
ಜೋಶಿಮಠ, (ಉತ್ತರಾಖಾಂಡ) 30 ಅಕ್ಟೋಬರ್ (ಹಿ.ಸ.):
ಉತ್ತರಾಖಂಡದ ಚಮೋಲಿ ಜಿಲ್ಲೆಯ ಬದರಿನಾಥ ಧಾಮದಿಂದ ಡೆಹ್ರಾಡೂನ್ನ ಸಹಸ್ರಧಾರಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಶುಕ್ರವಾರ ಜೋಶಿಮಠದ ಚಾಯಿನ್ ಗ್ರಾಮದ ಸಮೀಪ ಪತನಗೊಂಡಿದ್ದು, ಪೈಲಟ್ ಸೇರಿದಂತೆ ಅದರಲ್ಲಿದ್ದ ಆರು ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದಲ್ಲಿ (ಸಿಸಿಬಿ) ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅರುಣ್ ಸಾಲುಂಕೆ ಕೂಡ ಸೇರಿದ್ದಾರೆ.
ಟ್ರಾನ್ಸ್ ಭಾರತ್ ಏವಿಯೇಷನ್ಗೆ ಸೇರಿದ ವಿಟಿ-ಎಚ್ಸಿಎಕ್ಸ್ ನೋಂದಣಿ ಸಂಖ್ಯೆಯ ಹೆಲಿಕಾಪ್ಟರ್ ಶುಕ್ರವಾರ ಮಧ್ಯಾಹ್ನ 1.14ಕ್ಕೆ ಬದರಿನಾಥ ಧಾಮದಿಂದ ಸಹಸ್ರಧಾರ ಹೆಲಿಪೋರ್ಟ್ಗೆ ಪ್ರಯಾಣ ಆರಂಭಿಸಿತ್ತು. ಜೋಶಿಮಠ ಕಣಿವೆಯ ಮೇಲ್ಭಾಗದಲ್ಲಿ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಹೆಲಿಕಾಪ್ಟರ್ನೊಂದಿಗಿನ ಸಂಪರ್ಕ ಕಡಿತಗೊಂಡಿತ್ತು. ಅದರ ಪತ್ತೆಹಚ್ಚುವ ವ್ಯವಸ್ಥೆಯೂ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ್ದರಿಂದ ಹೆಲಿಕಾಪ್ಟರ್ನ ಸ್ಥಳ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ.
ಹೆಲಿಕಾಪ್ಟರ್ನಲ್ಲಿ ಪೈಲಟ್ ಕ್ಯಾಪ್ಟನ್ ಹಿಮಾಂಶು ಸೇರಿದಂತೆ ಪ್ರತಾಪ್, ಅರುಣ್, ಶಂಕರ್ ಗೌಡ, ಸುಧೀರ್ ಕೆ. ಮತ್ತು ಎಚ್.ಎಸ್. ನಟರಾಜ್ ಪ್ರಯಾಣಿಸುತ್ತಿದ್ದರು. ಈ ಐವರು ಪ್ರಯಾಣಿಕರು ಬೆಂಗಳೂರಿನ ನಿವಾಸಿಗಳೆಂದು ಪ್ರಯಾಣಿಕರ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು. ಇದೀಗ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ.
ಬೆಳಗಾವಿ ಮೂಲದ ಪೊಲೀಸ್ ಅಧಿಕಾರಿ
ಮೃತರಲ್ಲಿ ಒಬ್ಬರಾಗಿರುವ ಅರುಣ್ ಸಾಲುಂಕೆ ಅವರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅರಟಾಳ ಗ್ರಾಮದ ಮೂಲದವರು. 2007ನೇ ಬ್ಯಾಚ್ನ ಪೊಲೀಸ್ ಅಧಿಕಾರಿಯಾಗಿದ್ದ ಅವರು ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ವಾಸವಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಅರುಣ್ ಸಾಲುಂಕೆ ಅವರು ಇಂದಿರಾನಗರ, ಬಾಣಸವಾಡಿ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಬಳಿಕ ಕೇಂದ್ರ ಅಪರಾಧ ವಿಭಾಗದಲ್ಲಿ (ಸಿಸಿಬಿ) ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರವಾಸದ ಸಂದರ್ಭದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಅವರು ಮೃತಪಟ್ಟಿರುವುದು ಅವರ ಕುಟುಂಬಸ್ಥರು, ಬಂಧುಗಳು ಹಾಗೂ ಪೊಲೀಸ್ ವಲಯದಲ್ಲಿ ಆಘಾತ ಮೂಡಿಸಿದೆ.
ಸೇನೆಯಿಂದ ರಕ್ಷಣಾ ಕಾರ್ಯಾಚರಣೆ
ಹೆಲಿಕಾಪ್ಟರ್ ಪತನದ ಮಾಹಿತಿ ಲಭಿಸುತ್ತಿದ್ದಂತೆ ಚಮೋಲಿ ಜಿಲ್ಲಾಡಳಿತ, ಭಾರತೀಯ ಸೇನೆ ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ (ಎಸ್ಡಿಆರ್ಎಫ್) ಜಂಟಿಯಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದವು. ಎಸ್ಡಿಆರ್ಎಫ್ನ ಜೋಶಿಮಠ ಮತ್ತು ಪಾಂಡುಕೇಶ್ವರ ತಂಡಗಳು ಮಧ್ಯಾಹ್ನ 2.24ಕ್ಕೆ ಘಟನಾ ಸ್ಥಳದತ್ತ ತೆರಳಿದ್ದವು. ಸೇನೆಯ ತಂಡವನ್ನೂ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು.
ಎಲ್ಲ ಹೆಲಿಕಾಪ್ಟರ್ಗಳ ಹಾರಾಟ ಸ್ಥಗಿತ
ಮುನ್ನೆಚ್ಚರಿಕೆ ಕ್ರಮವಾಗಿ ಟ್ರಾನ್ಸ್ ಭಾರತ್ ಏವಿಯೇಷನ್ನ ಎಲ್ಲ ಹೆಲಿಕಾಪ್ಟರ್ಗಳ ಹಾರಾಟವನ್ನು ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರ (ಯುಕಾಡಾ) ಸ್ಥಗಿತಗೊಳಿಸಿದೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಅಪಘಾತದ ಕುರಿತು ಮಾಹಿತಿ ಪಡೆದು ರಕ್ಷಣಾ ಕಾರ್ಯಾಚರಣೆಯನ್ನು ನಿರಂತರವಾಗಿ ಗಮನಿಸುತ್ತಿರುವುದಾಗಿ ತಿಳಿಸಿದ್ದಾರೆ.ಗಾಯಾಳುಗಳಿದ್ದಲ್ಲಿ ಅವರಿಗೆ ತಕ್ಷಣವೇ ಉತ್ತಮ ವೈದ್ಯಕೀಯ ಚಿಕಿತ್ಸೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಯುಕಾಡಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಜೈನ್ ಅವರು ಹೆಲಿಕಾಪ್ಟರ್ ಜೋಶಿಮಠ ಕಣಿವೆಯನ್ನು ದಾಟುವ ಸಂದರ್ಭದಲ್ಲಿ ಸಂಪರ್ಕ ಹಾಗೂ ಪತ್ತೆಹಚ್ಚುವ ವ್ಯವಸ್ಥೆ ಸ್ಥಗಿತಗೊಂಡಿತ್ತು. ತಕ್ಷಣವೇ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು ಎಂದು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.