ಒಪ್ಪಂದಗಳಿಂದ ಕಾರ್ಯರೂಪಕ್ಕೆ; ಶರವೇಗದಲ್ಲಿ ಹೂಡಿಕೆ ಅನುಷ್ಠಾನ
ವಿಜಯಪುರ, 30 ಅಕ್ಟೋಬರ್ (ಹಿ.ಸ.) ರಾಜ್ಯದಲ್ಲಿ ಹೂಡಿಕೆದಾರರಿಗೆ ಅನುಕೂಲಕರ ಹಾಗೂ ಕೈಗಾರಿಕಾ ಸ್ನೇಹಿ ವಾತಾವರಣ ನಿರ್ಮಿಸುವ ಮೂಲಕ ಹೂಡಿಕೆ ಒಡಂಬಡಿಕೆಗಳನ್ನು ಕೇವಲ ಕಾಗದದ ಮೇಲಿನ ಒಪ್ಪಂದಗಳಿಗೆ ಸೀಮಿತಗೊಳಿಸದೆ, ಅವುಗಳನ್ನು ತ್ವರಿತವಾಗಿ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಸರ್ಕಾರ ಪರಿಣಾಮಕಾರಿ ಕ್ರಮಗಳ
ಬೃಹತ್ ಹೂಡಿಕೆ


ವಿಜಯಪುರ, 30 ಅಕ್ಟೋಬರ್ (ಹಿ.ಸ.)

ರಾಜ್ಯದಲ್ಲಿ ಹೂಡಿಕೆದಾರರಿಗೆ ಅನುಕೂಲಕರ ಹಾಗೂ ಕೈಗಾರಿಕಾ ಸ್ನೇಹಿ ವಾತಾವರಣ ನಿರ್ಮಿಸುವ ಮೂಲಕ ಹೂಡಿಕೆ ಒಡಂಬಡಿಕೆಗಳನ್ನು ಕೇವಲ ಕಾಗದದ ಮೇಲಿನ ಒಪ್ಪಂದಗಳಿಗೆ ಸೀಮಿತಗೊಳಿಸದೆ, ಅವುಗಳನ್ನು ತ್ವರಿತವಾಗಿ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಸರ್ಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಹೂಡಿಕೆದಾರರು ಹಾಗೂ ಸರ್ಕಾರದ ನಡುವೆ ನಡೆಯುವ ಒಡಂಬಡಿಕೆಗಳು ಅಂತಿಮವಾಗಿ ಉದ್ಯಮಗಳ ಸ್ಥಾಪನೆ, ಉತ್ಪಾದನಾ ಚಟುವಟಿಕೆಗಳ ವಿಸ್ತರಣೆ, ಹೊಸ ಉದ್ಯೋಗಾವಕಾಶಗಳ ಸೃಷ್ಟಿ ಮತ್ತು ರಾಜ್ಯದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಬೇಕು ಎಂಬುದು ಸರ್ಕಾರದ ಸ್ಪಷ್ಟ ಗುರಿಯಾಗಿದೆ ಎಂದು ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಕರ್ನಾಟಕವು ದೇಶದ ಪ್ರಮುಖ ಕೈಗಾರಿಕಾ ಹಾಗೂ ಹೂಡಿಕೆ ತಾಣಗಳಲ್ಲಿ ಒಂದಾಗಿ ಹೊರಹೊಮ್ಮಿದ್ದು, ರಾಜ್ಯದಲ್ಲಿ ಉದ್ಯಮ ಸ್ಥಾಪನೆಗೆ ಅಗತ್ಯವಾದ ಮೂಲಸೌಕರ್ಯ, ಕೌಶಲ್ಯಯುತ ಮಾನವ ಸಂಪನ್ಮೂಲ, ಉತ್ತಮ ಸಂಪರ್ಕ ವ್ಯವಸ್ಥೆ ಹಾಗೂ ಹೂಡಿಕೆದಾರರಿಗೆ ಪೂರಕವಾದ ನೀತಿಗಳನ್ನು ರೂಪಿಸಲಾಗಿದೆ. ಇದರಿಂದಾಗಿ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಉದ್ಯಮಿಗಳು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

ಒಪ್ಪಂದದಿಂದ ಉತ್ಪಾದನಾ ಘಟಕದವರೆಗೆ

ಹೂಡಿಕೆ ಒಡಂಬಡಿಕೆಗಳಿಗೆ ಸಹಿ ಹಾಕಿದ ಬಳಿಕ ಅವುಗಳ ಅನುಷ್ಠಾನದ ಮೇಲೂ ಸರ್ಕಾರ ನಿರಂತರ ನಿಗಾ ವಹಿಸುತ್ತಿದೆ. ಸಂಬಂಧಿಸಿದ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ, ಉದ್ಯಮಗಳಿಗೆ ಅಗತ್ಯವಿರುವ ಅನುಮತಿಗಳು, ಭೂಮಿ, ವಿದ್ಯುತ್, ನೀರು, ಸಂಪರ್ಕ ಸೇರಿದಂತೆ ಮೂಲಸೌಕರ್ಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಯೋಜನೆಗಳು ತ್ವರಿತವಾಗಿ ಆರಂಭವಾಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಹೀಗಾಗಿ ಹೂಡಿಕೆದಾರರೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳು ಹಂತ ಹಂತವಾಗಿ ನೆಲದ ಮೇಲೆ ಕಾಣಿಸಿಕೊಳ್ಳುತ್ತಿದ್ದು, ಉತ್ಪಾದನಾ ಘಟಕಗಳ ಸ್ಥಾಪನೆಗೆ ದಾರಿ ಮಾಡಿಕೊಡುತ್ತಿವೆ. ಇದು ಕರ್ನಾಟಕದ ಕೈಗಾರಿಕಾ ವಲಯದಲ್ಲಿ ಹೂಡಿಕೆ ಅನುಷ್ಠಾನಕ್ಕೆ ನೀಡುತ್ತಿರುವ ಆದ್ಯತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಎಂ.ಬಿ. ಪಾಟೀಲ ಹೇಳಿದ್ದಾರೆ.

ಉದ್ಯೋಗ ಸೃಷ್ಟಿಗೆ ಒತ್ತು

ಹೊಸ ಕೈಗಾರಿಕೆಗಳ ಸ್ಥಾಪನೆಯಿಂದ ನೇರ ಹಾಗೂ ಪರೋಕ್ಷ ಉದ್ಯೋಗಾವಕಾಶಗಳು ಹೆಚ್ಚಲಿವೆ. ಸ್ಥಳೀಯ ಯುವಜನರಿಗೆ ಉದ್ಯೋಗ ದೊರೆಯುವುದರ ಜೊತೆಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಸೇವಾ ವಲಯ ಹಾಗೂ ಪೂರೈಕೆ ಸರಪಳಿಗೂ ಉತ್ತೇಜನ ದೊರೆಯಲಿದೆ. ಇದರಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಆರ್ಥಿಕ ಚಟುವಟಿಕೆಗಳು ವಿಸ್ತರಣೆಯಾಗಲಿವೆ ಎಂದು ಸಚಿವರು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಹೂಡಿಕೆಗಳು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಿಗೆ ಹರಿದುಬರುವಂತೆ Beyond Bengaluru ದೃಷ್ಟಿಕೋನಕ್ಕೂ ಸರ್ಕಾರ ಒತ್ತು ನೀಡುತ್ತಿದೆ. ಪ್ರಾದೇಶಿಕ ಸಮತೋಲಿತ ಕೈಗಾರಿಕಾ ಅಭಿವೃದ್ಧಿಯ ಮೂಲಕ ರಾಜ್ಯದ ಎಲ್ಲಾ ಭಾಗಗಳಲ್ಲಿಯೂ ಉದ್ಯೋಗ ಮತ್ತು ಆರ್ಥಿಕ ಅವಕಾಶಗಳನ್ನು ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ಹೇಳಿದ್ದಾರೆ.

ಶರವೇಗದ ಕೈಗಾರಿಕಾ ಪ್ರಗತಿಯ ದ್ಯೋತಕ

ಹೂಡಿಕೆ ಒಡಂಬಡಿಕೆಗಳು ಕಾಗದದ ಮೇಲೆಯೇ ಉಳಿಯದೆ ವಾಸ್ತವಿಕ ಯೋಜನೆಗಳಾಗಿ ರೂಪುಗೊಳ್ಳುತ್ತಿರುವುದು ಕರ್ನಾಟಕದ ಶರವೇಗದ ಕೈಗಾರಿಕಾ ಪ್ರಗತಿಯ ದ್ಯೋತಕವಾಗಿದೆ. ಹೂಡಿಕೆದಾರರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸುವ ಮೂಲಕ ರಾಜ್ಯವನ್ನು ದೇಶದ ಪ್ರಮುಖ ಹೂಡಿಕೆ ತಾಣವಾಗಿ ಇನ್ನಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಮುಂದುವರಿಯಲಿದೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

GIM 2027 ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೂಡಿಕೆ ಆಕರ್ಷಣೆ ಹಾಗೂ ಹೂಡಿಕೆಗಳ ಅನುಷ್ಠಾನಕ್ಕೆ ಮತ್ತಷ್ಟು ವೇಗ ನೀಡುವ ಉದ್ದೇಶ ಹೊಂದಲಾಗಿದೆ. ಕರ್ನಾಟಕದಲ್ಲಿ ಹೂಡಿಕೆ ಮಾಡುವ ಉದ್ಯಮಿಗಳಿಗೆ ಅನುಕೂಲಕರ ವಾತಾವರಣ ಕಲ್ಪಿಸುವುದರ ಜೊತೆಗೆ, ಒಡಂಬಡಿಕೆಗಳು ತ್ವರಿತವಾಗಿ ಯೋಜನೆಗಳಾಗಿ ಪರಿವರ್ತನೆಯಾಗುವಂತೆ ಸರ್ಕಾರ ಕಾರ್ಯನಿರ್ವಹಿಸಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande