
ಬಾಗಲಕೋಟೆ, 30 ಅಕ್ಟೋಬರ್ (ಹಿ.ಸ.)
ಷೇರು ಮಾರುಕಟ್ಟೆ ಹಾಗೂ ಆರಂಭಿಕ ಸಾರ್ವಜನಿಕ ಷೇರು ಕೊಡುಗೆ (ಐಪಿಒ)ಗಳಲ್ಲಿ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ಭಾರಿ ಲಾಭ ಗಳಿಸಬಹುದು ಎಂಬ ಆಮಿಷವೊಡ್ಡಿ ಇಳಕಲ್ ನಗರದ ಪ್ರತಿಷ್ಠಿತ ವೈದ್ಯರೊಬ್ಬರಿಗೆ ಸೈಬರ್ ವಂಚಕರು ಬರೋಬ್ಬರಿ ₹1.06 ಕೋಟಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಹೂಡಿಕೆ ಮಾಡಿದ ಹಣಕ್ಕೆ ₹8.49 ಕೋಟಿಗೂ ಅಧಿಕ ಲಾಭ ಬಂದಿರುವುದಾಗಿ ನಕಲಿ ಆ್ಯಪ್ನಲ್ಲಿ ತೋರಿಸಿ ವೈದ್ಯರನ್ನು ವಂಚಿಸಲಾಗಿದೆ. ಈ ಸಂಬಂಧ ನವನಗರ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರದ ಪ್ರಕಾರ, 2026ರ ಜೂನ್ 29ರಂದು ಅಪರಿಚಿತರು ವೈದ್ಯರ ಮೊಬೈಲ್ ಸಂಖ್ಯೆಯನ್ನು ವಾಟ್ಸ್ಆ್ಯಪ್ ಗುಂಪೊಂದಕ್ಕೆ ಸೇರಿಸಿದ್ದರು. ಈ ಗುಂಪಿನಲ್ಲಿ ಷೇರು ಮಾರುಕಟ್ಟೆ ಮತ್ತು ಐಪಿಒಗಳಲ್ಲಿ ಹಣ ಹೂಡಿಕೆ ಮಾಡಿದರೆ ಅಲ್ಪಾವಧಿಯಲ್ಲಿಯೇ ಭಾರಿ ಲಾಭ ಗಳಿಸಬಹುದು ಎಂಬ ಸಂದೇಶಗಳನ್ನು ನಿರಂತರವಾಗಿ ಕಳುಹಿಸಲಾಗುತ್ತಿತ್ತು. ವಂಚಕರ ಸಂದೇಶಗಳನ್ನು ನಂಬಿದ ವೈದ್ಯರಿಗೆ ನಕಲಿ ಹೂಡಿಕೆ ವೇದಿಕೆಯೊಂದನ್ನು ಪರಿಚಯಿಸಲಾಗಿತ್ತು.
ವಂಚಕರ ಸೂಚನೆಯಂತೆ ವೈದ್ಯರು ತಮ್ಮ ಮೊಬೈಲ್ನಲ್ಲಿ 'ಎನ್ಎಎಂ ಎಎಂಸಿ ಎಚ್ಎನ್ಡಬ್ಲ್ಯು' ಎಂಬ ನಕಲಿ ಆ್ಯಪ್ ಡೌನ್ಲೋಡ್ ಮಾಡಿಕೊಂಡಿದ್ದರು. ಈ ಆ್ಯಪ್ನಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಭಾರಿ ಪ್ರಮಾಣದ ಲಾಭ ಬರುತ್ತಿರುವಂತೆ ತೋರಿಸಲಾಗುತ್ತಿತ್ತು. ಇದನ್ನು ನಿಜವೆಂದು ನಂಬಿದ ವೈದ್ಯರು ವಿವಿಧ ಬ್ಯಾಂಕ್ ಖಾತೆಗಳಿಗೆ ಹಲವು ಹಂತಗಳಲ್ಲಿ ಒಟ್ಟು ₹96,69,262 ವರ್ಗಾಯಿಸಿದ್ದರು.
ವೈದ್ಯರು ಹೂಡಿಕೆ ಮಾಡಿದಂತೆ ನಕಲಿ ಆ್ಯಪ್ನಲ್ಲಿರುವ ಅವರ ಖಾತೆಗೆ ಲಾಭದ ಮೊತ್ತ ಹೆಚ್ಚಾಗುತ್ತಿರುವುದಾಗಿ ಪ್ರದರ್ಶಿಸಲಾಗಿತ್ತು. ಅಂತಿಮವಾಗಿ ₹8,49,79,318 ಲಾಭ ಬಂದಿರುವುದಾಗಿ ತೋರಿಸಲಾಗಿತ್ತು. ಇಷ್ಟೊಂದು ದೊಡ್ಡ ಮೊತ್ತದ ಲಾಭ ಕಂಡ ವೈದ್ಯರು ತಮ್ಮ ಹೂಡಿಕೆ ಹಣದೊಂದಿಗೆ ಲಾಭಾಂಶವನ್ನೂ ಹಿಂಪಡೆಯಲು ಮುಂದಾಗಿದ್ದರು.
ಆದರೆ, ಹಣ ಹಿಂಪಡೆಯಲು ಮುಂದಾದಾಗ ವಂಚಕರು ಮತ್ತೊಂದು ಬೇಡಿಕೆ ಮುಂದಿಟ್ಟಿದ್ದರು. ಹಣ ಬಿಡುಗಡೆ ಮಾಡಬೇಕಾದರೆ ಮೊದಲು ಭದ್ರತಾ ಠೇವಣಿ ರೂಪದಲ್ಲಿ ₹10 ಲಕ್ಷ ಪಾವತಿಸಬೇಕು ಎಂದು ಸೂಚಿಸಿದ್ದರು. ಇದನ್ನು ನಂಬಿದ ವೈದ್ಯರು ಮತ್ತೆ ₹10 ಲಕ್ಷ ಪಾವತಿಸಿದ್ದರು. ಆದರೂ ಹೂಡಿಕೆ ಮಾಡಿದ್ದ ಹಣವಾಗಲಿ, ಆ್ಯಪ್ನಲ್ಲಿ ತೋರಿಸಲಾಗಿದ್ದ ಲಾಭದ ಮೊತ್ತವಾಗಲಿ ವಾಪಸ್ ಬಂದಿಲ್ಲ.
ಇದರಿಂದ ತಾವು ಸೈಬರ್ ವಂಚನೆಗೆ ಒಳಗಾಗಿರುವುದನ್ನು ಅರಿತ ವೈದ್ಯರು ತಕ್ಷಣವೇ ಸೈಬರ್ ಅಪರಾಧಗಳ ತುರ್ತು ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ದಾಖಲಿಸಿದ್ದಾರೆ. ಬಳಿಕ ನವನಗರ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೂಡಿಕೆ ಮತ್ತು ಭದ್ರತಾ ಠೇವಣಿ ಸೇರಿದಂತೆ ವೈದ್ಯರು ಒಟ್ಟು ₹1,06,69,262 ಕಳೆದುಕೊಂಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆಗಳು, ಮೊಬೈಲ್ ಸಂಖ್ಯೆಗಳು, ವಾಟ್ಸ್ಆ್ಯಪ್ ಗುಂಪು ಹಾಗೂ ನಕಲಿ ಆ್ಯಪ್ಗೆ ಸಂಬಂಧಿಸಿದ ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ. ವಂಚನೆಯ ಜಾಲದ ಹಿಂದೆ ಇರುವ ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿಯೂಷ್ ಗೋಯೆಲ್, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ. ವಂಚನೆಯಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಲಾಗುವುದು ಎಂದು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಪೊಲೀಸರ ಎಚ್ಚರಿಕೆ
ಆನ್ಲೈನ್ ಷೇರು ಮಾರುಕಟ್ಟೆ, ಐಪಿಒ ಮತ್ತು ಹೂಡಿಕೆಯ ಹೆಸರಿನಲ್ಲಿ ಅಪರಿಚಿತರು ಕಳುಹಿಸುವ ವಾಟ್ಸ್ಆ್ಯಪ್ ಗುಂಪುಗಳು, ಕೊಂಡಿಗಳು ಹಾಗೂ ಆ್ಯಪ್ಗಳನ್ನು ನಂಬಿ ಹಣ ಹೂಡಿಕೆ ಮಾಡಬಾರದು ಎಂದು ಪೊಲೀಸರು ಎಚ್ಚರಿಸಿದ್ದಾರೆ.
ನಕಲಿ ಆ್ಯಪ್ಗಳಲ್ಲಿ ಲಾಭದ ಮೊತ್ತ ಪ್ರದರ್ಶಿಸಲಾಗುತ್ತಿದೆ ಎಂಬ ಕಾರಣಕ್ಕೆ ಅದನ್ನು ನಿಜವೆಂದು ನಂಬಬಾರದು. ಹಣ ಹಿಂಪಡೆಯಲು ತೆರಿಗೆ, ಭದ್ರತಾ ಠೇವಣಿ ಅಥವಾ ಸೇವಾ ಶುಲ್ಕದ ಹೆಸರಿನಲ್ಲಿ ಹೆಚ್ಚುವರಿ ಹಣ ಕೇಳಿದರೆ ಎಚ್ಚರಿಕೆ ವಹಿಸಬೇಕು. ಸೈಬರ್ ವಂಚನೆಗೆ ಒಳಗಾದವರು ತಕ್ಷಣವೇ 1930 ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸುವುದರ ಜತೆಗೆ ಸಮೀಪದ ಪೊಲೀಸ್ ಠಾಣೆಯಲ್ಲಿಯೂ ಮಾಹಿತಿ ನೀಡಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande