


ಬಳ್ಳಾರಿ, 30 ಅಕ್ಟೋಬರ್ (ಹಿ.ಸ.)
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಿರಿಯ ನಾಗರಿಕರಿಗಾಗಿ ‘ಡಿಮೆನ್ಷಿಯಾ’ (ಮರೆವಿನ ಕಾಯಿಲೆ) ಆರೋಗ್ಯ ತಪಾಸಣಾ ಶಿಬಿರ ಮತ್ತು ಜಾಗೃತಿ ಕಾರ್ಯಾಗಾರವನ್ನು ನಗರದ ಬೆಳಗಲ್ ರಸ್ತೆಯಲ್ಲಿರುವ ದಿವಂಗತ ಶ್ರೀಮತಿ ಜಿ. ರುಕ್ಮಿಣಮ್ಮ ಚೆಂಗಾರೆಡ್ಡಿ ಸ್ಮಾರಕ ಹಿರಿಯ ನಾಗರಿಕರ ವೃದ್ಧಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ರಾಜೇಶ್ ಹೊಸಮನೆ.ಎನ್ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಹೊರಹೊಮ್ಮಲು ಹಿರಿಯ ನಾಗರಿಕರ ಆಶೀರ್ವಾದ, ಪ್ರೋತ್ಸಾಹ ಮತ್ತು ಆರೈಕೆ ಅತ್ಯಂತ ಮುಖ್ಯ. ಹಿರಿಯರ ಅನುಭವ ನಮಗೆ ದಾರಿದೀಪವಾಗಿದ್ದು, ಪ್ರತಿಯೊಬ್ಬರೂ ಅವರನ್ನು ಗೌರವಿಸಿ ಉತ್ತಮ ರಕ್ಷಣೆ ಹಾಗೂ ಆರೋಗ್ಯ ನೀಡುವುದು ಕರ್ತವ್ಯವಾಗಿದೆ ಎಂದರು.
ವಯೋವೃದ್ಧರಲ್ಲಿ ನರಗಳ ದೌರ್ಬಲ್ಯದಿಂದ ಸಹಜವಾಗಿ ಕಾಣಿಸಿಕೊಳ್ಳುವ ಡಿಮೆನ್ಷಿಯಾ ಕಾಯಿಲೆಯನ್ನು ಆರಂಭದಲ್ಲೇ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಯ ಮೂಲಕ ನಿಯಂತ್ರಿಸಬಹುದು, ಹೀಗಾಗಿ ಹಿರಿಯರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಎಳೆನಾಗಪ್ಪ ಅವರು ಮಾತನಾಡಿ, ಹಿರಿಯ ನಾಗರಿಕರು ನಮ್ಮ ದೇಶದ ಸಂಪತ್ತು. ಅವರ ಪರಿಶ್ರಮ, ತ್ಯಾಗ ಮತ್ತು ಅನುಭವದಿಂದಲೇ ಸಮಾಜ ಮುನ್ನಡೆಯುತ್ತಿದ್ದು, ಅವರನ್ನು ಗೌರವಿಸಿ ರಕ್ಷಿಸಿದಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.
ಶಿಬಿರದಲ್ಲಿ ಮಾನಸಿಕ ತಜ್ಞ ಡಾ.ಗಿರೀಶ್ ಕುಮಾರ್, ನೇತ್ರ ತಜ್ಞರಾದ ಡಾ. ಅನನ್ಯ, ಚರ್ಮರೋಗ ತಜ್ಞರಾದ ಡಾ. ಸೌಜನ್ಯ, ನೇತ್ರ ಸಹಾಯಕ ಡಾ. ಹೊನ್ನಪ್ಪ, ಸಾಮಾನ್ಯ ವೈದ್ಯರಾದ ಡಾ. ಚೈತನ್ಯ, ಡಾ. ವಿಜಯಲಕ್ಷಿö್ಮ, ಡಾ. ನಿಹಾರಿಕಾ ಮುಂತಾದ ವೈದ್ಯಾಧಿಕಾರಿಗಳು ಪಾಲ್ಗೊಂಡು ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ಹಾಗೂ ಸಲಹೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶಾಶು, ಸರ್ಕಾರಿ ಕಿವುಡ ಮಕ್ಕಳ ಪಾಠಶಾಲೆಯ ಅಧೀಕ್ಷಕ ಗೋವಿಂದಪ್ಪ ಹೆಚ್.ಎಂ., ವೃದ್ಧಾಶ್ರಮದ ಮುಖ್ಯಸ್ಥ ಗುರುಮೂರ್ತಿ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಹಾಗೂ ಹಗಲು ಯೋಗಕ್ಷೇಮ ಕೇಂದ್ರದ ಮುಖ್ಯಸ್ಥ ಉಮಾಪತಿ ಗೌಡ, ಶ್ರೀ ಕೃಷ್ಣ ಸನ್ನಿಧಿ ಮುಖ್ಯಸ್ಥರಾದ ರಥಿ, ದೊಡ್ಡ ಬಸವೇಶ್ವರ ಬುದ್ಧಿಮಾಂದ್ಯ ಮಕ್ಕಳ ವಿಶೇಷ ಶಾಲೆಯ ಮುಖ್ಯಸ್ಥ ಫಣಿರಾಜ್, ಭೀಮಾ ವಿದ್ಯಾಸಂಸ್ಥೆಯ ಮುಖ್ಯಸ್ಥ ಮಹೇಶ್ ಕುಮಾರ್, ಅನುಗ್ರಹ ಶಾಲೆಯ ಮುಖ್ಯಸ್ಥರಾದ ಸಿಸ್ಟರ್ ಪ್ರಜ್ಞಾ, ಡಿಡಿಆರ್ ನೋಡಲ್ ಅಧಿಕಾರಿ ನಾಗೇಂದ್ರ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳ ಪುನರ್ವಸತಿ ಕಾರ್ಯಕರ್ತರು ಮತ್ತು ಹಿರಿಯ ನಾಗರಿಕರು ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಮಂದಿ ಉಪಸ್ಥಿತರಿದ್ದರು.
ವಿಶೇಷ ಶಿಕ್ಷಕ ಸೋಮನಾಥ್ ನಿರೂಪಿಸಿ, ವಂದಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್