ನಗರಗಳ ಬೆಳವಣಿಗೆಯೇ ಗ್ರಾಮೀಣಾಭಿವೃದ್ಧಿಗೆ ಶಕ್ತಿ: ಡಿ.ಕೆ. ಶಿವಕುಮಾರ್
ಬೆಂಗಳೂರು, 30 ಅಕ್ಟೋಬರ್ (ಹಿ.ಸ.): ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ನಗರಗಳು ಆರ್ಥಿಕವಾಗಿ ಬಲಿಷ್ಠವಾದರೆ ಮಾತ್ರ ಗ್ರಾಮೀಣ ಪ್ರದೇಶಗಳಿಗೂ ಹೆಚ್ಚಿನ ಅಭಿವೃದ್ಧಿ ಸಂಪನ್ಮೂಲ ಒದಗಿಸಲು ಸಾಧ್ಯ. ನಗರಗಳ ಬೆಳವಣಿಗೆಯಿಂದ ಪಟ್ಟಣಗಳು ಅಭಿವೃದ್ಧಿಯಾಗಬೇಕು, ಪಟ್ಟಣಗಳ ಬೆಳವಣಿಗೆಯಿಂದ ಹಳ್ಳಿಗಳ ಬದುಕು ಸಮೃದ್ಧವ
ಕರ್ನಾಟಕ ರಾಜ್ಯ ಪ್ರಾದೇಶಿಕ ನಗರೀಕರಣ ಯೋಜನೆ-2047'ರ ವರದಿ ಬಿಡುಗಡೆ ಸಮಾರಂಭ


ಬೆಂಗಳೂರು, 30 ಅಕ್ಟೋಬರ್ (ಹಿ.ಸ.):

ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ನಗರಗಳು ಆರ್ಥಿಕವಾಗಿ ಬಲಿಷ್ಠವಾದರೆ ಮಾತ್ರ ಗ್ರಾಮೀಣ ಪ್ರದೇಶಗಳಿಗೂ ಹೆಚ್ಚಿನ ಅಭಿವೃದ್ಧಿ ಸಂಪನ್ಮೂಲ ಒದಗಿಸಲು ಸಾಧ್ಯ. ನಗರಗಳ ಬೆಳವಣಿಗೆಯಿಂದ ಪಟ್ಟಣಗಳು ಅಭಿವೃದ್ಧಿಯಾಗಬೇಕು, ಪಟ್ಟಣಗಳ ಬೆಳವಣಿಗೆಯಿಂದ ಹಳ್ಳಿಗಳ ಬದುಕು ಸಮೃದ್ಧವಾಗಬೇಕು ಎಂಬುದು ಸರ್ಕಾರದ ಅಭಿವೃದ್ಧಿ ಚಿಂತನೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಶುಕ್ರವಾರ 'ಕರ್ನಾಟಕ ರಾಜ್ಯ ಪ್ರಾದೇಶಿಕ ನಗರೀಕರಣ ಯೋಜನೆ-2047'ರ ವರದಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಮುಂದಿನ ಪೀಳಿಗೆಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ದೂರದೃಷ್ಟಿಯ ಅಭಿವೃದ್ಧಿ ಯೋಜನೆ ರೂಪಿಸುವ ಅಗತ್ಯವಿದೆ ಎಂದರು.

ಪ್ರಸ್ತುತ ರಾಜ್ಯದ ಜನಸಂಖ್ಯೆ ಸುಮಾರು 6.9 ಕೋಟಿಯಿದ್ದು, 2047ರ ವೇಳೆಗೆ 7.7ರಿಂದ 7.8 ಕೋಟಿಗೆ ಏರಿಕೆಯಾಗುವ ನಿರೀಕ್ಷೆಯಿದೆ. ಈಗ ರಾಜ್ಯದ ಜನಸಂಖ್ಯೆಯಲ್ಲಿ ಶೇ.46ರಷ್ಟು ಮಂದಿ ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, 2047ರ ವೇಳೆಗೆ ಈ ಪ್ರಮಾಣ ಶೇ.70ಕ್ಕೆ ಏರಿಕೆಯಾಗುವ ಅಂದಾಜಿದೆ. ಇದಕ್ಕೆ ಅನುಗುಣವಾಗಿ ನಗರಗಳ ಮೂಲಸೌಕರ್ಯ, ಸಾರಿಗೆ, ವಸತಿ, ಉದ್ಯೋಗ ಮತ್ತು ಸಾರ್ವಜನಿಕ ಸೇವೆಗಳನ್ನು ಈಗಿನಿಂದಲೇ ವಿಸ್ತರಿಸಬೇಕು ಎಂದು ತಿಳಿಸಿದರು.

ಬೆಂಗಳೂರು ಒಂದೇ ಅಭಿವೃದ್ಧಿಯ ಕೇಂದ್ರವಾಗಬಾರದು. ಕಲಬುರಗಿ, ಶಿವಮೊಗ್ಗ, ಮಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿದಂತೆ ರಾಜ್ಯದ ಎಲ್ಲ ಪ್ರಮುಖ ನಗರಗಳಲ್ಲೂ ಕೈಗಾರಿಕೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸಬೇಕು. ಜನರು ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಬೆಂಗಳೂರಿಗೆ ವಲಸೆ ಬರುವ ಬದಲು ತಮ್ಮ ಊರು, ತಾಲೂಕು ಮತ್ತು ಜಿಲ್ಲೆಗಳಲ್ಲಿಯೇ ಉದ್ಯೋಗ ಪಡೆಯುವ ವಾತಾವರಣ ನಿರ್ಮಿಸಬೇಕು ಎಂದು ಹೇಳಿದರು.

ಈ ಉದ್ದೇಶಕ್ಕಾಗಿ ಉದ್ಯಮ ಕರ್ನಾಟಕ, ಸೇವಾ ಉನ್ನತಿ ಕರ್ನಾಟಕ, ಸಂಚಾರ ಕರ್ನಾಟಕ, ಪರಿಸರ ಕರ್ನಾಟಕ, ಪ್ರತಿಭಾ ಕರ್ನಾಟಕ, ಸಮೃದ್ಧಿ ಕರ್ನಾಟಕ ಮತ್ತು ಡಿಜಿಟಲ್ ಕರ್ನಾಟಕ ಎಂಬ ಏಳು ಆದ್ಯತೆಗಳ ಆಧಾರದಲ್ಲಿ ಯೋಜನೆ ರೂಪಿಸಲಾಗಿದೆ. ಇದು ಮುಂದಿನ ಎರಡು ದಶಕಗಳ ಅಭಿವೃದ್ಧಿಗೆ ಮಾರ್ಗಸೂಚಿಯಾಗಲಿದೆ ಎಂದರು.

ಬೆಂಗಳೂರು ಸೇರಿದಂತೆ ನಗರಗಳಲ್ಲಿ ಸೃಷ್ಟಿಯಾಗುವ ಆದಾಯವನ್ನು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೂ ಬಳಸಬೇಕು. ಐಟಿ, ಜೈವಿಕ ತಂತ್ರಜ್ಞಾನ ಸೇರಿದಂತೆ ವಿವಿಧ ಉದ್ಯಮಗಳಿಂದ ರಾಜ್ಯಕ್ಕೆ ಬರುವ ಆದಾಯದ ಪ್ರಯೋಜನ ಎಲ್ಲ ಪ್ರದೇಶಗಳಿಗೂ ತಲುಪಬೇಕು ಎಂದು ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande