ಪ್ರಾದೇಶಿಕ ನಗರಗಳಲ್ಲಿ ಕೈಗಾರಿಕೆ, ಉದ್ಯೋಗ ಸೃಷ್ಟಿಗೆ ಆದ್ಯತೆ:ಸಿಎಂ
ಬೆಂಗಳೂರು, 30 ಅಕ್ಟೋಬರ್ (ಹಿ.ಸ.): ರಾಜ್ಯದ ಎಲ್ಲ ನಗರಗಳಲ್ಲೂ ಸ್ಥಳೀಯ ಸಾಮರ್ಥ್ಯಕ್ಕೆ ಅನುಗುಣವಾಗಿ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗಾವಕಾಶ ಸೃಷ್ಟಿಸಲು ಸರ್ಕಾರ ಆದ್ಯತೆ ನೀಡಲಿದೆ. ಬೆಂಗಳೂರು ಹೊರತಾಗಿಯೂ ರಾಜ್ಯದ ವಿವಿಧ ನಗರಗಳಲ್ಲಿ ಕೈಗಾರಿಕೆ, ಮಾಹಿತಿ ತಂತ್ರಜ್ಞಾನ ಮತ್ತು ಸೇವಾ ಕ್ಷೇತ್ರಗಳನ್ನು
ಕರ್ನಾಟಕ ರಾಜ್ಯ ಪ್ರಾದೇಶಿಕ ನಗರೀಕರಣ ಯೋಜನೆ-2047ರ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ


ಬೆಂಗಳೂರು, 30 ಅಕ್ಟೋಬರ್ (ಹಿ.ಸ.):

ರಾಜ್ಯದ ಎಲ್ಲ ನಗರಗಳಲ್ಲೂ ಸ್ಥಳೀಯ ಸಾಮರ್ಥ್ಯಕ್ಕೆ ಅನುಗುಣವಾಗಿ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗಾವಕಾಶ ಸೃಷ್ಟಿಸಲು ಸರ್ಕಾರ ಆದ್ಯತೆ ನೀಡಲಿದೆ. ಬೆಂಗಳೂರು ಹೊರತಾಗಿಯೂ ರಾಜ್ಯದ ವಿವಿಧ ನಗರಗಳಲ್ಲಿ ಕೈಗಾರಿಕೆ, ಮಾಹಿತಿ ತಂತ್ರಜ್ಞಾನ ಮತ್ತು ಸೇವಾ ಕ್ಷೇತ್ರಗಳನ್ನು ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಕರ್ನಾಟಕ ರಾಜ್ಯ ಪ್ರಾದೇಶಿಕ ನಗರೀಕರಣ ಯೋಜನೆ-2047ರ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಕಬ್ಬಿಣದ ಅದಿರು ಆಧಾರಿತ ಉಕ್ಕು ಉದ್ಯಮ, ಹುಬ್ಬಳ್ಳಿ-ಧಾರವಾಡದಲ್ಲಿ ವಿದ್ಯುತ್ ವಾಹನಗಳ ಉತ್ಪಾದನೆ ಹಾಗೂ ಮಂಗಳೂರಿನಲ್ಲಿ ದತ್ತಾಂಶ ಕೇಂದ್ರ ಸ್ಥಾಪನೆ ಸೇರಿದಂತೆ ವಿವಿಧ ನಗರಗಳ ಸಾಮರ್ಥ್ಯಕ್ಕೆ ತಕ್ಕಂತೆ ಹೂಡಿಕೆ ಆಕರ್ಷಿಸಲು ಉದ್ದೇಶಿಸಲಾಗಿದೆ ಎಂದರು.

ಮೈಸೂರು, ಬೆಳಗಾವಿ, ಧಾರವಾಡ, ಮಂಗಳೂರು ಸೇರಿದಂತೆ ಬೆಂಗಳೂರು ಹೊರಗಿನ ನಗರಗಳಲ್ಲಿಯೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಉದ್ಯಮಗಳನ್ನು ಬೆಳೆಸಬೇಕು. 'ಬೆಂಗಳೂರು ಮೀರಿದ ಬೆಳವಣಿಗೆ' ಆಶಯದಡಿ ಈ ಪ್ರಯತ್ನಗಳಿಗೆ ಮತ್ತಷ್ಟು ವೇಗ ನೀಡಲಾಗುವುದು. ಖಾಸಗಿ ಹೂಡಿಕೆದಾರರಿಗೆ ಸೂಕ್ತ ಅವಕಾಶ ಕಲ್ಪಿಸುವ ಮೂಲಕ ಸ್ಥಳೀಯ ಯುವಜನರಿಗೆ ಉದ್ಯೋಗ ದೊರೆಯುವಂತೆ ಮಾಡಬೇಕು ಎಂದು ತಿಳಿಸಿದರು.

ನಗರಗಳ ಸಂಚಾರ ದಟ್ಟಣೆ ಕಡಿಮೆ ಮಾಡಲು ದೊಡ್ಡ ನಗರಗಳಿಂದ ಸಣ್ಣ ಪಟ್ಟಣಗಳವರೆಗೆ ವರ್ತುಲ ರಸ್ತೆ ನಿರ್ಮಿಸುವ ಚಿಂತನೆಯಿದೆ. ಪಟ್ಟಣಗಳ ಹೊರವಲಯದಲ್ಲಿ ಸಾಧ್ಯವಾದಷ್ಟು ಒಂದು ಕಿಲೋಮೀಟರ್ ಅಂತರದಲ್ಲಿ ವರ್ತುಲ ರಸ್ತೆ ನಿರ್ಮಿಸುವ ಉದ್ದೇಶವಿದೆ. ಇದರಿಂದ ವಾಹನಗಳು ಮತ್ತು ಬಸ್ಸುಗಳು ಪಟ್ಟಣಗಳ ಒಳಗೆ ಸಿಲುಕಿಕೊಳ್ಳದೆ ಸುಗಮವಾಗಿ ಸಂಚರಿಸಲು ಅನುಕೂಲವಾಗಲಿದೆ ಎಂದರು.

ನಗರ ಯೋಜನೆಗೆ ಸಂಬಂಧಿಸಿದ ತಜ್ಞರ ಕೊರತೆ ನೀಗಿಸಲು ಸರ್ಕಾರದ ವತಿಯಿಂದಲೇ ಪ್ರತ್ಯೇಕ ನಗರ ಯೋಜನಾ ಕಾಲೇಜು ಆರಂಭಿಸಲು ಸಿದ್ಧತೆ ನಡೆಸಲಾಗುವುದು. ನಗರಗಳ ಭವಿಷ್ಯದ ಬೆಳವಣಿಗೆಗೆ ಪರಿಣತ ಮಾನವ ಸಂಪನ್ಮೂಲ ಅಗತ್ಯವಿದೆ ಎಂದು ಹೇಳಿದರು.

ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಪ್ರವಾಸೋದ್ಯಮ ಅಭಿವೃದ್ಧಿಗೂ ಹೊಸ ಪ್ರವಾಸೋದ್ಯಮ ನೀತಿ ರೂಪಿಸಲಾಗುತ್ತಿದೆ. ಸುಮಾರು 300 ಕಿ.ಮೀ. ಉದ್ದದ ಕರಾವಳಿ ಪ್ರದೇಶದ ಪ್ರವಾಸೋದ್ಯಮ ಸಾಮರ್ಥ್ಯ ಬಳಸಿಕೊಳ್ಳಬೇಕು. ಕೃಷಿ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ರಫ್ತಿಗೂ ಹೆಚ್ಚಿನ ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande