
ವಿಜಯಪುರ, 30 ಅಕ್ಟೋಬರ್ (ಹಿ.ಸ.)
ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಮುಂಗಾರು ಹಂಗಾಮಿನ ಕೊನೆಯ ಹಂತದಲ್ಲಿ ನವೆಂಬರ್ 3ರಿಂದ 12ರವರೆಗೆ ಕಾಲುವೆ ಜಾಲದ ಮೂಲಕ ನೀರು ಹರಿಸಲಾಗುತ್ತಿದ್ದು, ಇಂಡಿ ಶಾಖಾ ಕಾಲುವೆಯ ಕೊನೆಯ ಅಂಚಿನವರೆಗೂ ನಿಗದಿತ ಪ್ರಮಾಣದಲ್ಲಿ ನೀರು ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೇಸ್ವಾನ್ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೀರು ಹರಿಸುವ ಅವಧಿಯಲ್ಲಿ ಯಾವುದೇ ರೀತಿಯ ನೀರು ಪೋಲಾಗದಂತೆ ಹಾಗೂ ಕಾಲುವೆಯ ಕೊನೆಯ ಭಾಗದ ರೈತರಿಗೆ ನೀರಿನ ಕೊರತೆ ಉಂಟಾಗದಂತೆ ಅಧಿಕಾರಿಗಳು ವಿಶೇಷ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ನವೆಂಬರ್ 3ರಿಂದ 12ರವರೆಗೆ ಕಾಲುವೆ ಜಾಲದ ಮೂಲಕ ನೀರು ಹರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ನೀರು ನಿಗದಿತ ಪ್ರಮಾಣದಲ್ಲಿ ಹಾಗೂ ಯಾವುದೇ ಅಡಚಣೆಯಿಲ್ಲದೆ ಕೊನೆಯ ಅಂಚಿನವರೆಗೆ ತಲುಪುವಂತೆ ನಿರಂತರ ನಿಗಾ ವಹಿಸಬೇಕು. ಕಾಲುವೆಯ ವಿವಿಧ ಭಾಗಗಳಲ್ಲಿ ಸೋರಿಕೆ, ಹಾನಿ, ಒಡೆತ ಅಥವಾ ಇತರ ತಾಂತ್ರಿಕ ಸಮಸ್ಯೆಗಳು ಕಂಡುಬಂದಲ್ಲಿ ತಕ್ಷಣವೇ ದುರಸ್ತಿ ಕಾರ್ಯ ಕೈಗೊಳ್ಳಬೇಕು. ನೀರು ಪೋಲಾಗದಂತೆ ಕಾಲುವೆಗಳ ಸಮರ್ಪಕ ನಿರ್ವಹಣೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
172 ಕಿ.ಮೀ. ವ್ಯಾಪ್ತಿಯ ಕೊನೆಯ ಅಂಚಿನವರೆಗೆ ನೀರು ತಲುಪಿಸುವ ಗುರಿ
ಇಂಡಿ ಶಾಖಾ ಕಾಲುವೆಯ ಸುಮಾರು 172 ಕಿ.ಮೀ. ವ್ಯಾಪ್ತಿಯ ಕೊನೆಯ ಅಂಚಿನವರೆಗೆ ನೀರು ತಲುಪಿಸುವುದು ಪ್ರಮುಖ ಆದ್ಯತೆಯಾಗಿದೆ. ಕಾಲುವೆಯ ಮಧ್ಯಭಾಗದಲ್ಲಿ ಅನಧಿಕೃತವಾಗಿ ನೀರು ಎತ್ತುವುದು, ಕಾಲುವೆಯ ನೀರಿನ ಹರಿವಿಗೆ ಅಡ್ಡಿಪಡಿಸುವುದು ಸೇರಿದಂತೆ ಯಾವುದೇ ರೀತಿಯ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಕಾಲುವೆಯ ಆರಂಭಿಕ ಭಾಗದಲ್ಲೇ ಹೆಚ್ಚಿನ ಪ್ರಮಾಣದ ನೀರು ಬಳಕೆಯಾಗದಂತೆ ಹಾಗೂ ಕೊನೆಯ ಭಾಗದ ರೈತರಿಗೆ ಸಮರ್ಪಕ ನೀರು ದೊರೆಯುವಂತೆ ಅಧಿಕಾರಿಗಳು ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ಅವರು ಹೇಳಿದರು.
ನೀರಿನ ಹರಿವಿನ ಸಂದರ್ಭದಲ್ಲಿ ಕಾಲುವೆಗಳಲ್ಲಿ ಉಂಟಾಗಬಹುದಾದ ಸೋರಿಕೆ ಹಾಗೂ ಹಾನಿಯನ್ನು ತಕ್ಷಣ ಗುರುತಿಸಿ ಸರಿಪಡಿಸುವ ವ್ಯವಸ್ಥೆ ಕಲ್ಪಿಸಬೇಕು. ಸಂಬಂಧಿಸಿದ ಅಧಿಕಾರಿಗಳು ಸ್ಥಳದಲ್ಲೇ ಪರಿಶೀಲನೆ ನಡೆಸಿ, ಅಗತ್ಯವಿದ್ದಲ್ಲಿ ತುರ್ತು ದುರಸ್ತಿ ಕಾರ್ಯ ಕೈಗೊಳ್ಳಬೇಕು. ನೀರಿನ ಹರಿವಿಗೆ ಯಾವುದೇ ರೀತಿಯ ಅಡಚಣೆ ಉಂಟಾದರೆ ತಕ್ಷಣ ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ವಾಚ್ ಆ್ಯಂಡ್ ವಾರ್ಡ್ ವ್ಯವಸ್ಥೆ ಬಲಪಡಿಸಲು ಸೂಚನೆ
ನೀರು ಹರಿಸುವ ಅವಧಿಯಲ್ಲಿ ಕಾಲುವೆ ಜಾಲದ ಸೂಕ್ಷ್ಮ ಹಾಗೂ ಸಮಸ್ಯಾತ್ಮಕ ಪ್ರದೇಶಗಳಲ್ಲಿ ವಾಚ್ ಆ್ಯಂಡ್ ವಾರ್ಡ್ ವ್ಯವಸ್ಥೆ ಕಲ್ಪಿಸಿ ನಿರಂತರ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ತಿಳಿಸಿದರು.
ನೀರಿನ ಅನಧಿಕೃತ ಎತ್ತುವಿಕೆ ಹಾಗೂ ಕಾಲುವೆ ನೀರಿನ ಹರಿವಿಗೆ ಅಡ್ಡಿಪಡಿಸುವ ಚಟುವಟಿಕೆಗಳನ್ನು ತಡೆಯಲು ಪೊಲೀಸ್ ಇಲಾಖೆಯ ಸಹಯೋಗ ಪಡೆದುಕೊಳ್ಳಬೇಕು. ಇಂಡಿ ಉಪವಿಭಾಗದ ಡಿವೈಎಸ್ಪಿ ಸೇರಿದಂತೆ ಕೆಂಭಾವಿ, ಸಿಂದಗಿ ಹಾಗೂ ಇತರ ಸಂಬಂಧಿತ ಪೊಲೀಸ್ ಅಧಿಕಾರಿಗಳೊಂದಿಗೆ ನೀರಾವರಿ ಇಲಾಖೆಯ ಅಧಿಕಾರಿಗಳು ನಿರಂತರ ಸಮನ್ವಯ ಸಾಧಿಸಬೇಕು ಎಂದು ಅವರು ಸೂಚಿಸಿದರು.
ಕಾಲುವೆಯ ಸೂಕ್ಷ್ಮ ಪ್ರದೇಶಗಳಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್ ಹಾಗೂ ಗಸ್ತು ವ್ಯವಸ್ಥೆ ಕಲ್ಪಿಸುವ ಮೂಲಕ ನೀರಿನ ಸಮರ್ಪಕ ಹರಿವಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು. ನೀರು ಹರಿಸುವ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಸಂಬಂಧಿಸಿದ ಅಧಿಕಾರಿಗಳು ಪರಸ್ಪರ ಸಂಪರ್ಕದಲ್ಲಿರಬೇಕು ಎಂದು ಹೇಳಿದರು.
ಕೊನೆಯ ಭಾಗದ ರೈತರಿಗೆ ನೀರು ತಲುಪಿಸುವುದು ಆದ್ಯತೆ
ಬಿಡುಗಡೆಯಾದ ನೀರು ನಿಗದಿತ ಮಾರ್ಗದಲ್ಲಿ ಯಾವುದೇ ಅಡಚಣೆಯಿಲ್ಲದೆ ಕಾಲುವೆಯ ಕೊನೆಯ ಭಾಗವನ್ನು ತಲುಪುವಂತೆ ನೀರಾವರಿ ಹಾಗೂ ಪೊಲೀಸ್ ಇಲಾಖೆಗಳು ಜಂಟಿಯಾಗಿ ಕಾರ್ಯನಿರ್ವಹಿಸಬೇಕು. ಮುಂಗಾರು ಹಂಗಾಮಿನ ಕೊನೆಯ ಹಂತದ ನೀರು ಹರಿಸುವ ಅವಧಿಯಾಗಿರುವುದರಿಂದ ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ರೈತರಿಗೆ ನಿಗದಿತ ಪ್ರಮಾಣದ ನೀರು ದೊರೆಯುವಂತೆ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ನೀರು ಹರಿಸುವ ಅವಧಿಯಲ್ಲಿ ಯಾವುದೇ ಸಮಸ್ಯೆ ಕಂಡುಬಂದರೂ ನಿರ್ಲಕ್ಷ್ಯ ವಹಿಸದೆ ತಕ್ಷಣವೇ ಪರಿಹಾರ ಕಂಡುಕೊಳ್ಳಬೇಕು. ಕಾಲುವೆಯ ಆರಂಭದಿಂದ ಕೊನೆಯ ಅಂಚಿನವರೆಗೆ ನೀರಿನ ಹರಿವಿನ ಮೇಲೆ ನಿರಂತರ ನಿಗಾ ಇರಬೇಕು ಎಂದು ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಇಂಡಿ ಉಪವಿಭಾಗಾಧಿಕಾರಿ ಗುರುಶಾಂತ ಸೇರಿದಂತೆ ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಬದ್ರುದ್ದಿನ್ ಸೌದಾಗರ್, ಹೆಸ್ಕಾಂನ ಅಧೀಕ್ಷಕ ಅಭಿಯಂತರ ಸಿದ್ದಪ್ಪ ಬಿಂಜಗೇರಿ, ರಾಂಪುರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಸೋನಾವಣೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಕೆಬಿಜೆಎನ್ಎಲ್ ಅಧಿಕಾರಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande