
ವಿಜಯಪುರ, 30 ಅಕ್ಟೋಬರ್ (ಹಿ.ಸ.)
ಭಾರತದ ಪರಮಾಣು ವಿಜ್ಞಾನ ಕ್ಷೇತ್ರದ ಪಿತಾಮಹ, ಖ್ಯಾತ ವಿಜ್ಞಾನಿ ಹಾಗೂ ದೂರದೃಷ್ಟಿಯ ಸಂಶೋಧಕ ಡಾ. ಹೋಮಿ ಜಹಂಗೀರ್ ಭಾಭಾ ಅವರ ಜನ್ಮದಿನದ ಅಂಗವಾಗಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಗೌರವ ನಮನ ಸಲ್ಲಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಸಚಿವ ಎಂ.ಬಿ. ಪಾಟೀಲ್, ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಡಾ. ಹೋಮಿ ಜಹಂಗೀರ್ ಭಾಭಾ ಅವರು ಸಲ್ಲಿಸಿದ ಅಮೂಲ್ಯ ಸೇವೆಯನ್ನು ಸ್ಮರಿಸಿದ್ದಾರೆ. ವಿಜ್ಞಾನವನ್ನು ಕೇವಲ ಸಂಶೋಧನೆಗೆ ಸೀಮಿತಗೊಳಿಸದೆ, ಅದನ್ನು ರಾಷ್ಟ್ರದ ಪ್ರಗತಿ, ತಾಂತ್ರಿಕ ಸಾಮರ್ಥ್ಯ ಮತ್ತು ಸ್ವಾವಲಂಬನೆಯ ಪ್ರಮುಖ ಶಕ್ತಿಯನ್ನಾಗಿ ರೂಪಿಸುವಲ್ಲಿ ಭಾಭಾ ಅವರು ಮಹತ್ವದ ಪಾತ್ರ ವಹಿಸಿದ್ದರು ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಪರಮಾಣು ಸಂಶೋಧನೆಗೆ ಭದ್ರ ಬುನಾದಿ ಹಾಕಿದ ಡಾ. ಭಾಭಾ, ದೇಶದ ವೈಜ್ಞಾನಿಕ ಸಾಮರ್ಥ್ಯವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಕೊಡುಗೆ ನೀಡಿದರು. ಪರಮಾಣು ಶಕ್ತಿಯನ್ನು ಶಾಂತಿಯುತ ಉದ್ದೇಶಗಳಿಗೆ ಬಳಸುವ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಬಹುದು ಎಂಬ ದೂರದೃಷ್ಟಿಯನ್ನು ಅವರು ಹೊಂದಿದ್ದರು ಎಂದು ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಪರಮಾಣು ಶಕ್ತಿಯ ಶಾಂತಿಯುತ ಬಳಕೆಗಳ ಕುರಿತು ವಿಶ್ವಸಂಸ್ಥೆಯ ಸಮ್ಮೇಳನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಭಾಭಾ, ಅಂತರರಾಷ್ಟ್ರೀಯ ವಿಜ್ಞಾನ ಸಮುದಾಯದಲ್ಲಿ ಭಾರತದ ಸ್ಥಾನಮಾನವನ್ನು ಹೆಚ್ಚಿಸಿದರು. ಇದೇ ವೇಳೆ 1960ರಿಂದ 1963ರವರೆಗೆ ಶುದ್ಧ ಮತ್ತು ಅನ್ವಯಿಕ ಭೌತಶಾಸ್ತ್ರದ ಅಂತರರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ಜಾಗತಿಕ ವೈಜ್ಞಾನಿಕ ಕ್ಷೇತ್ರದಲ್ಲಿ ಭಾರತದ ಪ್ರತಿಷ್ಠೆಯನ್ನು ಮತ್ತಷ್ಟು ಹೆಚ್ಚಿಸಿದರು ಎಂದು ಸಚಿವರು ಸ್ಮರಿಸಿದ್ದಾರೆ.
ಡಾ. ಭಾಭಾ ಅವರ ಕೊಡುಗೆ ಕೇವಲ ಪರಮಾಣು ವಿಜ್ಞಾನಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಭಾರತದಲ್ಲಿ ಅತ್ಯಾಧುನಿಕ ವೈಜ್ಞಾನಿಕ ಸಂಶೋಧನೆಗೆ ಅಗತ್ಯವಾದ ಸಂಸ್ಥೆಗಳು, ಮೂಲಸೌಕರ್ಯ ಮತ್ತು ಪ್ರತಿಭಾವಂತ ವಿಜ್ಞಾನಿಗಳ ಪೀಳಿಗೆಯನ್ನು ಬೆಳೆಸುವ ಮಹತ್ವದ ದೃಷ್ಟಿಕೋನವನ್ನು ಅವರು ಹೊಂದಿದ್ದರು. ಅವರ ಚಿಂತನೆ ಮತ್ತು ಕಾರ್ಯಗಳು ಭಾರತದ ವೈಜ್ಞಾನಿಕ ಪ್ರಗತಿಗೆ ದೀರ್ಘಕಾಲೀನ ದಿಕ್ಕನ್ನು ನೀಡಿವೆ ಎಂದು ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ವಿಜ್ಞಾನ, ಸಂಶೋಧನೆ ಮತ್ತು ಸ್ವಾವಲಂಬನೆಯ ಮೂಲಕ ಬಲಿಷ್ಠ ಭಾರತ ನಿರ್ಮಿಸಬೇಕು ಎಂಬ ಡಾ. ಹೋಮಿ ಭಾಭಾ ಅವರ ದೂರದೃಷ್ಟಿ ಇಂದಿಗೂ ಪ್ರಸ್ತುತವಾಗಿದೆ. ಅವರ ಸಾಧನೆಗಳು ದೇಶದ ಯುವ ವಿಜ್ಞಾನಿಗಳು, ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ ನಿರಂತರ ಸ್ಫೂರ್ತಿಯಾಗಲಿವೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಭಾರತದ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯ ಇತಿಹಾಸದಲ್ಲಿ ಡಾ. ಹೋಮಿ ಜಹಂಗೀರ್ ಭಾಭಾ ಅವರ ಹೆಸರು ಸದಾ ಗೌರವದಿಂದ ಸ್ಮರಿಸಲ್ಪಡುತ್ತದೆ. ಅವರ ಜನ್ಮದಿನದಂದು ಅವರ ಅಪಾರ ಕೊಡುಗೆಗಳನ್ನು ನೆನಪಿಸಿಕೊಂಡು ಗೌರವಪೂರ್ವಕ ನಮನ ಸಲ್ಲಿಸುವುದಾಗಿ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande