಸಿರುವುದು ಸ್ವಯಂಸೇವಕರು ಹಾಗೂ ಸ್ಥಳೀಯ ನಿವಾಸಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

'ನಾಗರಿಕರ ಪರಿಶ್ರಮಕ್ಕೆ ಮನ್ನಣೆ ಸಿಗಬೇಕು' ಎಂಬುದು ಸ್ವಯಂಸೇವಕರ ಪ್ರಮುಖ ಆಗ್ರಹವಾಗಿದೆ. ತಮ್ಮ ಸಮಯ, ಶ್ರಮ ಮತ್ತು ಹಣವನ್ನು ವಿನಿಯೋಗಿಸಿ ಸಾರ್ವಜನಿಕ ಸ್ಥಳದ ಅಭಿವೃದ್ಧಿಗೆ ಕೈಜೋಡಿಸಿದ ನಾಗರಿಕರ ಪ್ರಯತ್ನವನ್ನು ಗುರುತಿಸುವ ಬದಲು ರಾಜಕೀಯ ನಾಯಕರು ಅದರ ಶ್ರೇಯಸ್ಸು ಪಡೆಯಲು ಮುಂದಾಗಿರುವುದು ಸರಿಯಲ್ಲ ಎಂದು ಸ್ವಯಂಸೇವಕರಾದ ಪ್ರೀತಿ ಸುಂದರರಾಜನ್ ಆಕ್ಷೇಪಿಸಿದ್ದಾರೆ.

ಸಾರ್ವಜನಿಕ ಉದ್ಯಾನವನಗಳ ನಿರ್ವಹಣೆ ಮತ್ತು ಅಭಿವೃದ್ಧಿ ಜನಪ್ರತಿನಿಧಿಗಳು ಹಾಗೂ ನಾಗರಿಕ ಸಂಸ್ಥೆಗಳ ಪ್ರಮುಖ ಜವಾಬ್ದಾರಿಯಾಗಿದೆ.

ಉದ್ಯಾನವು ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾಗ ಗಮನಹರಿಸದವರು, ನಾಗರಿಕರು ಸ್ವಯಂಪ್ರೇರಿತವಾಗಿ ಸ್ವಚ್ಛತಾ ಕಾರ್ಯ ಕೈಗೊಂಡ ಬಳಿಕ ತಮ್ಮ ಹೆಸರಿನ ಬ್ಯಾನರ್ ಹಾಕಿಸಿಕೊಂಡಿರುವುದೇಕೆ ಎಂದು ನಿವಾಸಿಗಳು ಪ್ರಶ್ನಿಸಿದ್ದಾರೆ.

ರಾಜಕೀಯ ಶ್ರೇಯಸ್ಸಿನ ವಿವಾದಕ್ಕೆ ಅವಕಾಶ ನೀಡದೆ, ಜನಪ್ರತಿನಿಧಿಗಳು ನಾಗರಿಕರ ಇಂತಹ ಸಕಾರಾತ್ಮಕ ಪ್ರಯತ್ನಗಳಿಗೆ ಬೆಂಬಲ ನೀಡಬೇಕು ಎಂದು ಸ್ಥಳೀಯರು ಮತ್ತು ಸ್ವಯಂಸೇವಕರು ಆಗ್ರಹಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande