









ಬಳ್ಳಾರಿ, 30 ಅಕ್ಟೋಬರ್ (ಹಿ.ಸ.)
ಯುವಜನತೆ ಸಂವಿಧಾನದ ಆಶಯಗಳನ್ನು ಅರಿತುಕೊಂಡು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಝುಬೇರ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ‘ಅಂತಾರಾಷ್ಟಿಯ ಪ್ರಜಾಪ್ರಭುತ್ವ ದಿನಾಚರಣೆ’ ಅಂಗವಾಗಿ ನಗರದ ಜಿಪಂ ನ ನೂತನ ನಜೀರ್ ಸಾಬ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ‘ಯುವ ಸಂಸತ್’ ಅಣುಕು ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
18 ವರ್ಷ ಮೇಲ್ಪಟ್ಟ ಎಲ್ಲಾ ಅರ್ಹ ಯುವಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಇತ್ತೀಚೆಗೆ ನಡೆದ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಕೈಗೊಂಡು ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ತಿಳಿಸಿದರು.
ಮತದಾನ ಕೇವಲ ಹಕ್ಕು ಮಾತ್ರವಲ್ಲದೆ, ಭವಿಷ್ಯದಲ್ಲಿ ಚುನಾವಣೆಗೆ ಸ್ಪರ್ಧಿಸಿ ಜನಪ್ರತಿನಿಧಿಗಳಾಗಿ ನಾಡನ್ನು ಮುನ್ನಡೆಸುವ ಹೊಣೆಗಾರಿಕೆಯೂ ಯುವಜನತೆಯ ಮೇಲಿದೆ ಎಂದು ತಿಳಿಸಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾತ್ರ, ಶಾಸನ ಸಭೆಗಳ ಕಾರ್ಯವೈಖರಿ ಹಾಗೂ ಸಂವಿಧಾನ ನೀಡಿರುವ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯದ ಹಕ್ಕುಗಳ ಕುರಿತು ಯುವಕರಿಗೆ ವಿವರಿಸಿದರು.
ಅಣಕು ಯುವ ಸಂಸತ್ ಕಾರ್ಯಕ್ರಮಗಳು ಯುವಜನರಲ್ಲಿ ವೇದಿಕೆಯ ಭಯವನ್ನು ಹೋಗಲಾಡಿಸಿ, ಭಾಷಣ ಕಲೆ ಹಾಗೂ ನಾಯಕತ್ವದ ಗುಣಗಳನ್ನು ಪ್ರೇರೇಪಿಸುತ್ತವೆ. ಭಾಗವಹಿಸಿದ ಎಲ್ಲಾ ಯುವ ಪ್ರತಿನಿಧಿಗಳು ಯಾವುದೇ ಅಳುಕಿಲ್ಲದೆ ಧೈರ್ಯ ಹಾಗೂ ಲವಲವಿಕೆಯಿಂದ ಚರ್ಚೆಗಳಲ್ಲಿ ಭಾಗವಹಿಸಬೇಕು ಎಂದು ಪ್ರೋತ್ಸಾಹಿಸಿ, ಶುಭ ಹಾರೈಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಮಬ್ರಹ್ಮಂ ಅವರು, ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ತಮ್ಮದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕಾದರೆ ಮುಖ್ಯವಾಗಿ ವಿಷಯ ಜ್ಞಾನ, ಕೌಶಲ್ಯ, ಉತ್ತಮ ಸಂವಹನ ಮೂರು ಗುಣಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರಲು ಮತ್ತು ಯಶಸ್ವಿಯಾಗಿ ಬೆಳೆಯಲು ಸಾಧ್ಯ. ಕೇವಲ ಕಾಯ್ದಿರಿಸಿದ ಜಾಗದಲ್ಲಿ ಕೂರದೆ, ಸದಾ ಆಡುವ ತಂಡದಲ್ಲಿ ಮುಂಚೂಣಿಯಲ್ಲಿರಬೇಕು ಎಂಬ ಮನೋಭಾವವನ್ನು ಯುವಜನರು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಯುವ ಸಂಸತ್ ಕೇವಲ ಒಂದು ಸ್ಪರ್ಧೆಯಲ್ಲ, ಬದಲಿಗೆ ಇದು ಪ್ರಜಾಪ್ರಭುತ್ವದ ಮೂಲ ಅಡಿಪಾಯವನ್ನು ಯುವ ಪೀಳಿಗೆಗೆ ಪರಿಚಯಿಸುವ ಜೀವಂತ ಪಾಠಶಾಲೆ. ಸಂಸತ್ತಿನ ಕಲಾಪಗಳು ಹೇಗೆ ನಡೆಯುತ್ತವೆ, ಚರ್ಚೆಗಳು ಹೇಗೆ ಸಾಗುತ್ತವೆ ಮತ್ತು ಆಡಳಿತ ಹಾಗೂ ವಿರೋಧ ಪಕ್ಷಗಳು ಸಾರ್ವಜನಿಕ ಸಮಸ್ಯೆಗಳ ಮೇಲೆ ಹೇಗೆ ಸ್ಪಂದಿಸುತ್ತವೆ ಎಂಬುದನ್ನು ಕಲಿಯಲು ಈ ವೇದಿಕೆ ಉತ್ತಮ ಅವಕಾಶ ಕಲ್ಪಿಸಿದೆ ಎಂದರು.
ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳು, ಸಾರ್ವಜನಿಕವಾಗಿ ಮಾತನಾಡುವ ಕಲೆ, ಶಿಸ್ತು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಲು ಯುವ ಸಂಸತ್ ಉಪಯುಕ್ತವಾಗಿದೆ. ಬಳ್ಳಾರಿ ತಾಲೂಕು ಮಟ್ಟದಿಂದ ಆಯ್ಕೆಯಾಗಿ ಜಿಲ್ಲಾ ಮಟ್ಟಕ್ಕೆ ಬಂದ ವಿದ್ಯಾರ್ಥಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿದ ಅವರು, ಮೂಢನಂಬಿಕೆ, ಭ್ರಷ್ಟಾಚಾರ ಹಾಗೂ ತಾರತಮ್ಯ ಮುಕ್ತ ನವ ಭಾರತ ನಿರ್ಮಾಣಕ್ಕೆ ಇಂದಿನ ಯುವಕರ ಪಾತ್ರ ನಿರ್ಣಾಯಕ ಎಂದು ತಿಳಿಸಿದರು.
*ನೈಜ ಸಂಸತ್ತಿನ ಮಾದರಿಯಲ್ಲಿ ಅಣುಕು ಸಂಸತ್ತಿನ ಕಲಾಪ:*
ತಾಲೂಕು ಮಟ್ಟದಿಂದ ಆಯ್ಕೆಯಾಗಿ ಬಂದ ವಿದ್ಯಾರ್ಥಿಗಳು ಮುಖ್ಯಮಂತ್ರಿ, ಸಚಿವರು ಹಾಗೂ ವಿರೋಧ ಪಕ್ಷದ ನಾಯಕರ ಪಾತ್ರಗಳನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿದರು. ಪ್ರಸ್ತುತ ವಿದ್ಯಮಾನಗಳು, ಸರ್ಕಾರದ ನೀತಿಗಳು ಹಾಗೂ ಸಾರ್ವಜನಿಕ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕುರಿತು ವಿದ್ಯಾರ್ಥಿಗಳು ಗಂಭೀರ ಚರ್ಚೆ ನಡೆಸಿದರು.
ವಿಶೇಷವಾಗಿ ಪ್ರಶ್ನೋತ್ತರ ಕಲಾಪ, ಶೂನ್ಯ ವೇಳೆ ಹಾಗೂ ನೂತನ ವಿಧೇಯಕಗಳ ಮಂಡನೆ ಪ್ರಕ್ರಿಯೆಗಳು ನೆರೆದಿದ್ದ ವೀಕ್ಷಕರ ಮತ್ತು ಗಣ್ಯರ ಮೆಚ್ಚುಗೆಗೆ ಪಾತ್ರವಾದವು. ಸ್ಪರ್ಧೆಯ ಅಂತ್ಯದಲ್ಲಿ ಅತ್ಯುತ್ತಮ ವಾಗ್ಮಿತ್ವ ಹಾಗೂ ಸಂಸದೀಯ ಕೌಶಲ್ಯ ಪ್ರದರ್ಶಿಸಿದ ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟದ ಯುವ ಸಂಸತ್ ಅಣಕು ಸಭೆಗೆ ಆಯ್ಕೆ ಮಾಡಲಾಯಿತು.
ಇದಕ್ಕೂ ಮುನ್ನ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಾಷು ಮೊದ್ದಿನ್ ಅವರು, ಸಂವಿಧಾನ ಪೀಠಿಕೆಯನ್ನು ಬೋಧಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚಿದಾನಂದಪ್ಪ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಹಾಗೂ ಪೋಷಕರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್