ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳ ದಾಳಿ
ರಾಜ್ಯಾದ್ಯಂತ 45 ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳ ಮೇಲೆ ಆಹಾರ ಸುರಕ್ಷತೆ ಇಲಾಖೆ ದಿಢೀರ್ ತಪಾಸಣೆ ನಡೆಸಿದ್ದು, ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ 24 ಘಟಕಗಳಿಗೆ ನೋಟಿಸ್ ನೀಡಿದೆ. ಸ್ವಚ್ಛತೆಯ ಕೊರತೆಯಿಂದ ಮುಳಬಾಗಿಲಿನ ಒಂದು ಘಟಕವನ್ನು ಬಂದ್ ಮಾಡಲಾಗಿದ್ದು, 32 ನೀರಿನ ಮಾದರಿಗಳನ್ನು ಪರೀಕ್ಷೆಗೆ ಕಳುಹಿ
Karnataka-Packaged-Drinking-Water-Units-Inspection-24-Notices-One-Unit-Shut


ಬೆಂಗಳೂರು, 30 ಅಕ್ಟೋಬರ್ (ಹಿ.ಸ.):

ರಾಜ್ಯದಲ್ಲಿ ಪ್ಯಾಕೇಜ್ಡ್ ಕುಡಿಯುವ ನೀರಿನ ಗುಣಮಟ್ಟ ಮತ್ತು ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ರಾಜ್ಯಾದ್ಯಂತ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಿದೆ.

ಒಟ್ಟು 45 ಕುಡಿಯುವ ನೀರಿನ ಉತ್ಪಾದನಾ ಘಟಕಗಳ ಮೇಲೆ ದಿಢೀರ್ ದಾಳಿ ನಡೆಸಲಾಗಿದ್ದು, ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ 24 ಘಟಕಗಳಿಗೆ ನೋಟಿಸ್ ನೀಡಲಾಗಿದೆ. ಸ್ವಚ್ಛತೆಯ ಕೊರತೆ ಕಂಡುಬಂದ ಕೋಲಾರ ಜಿಲ್ಲೆಯ ಮುಳಬಾಗಿಲಿನ ಒಂದು ಘಟಕವನ್ನು ಬಂದ್ ಮಾಡಲಾಗಿದೆ.

ರಾಜ್ಯಾದ್ಯಂತ ನಡೆದ ತಪಾಸಣೆ ವೇಳೆ ಒಟ್ಟು 32 ನೀರಿನ ಮಾದರಿಗಳನ್ನು ಸಂಗ್ರಹಿಸಿ, ಗುಣಮಟ್ಟ ಮತ್ತು ಸುರಕ್ಷತೆಯ ಪರಿಶೀಲನೆಗಾಗಿ ಸರ್ಕಾರಿ ಆಹಾರ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.

ಹಲವು ಘಟಕಗಳಲ್ಲಿ ಉತ್ಪಾದನಾ ಸ್ಥಳಗಳು ಅಸ್ವಚ್ಛವಾಗಿರುವುದು, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್ಎಸ್ಎಸ್ಎಐ) ಕಡ್ಡಾಯ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವುದು, ಬಾಟಲಿಗಳ ಲೇಬಲ್ಗಳಲ್ಲಿ ದೋಷಗಳು ಕಂಡುಬಂದಿವೆ.

ಇದಲ್ಲದೆ, ಕೀಟ ನಿಯಂತ್ರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಿರ್ವಹಿಸದಿರುವುದು ಹಾಗೂ ನೀರಿನ ಪ್ಯಾಕಿಂಗ್ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿ ಕಡ್ಡಾಯ ವೈದ್ಯಕೀಯ ಕ್ಷಮತಾ ಪ್ರಮಾಣಪತ್ರ ಹೊಂದಿರದಿರುವುದು ತಪಾಸಣೆ ವೇಳೆ ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸಿದ 24 ಘಟಕಗಳಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಮೈಸೂರು ಮತ್ತು ದಾವಣಗೆರೆಯ ಘಟಕಗಳಲ್ಲಿ ತಪ್ಪು ಲೇಬಲ್ ಹೊಂದಿದ್ದ ನೀರಿನ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಹೇಳಿಕೆ ನೀಡಿದ್ದು, “ನನ್ನ ಸೂಚನೆಯ ಮೇರೆಗೆ ರಾಜ್ಯದ 45 ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ವಿಶೇಷ ತಪಾಸಣೆ ನಡೆಸಿದೆ. 32 ನೀರಿನ ಮಾದರಿಗಳನ್ನು ಸರ್ಕಾರಿ ಪ್ರಯೋಗಾಲಯಗಳಿಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ.

ಸ್ವಚ್ಛತೆಯ ಕೊರತೆ, ಸಿಬ್ಬಂದಿಯ ವೈದ್ಯಕೀಯ ಪ್ರಮಾಣಪತ್ರಗಳ ಅಭಾವ, ಎಫ್ಎಸ್ಎಸ್ಎಐ ಪರವಾನಗಿ ಇಲ್ಲದಿರುವುದು, ಲೇಬಲ್ ದೋಷಗಳು ಹಾಗೂ ಕೀಟ ನಿಯಂತ್ರಣ ದಾಖಲೆಗಳ ಕೊರತೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ 24 ಘಟಕಗಳಿಗೆ ನೋಟಿಸ್ ನೀಡಲಾಗಿದೆ” ಎಂದು ತಿಳಿಸಿದ್ದಾರೆ.

“ಕುಡಿಯುವ ನೀರಿನ ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ನಿಯಮ ಉಲ್ಲಂಘನೆ ಮಾಡಿದವರು ತಪ್ಪಿತಸ್ಥರೆಂದು ಸಾಬೀತಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು.

ರಾಜ್ಯಾದ್ಯಂತ ಇಂತಹ ದಿಢೀರ್ ತಪಾಸಣೆಗಳನ್ನು ನಿರಂತರವಾಗಿ ಮುಂದುವರಿಸಲಾಗುವುದು” ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ, ಗ್ರಾಹಕರು ಪ್ಯಾಕೇಜ್ಡ್ ಕುಡಿಯುವ ನೀರನ್ನು ಖರೀದಿಸುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ಇಲಾಖೆ ಮನವಿ ಮಾಡಿದೆ.

ಬಾಟಲಿಯ ಮೇಲೆ ಎಫ್ಎಸ್ಎಸ್ಎಐ ಪರವಾನಗಿ ಸಂಖ್ಯೆ, ಐಎಸ್ಐ ಪ್ರಮಾಣೀಕರಣ ಚಿಹ್ನೆ, ಉತ್ಪಾದನಾ ದಿನಾಂಕ ಹಾಗೂ ಬಾಟಲಿಯ ಮುಚ್ಚಳದ ಸುರಕ್ಷತಾ ಸೀಲ್ ಸಮರ್ಪಕವಾಗಿರುವುದನ್ನು ಪರಿಶೀಲಿಸಬೇಕು.

ಕಳಪೆ ಗುಣಮಟ್ಟದ, ಸೀಲ್ ತೆರೆಯಲ್ಪಟ್ಟ ಅಥವಾ ಅನುಮಾನಾಸ್ಪದ ನೀರಿನ ಬಾಟಲಿಗಳು ಕಂಡುಬಂದಲ್ಲಿ ಇಲಾಖೆಯ ಅಧಿಕೃತ ದೂರು ವ್ಯವಸ್ಥೆ ಅಥವಾ ನಿಗದಿತ ಕ್ಯೂಆರ್ ಕೋಡ್ ಮೂಲಕ ದೂರು ಸಲ್ಲಿಸುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande