ಬಾಗಲಕೋಟೆ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಗೆ ಆಹಾರ ಆಯೋಗದ ಅಧ್ಯಕ್ಷ ಡಾ. ಕೃಷ್ಣ ಅಸಮಾದಾನ
ಬಾಗಲಕೋಟೆ, 30 ಅಕ್ಟೋಬರ್ (ಹಿ.ಸ.) ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಮರ್ಪಕ ಸೇವೆ, ಮೂಲಸೌಕರ್ಯ ಹಾಗೂ ಸಿಬ್ಬಂದಿಯ ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಹಲವು ಅವ್ಯವಸ್ಥೆಗಳು ಕಂಡುಬಂದಿದ್ದು, ಆಸ್ಪತ್ರೆಯ ಮೇಲ್ವಿಚಾರಕರು, ಸರ್ಜನ್ ಸೇರಿದಂತೆ ಸಿಬ್ಬಂದಿ ವರ್ಗದವರ ಕಾರ್ಯವೈಖರಿಗೆ ಕರ್ನಾಟಕ ಆಹಾರ
ಜಿಲ್ಲಾಸ್ಪತ್ರೆ ಅವ್ಯವಸ್ಥೆ ಬಗ್ಗೆ ಕಿಡಿ


ಬಾಗಲಕೋಟೆ, 30 ಅಕ್ಟೋಬರ್ (ಹಿ.ಸ.)

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಮರ್ಪಕ ಸೇವೆ, ಮೂಲಸೌಕರ್ಯ ಹಾಗೂ ಸಿಬ್ಬಂದಿಯ ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಹಲವು ಅವ್ಯವಸ್ಥೆಗಳು ಕಂಡುಬಂದಿದ್ದು, ಆಸ್ಪತ್ರೆಯ ಮೇಲ್ವಿಚಾರಕರು, ಸರ್ಜನ್ ಸೇರಿದಂತೆ ಸಿಬ್ಬಂದಿ ವರ್ಗದವರ ಕಾರ್ಯವೈಖರಿಗೆ ಕರ್ನಾಟಕ ಆಹಾರ ಆಯೋಗದ ಅಧ್ಯಕ್ಷ ಡಾ. ಎಚ್. ಕೃಷ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವಿವಿಧ ವಿಭಾಗಗಳು, ರೋಗಿಗಳ ವಾರ್ಡ್ಗಳು ಹಾಗೂ ಸಾರ್ವಜನಿಕರಿಗೆ ಒದಗಿಸಲಾಗುತ್ತಿರುವ ಸೇವೆಗಳ ಕುರಿತು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ, ರೋಗಿಗಳಿಗೆ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಅವರು, ಸರ್ಕಾರಿ ಆಸ್ಪತ್ರೆ ಎಂದರೆ ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಪ್ರಮುಖ ಆಶ್ರಯವಾಗಿದ್ದು, ಇಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯಕ್ಕೆ ಅವಕಾಶ ನೀಡಬಾರದು ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.

ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸೇವೆ ದೊರೆಯಬೇಕು. ಅಗತ್ಯ ಔಷಧಿಗಳು, ಪರೀಕ್ಷೆಗಳು ಹಾಗೂ ಮೂಲಭೂತ ಸೌಲಭ್ಯಗಳು ಲಭ್ಯವಾಗುವಂತೆ ನೋಡಿಕೊಳ್ಳುವುದು ಆಸ್ಪತ್ರೆಯ ಆಡಳಿತ ಮತ್ತು ಸಿಬ್ಬಂದಿಯ ಜವಾಬ್ದಾರಿಯಾಗಿದೆ.

ಆದರೆ ಪರಿಶೀಲನೆ ಸಂದರ್ಭದಲ್ಲಿ ಕಂಡುಬಂದ ಕೆಲವು ಅಸಮರ್ಪಕ ವ್ಯವಸ್ಥೆಗಳು ಹಾಗೂ ಸಿಬ್ಬಂದಿಯ ಕರ್ತವ್ಯ ನಿರ್ವಹಣೆಯ ಬಗ್ಗೆ ಡಾ. ಕೃಷ್ಣ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಆಸ್ಪತ್ರೆಯ ಮೇಲ್ವಿಚಾರಣೆಯ ಜವಾಬ್ದಾರಿ ಹೊಂದಿರುವ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ರೋಗಿಗಳು ಹಾಗೂ ಅವರ ಸಂಬಂಧಿಕರು ಸಮಸ್ಯೆ ಹೇಳಿಕೊಂಡಾಗ ಅದನ್ನು ನಿರ್ಲಕ್ಷ್ಯ ಮಾಡದೆ ತಕ್ಷಣ ಸ್ಪಂದಿಸಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಪಡೆಯಲು ಬರುವ ಜನರನ್ನು ಅಲೆದಾಡಿಸುವ ಅಥವಾ ಅನಗತ್ಯವಾಗಿ ವಿಳಂಬ ಮಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸರ್ಜನ್ ಸೇರಿದಂತೆ ವೈದ್ಯಕೀಯ ಹಾಗೂ ಇತರೆ ಸಿಬ್ಬಂದಿ ವರ್ಗದವರು ಸಮಯಪಾಲನೆ, ಕರ್ತವ್ಯನಿಷ್ಠೆ ಮತ್ತು ರೋಗಿಗಳೊಂದಿಗೆ ಮಾನವೀಯವಾಗಿ ವರ್ತಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸರ್ಕಾರಿ ಆಸ್ಪತ್ರೆ ಎಂಬ ಕಾರಣಕ್ಕೆ ಸೇವೆಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಡಾ. ಕೃಷ್ಣ ಅವರು ಖಡಕ್ ಸೂಚನೆ ನೀಡಿದರು.

ಆಸ್ಪತ್ರೆಯಲ್ಲಿನ ಸಮಸ್ಯೆಗಳ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಅವರು, ರೋಗಿಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಇರುವ ಕೊರತೆಗಳನ್ನು ಗುರುತಿಸಿ ತಕ್ಷಣ ಪರಿಹರಿಸುವಂತೆ ಸೂಚಿಸಿದರು. ಆಸ್ಪತ್ರೆಯ ಸ್ವಚ್ಛತೆ, ಔಷಧಿ ಲಭ್ಯತೆ, ವೈದ್ಯರು ಹಾಗೂ ಸಿಬ್ಬಂದಿಯ ಹಾಜರಾತಿ, ರೋಗಿಗಳೊಂದಿಗೆ ಸಿಬ್ಬಂದಿಯ ವರ್ತನೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಹೆಚ್ಚಿನ ಗಮನಹರಿಸುವ ಅಗತ್ಯವಿದೆ ಎಂದು ಹೇಳಿದರು.

ಸರ್ಕಾರ ಬಡ ಮತ್ತು ಸಾಮಾನ್ಯ ಜನರಿಗೆ ಉಚಿತ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಸರ್ಕಾರಿ ಆಸ್ಪತ್ರೆಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ನೀಡುತ್ತಿದೆ. ಇಂತಹ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದರೆ ಅದರ ನೇರ ಪರಿಣಾಮ ಬಡ ರೋಗಿಗಳ ಮೇಲೆ ಬೀಳುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.

ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಂಡು, ಮುಂದಿನ ದಿನಗಳಲ್ಲಿ ರೋಗಿಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ವ್ಯವಸ್ಥೆ ಸುಧಾರಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಜನರಿಗೆ ವಿಶ್ವಾಸ ಮೂಡುವ ರೀತಿಯಲ್ಲಿ ಸೇವೆ ನೀಡಬೇಕು ಎಂದು ಡಾ. ಕೃಷ್ಣ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಸಿಬ್ಬಂದಿ ಹಾಗೂ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande