ಅರುಣಾಚಲ ಪ್ರದೇಶದಲ್ಲಿ ನಾಳೆಯಿಂದ ಭಗವಾನ್ ಬುದ್ಧನ ಪವಿತ್ರ ಅವಶೇಷಗಳ ದರ್ಶನ
ನವದೆಹಲಿ, 30 ಅಕ್ಟೋಬರ್ (ಹಿ.ಸ.): ಭಗವಾನ್ ಬುದ್ಧನ ಪವಿತ್ರ ಅವಶೇಷಗಳನ್ನು ಅಕ್ಟೋಬರ್ 31ರಿಂದ ನವೆಂಬರ್ 21ರವರೆಗೆ ಅರುಣಾಚಲ ಪ್ರದೇಶದ ಮೂರು ಪ್ರಮುಖ ಬೌದ್ಧ ಧಾರ್ಮಿಕ ಕೇಂದ್ರಗಳಾದ ತವಾಂಗ್, ಬೊಮ್ಡಿಲಾ ಮತ್ತು ನಾಮ್ಸಾಯಿಯಲ್ಲಿ ಭಕ್ತರ ದರ್ಶನಕ್ಕೆ ಇರಿಸಲಾಗುತ್ತದೆ. ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸ
भगवान बुद्ध। (फाइल फोटो)


ನವದೆಹಲಿ, 30 ಅಕ್ಟೋಬರ್ (ಹಿ.ಸ.):

ಭಗವಾನ್ ಬುದ್ಧನ ಪವಿತ್ರ ಅವಶೇಷಗಳನ್ನು ಅಕ್ಟೋಬರ್ 31ರಿಂದ ನವೆಂಬರ್ 21ರವರೆಗೆ ಅರುಣಾಚಲ ಪ್ರದೇಶದ ಮೂರು ಪ್ರಮುಖ ಬೌದ್ಧ ಧಾರ್ಮಿಕ ಕೇಂದ್ರಗಳಾದ ತವಾಂಗ್, ಬೊಮ್ಡಿಲಾ ಮತ್ತು ನಾಮ್ಸಾಯಿಯಲ್ಲಿ ಭಕ್ತರ ದರ್ಶನಕ್ಕೆ ಇರಿಸಲಾಗುತ್ತದೆ.

ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಅಕ್ಟೋಬರ್ 31ರಂದು ತವಾಂಗ್‌ನ ಐತಿಹಾಸಿಕ ಗಾದೆನ್ ನಾಮ್ಗ್ಯಾಲ್ ಲ್ಹಾತ್ಸೆ (ತವಾಂಗ್ ಮಠ)ದಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ನವದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಲಾಗಿರುವ ಭಗವಾನ್ ಬುದ್ಧನ ಪವಿತ್ರ ಅವಶೇಷಗಳನ್ನು ಈ ಕಾರ್ಯಕ್ರಮದ ಅಂಗವಾಗಿ ಅರುಣಾಚಲ ಪ್ರದೇಶದ ಮೂರು ಸ್ಥಳಗಳಿಗೆ ಕೊಂಡೊಯ್ಯಲಾಗುತ್ತದೆ.

ಕೇಂದ್ರ ಸಂಸ್ಕೃತಿ ಸಚಿವಾಲಯವು ಅರುಣಾಚಲ ಪ್ರದೇಶ ಸರ್ಕಾರ, ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟ ಮತ್ತು ರಾಷ್ಟ್ರೀಯ ವಸ್ತುಸಂಗ್ರಹಾಲಯದ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಿದೆ. ಭಕ್ತರಿಗೆ ಪವಿತ್ರ ಅವಶೇಷಗಳ ದರ್ಶನದ ಅವಕಾಶ ಕಲ್ಪಿಸುವುದರ ಜತೆಗೆ ರಾಜ್ಯದ ಶ್ರೀಮಂತ ಬೌದ್ಧ ಪರಂಪರೆ ಮತ್ತು ಭಾರತದ ಬೌದ್ಧ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವುದು ಇದರ ಉದ್ದೇಶವಾಗಿದೆ. ಬೌದ್ಧ ಸನ್ಯಾಸಿಗಳು, ಧಾರ್ಮಿಕ ಸಂಸ್ಥೆಗಳ ಪ್ರತಿನಿಧಿಗಳು, ವಿದ್ವಾಂಸರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಪವಿತ್ರ ಅವಶೇಷಗಳನ್ನು ಶುಕ್ರವಾರ ರಾತ್ರಿ ರಾಷ್ಟ್ರೀಯ ವಸ್ತುಸಂಗ್ರಹಾಲಯದಿಂದ ವಿಶೇಷ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಳುಹಿಸಿಕೊಡಲಾಗುತ್ತದೆ. ಭಾರತೀಯ ವಾಯುಪಡೆಯ ವಿಶೇಷ ವಿಮಾನದ ಮೂಲಕ ದೆಹಲಿಯ ಪಾಲಂ ವಾಯುನೆಲೆಯಿಂದ ಗುವಾಹಟಿಯ ಬೊರ್ಝಾರ್ ವಾಯುನೆಲೆಗೆ ಕೊಂಡೊಯ್ಯಲಾಗುತ್ತದೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ತವಾಂಗ್‌ಗೆ ಸಾಗಿಸಲಾಗುತ್ತದೆ. ತವಾಂಗ್‌ನಲ್ಲಿ ಧಾರ್ಮಿಕ ಸಂಪ್ರದಾಯಗಳಂತೆ ಸ್ವಾಗತಿಸಿ ಮಠದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.

ಅಕ್ಟೋಬರ್ 31ರಂದು ಬೆಳಿಗ್ಗೆ 10ರಿಂದ 11.30ರವರೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ನವೆಂಬರ್ 1ರಂದು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರ ಉಪಸ್ಥಿತಿಯಲ್ಲಿ ಪ್ರದರ್ಶನ ಮತ್ತು ಸಂಬಂಧಿತ ಕಾರ್ಯಕ್ರಮಗಳಿಗೆ ಅಧಿಕೃತ ಚಾಲನೆ ನೀಡಲಾಗುತ್ತದೆ.

ಟಿಬೆಟಿಯನ್ ಬೌದ್ಧ ಪರಂಪರೆಯ ಪ್ರಮುಖ ಹಬ್ಬವಾದ 'ಲ್ಹಾಬಾಬ್ ದುಚೆನ್' ಸಂದರ್ಭದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಭಗವಾನ್ ಬುದ್ಧರು ಸ್ವರ್ಗಲೋಕದಿಂದ ಭೂಮಿಗೆ ಮರಳಿದ ಸ್ಮರಣಾರ್ಥ ಈ ಹಬ್ಬ ಆಚರಿಸಲಾಗುತ್ತದೆ.

ದರ್ಶನದ ವೇಳಾಪಟ್ಟಿ

* ನವೆಂಬರ್ 1ರಿಂದ 7ರವರೆಗೆ: ತವಾಂಗ್ ಮಠ.

* ನವೆಂಬರ್ 8ರಿಂದ 13ರವರೆಗೆ: ಬೊಮ್ಡಿಲಾದ ಟಿಜಿಎಲ್ ಮಠ (ಲೋವರ್ ಗೊಂಪಾ).

* ನವೆಂಬರ್ 14ರಿಂದ 20ರವರೆಗೆ: ನಾಮ್ಸಾಯಿಯ ಗೋಲ್ಡನ್ ಪಗೋಡಾ.

* ನವೆಂಬರ್ 21ರಂದು: ತೇಜು ಮತ್ತು ಪಾಲಂ ಮಾರ್ಗವಾಗಿ ಅವಶೇಷಗಳನ್ನು ನವದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯಕ್ಕೆ ಮರಳಿ ಕೊಂಡೊಯ್ಯಲಾಗುತ್ತದೆ.

ಪವಿತ್ರ ಅವಶೇಷಗಳ ಸುರಕ್ಷತೆ ಮತ್ತು ಸಂರಕ್ಷಣೆಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ರಕ್ಷಣಾ ಸಚಿವಾಲಯ, ಭಾರತೀಯ ವಾಯುಪಡೆ, ಅರುಣಾಚಲ ಪ್ರದೇಶ ಸರ್ಕಾರ ಮತ್ತು ರಾಷ್ಟ್ರೀಯ ವಸ್ತುಸಂಗ್ರಹಾಲಯದ ಸಹಯೋಗದಲ್ಲಿ ಸಾಗಣೆ ಹಾಗೂ ಇತರ ವ್ಯವಸ್ಥೆಗಳನ್ನು ಸಮನ್ವಯಗೊಳಿಸಲಾಗುತ್ತಿದೆ. ಪರ್ವತ ಪ್ರದೇಶದ ದುರ್ಗಮ ಭೌಗೋಳಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವಿಮಾನ ಮತ್ತು ಹೆಲಿಕಾಪ್ಟರ್ ಮೂಲಕ ಸಾಗಿಸಲು ಯೋಜಿಸಲಾಗಿದೆ. ಆದರೆ ಹವಾಮಾನ, ಭದ್ರತೆ ಮತ್ತು ಕಾರ್ಯಾಚರಣೆಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಸಾಗಣೆಯ ಸಮಯ ಹಾಗೂ ವ್ಯವಸ್ಥೆ ಬದಲಾಗಬಹುದು.

ಪಿಪ್ರಹ್ವಾ ಪುರಾತತ್ವ ಸ್ಥಳದೊಂದಿಗೆ ನಂಟು

ಈ ಪವಿತ್ರ ಅವಶೇಷಗಳು ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯ ಪಿಪ್ರಹ್ವಾ ಪುರಾತತ್ವ ಸ್ಥಳಕ್ಕೆ ಸಂಬಂಧಿಸಿವೆ. ಈ ಪ್ರದೇಶವು ಪ್ರಾಚೀನ ಕಪಿಲವಸ್ತು ಮತ್ತು ಶಾಕ್ಯ ಪರಂಪರೆಯೊಂದಿಗೆ ನಂಟು ಹೊಂದಿದೆ ಎಂದು ಪರಿಗಣಿಸಲಾಗಿದೆ.

1898ರಲ್ಲಿ ವಿಲಿಯಂ ಕ್ಲಾಕ್ಸ್ಟನ್ ಪೆಪ್ಪೆ ಅವರು ಇಲ್ಲಿ ಸ್ತೂಪವೊಂದನ್ನು ಉತ್ಖನನ ಮಾಡಿದ್ದರು. ಈ ಸಂದರ್ಭದಲ್ಲಿ ಅಸ್ಥಿ ಅವಶೇಷಗಳು ಮತ್ತು ಅಮೂಲ್ಯ ವಸ್ತುಗಳಿದ್ದ ಪಾತ್ರೆಗಳು ಪತ್ತೆಯಾಗಿದ್ದವು. ಬಳಿಕ 1971ರಿಂದ 1977ರವರೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಪುರಾತತ್ವ ತಜ್ಞ ಕೆ.ಎಂ. ಶ್ರೀವಾಸ್ತವ ಅವರ ನೇತೃತ್ವದಲ್ಲಿ ಮತ್ತಷ್ಟು ಉತ್ಖನನ ನಡೆಸಿತ್ತು. ಈ ವೇಳೆ ಇನ್ನೆರಡು ಅವಶೇಷ ಪಾತ್ರೆಗಳು ಪತ್ತೆಯಾಗಿದ್ದು, ಅವುಗಳಲ್ಲಿ ಭಗವಾನ್ ಬುದ್ಧರಿಗೆ ಸಂಬಂಧಿಸಿವೆ ಎಂದು ಪರಂಪರಾಗತವಾಗಿ ನಂಬಲಾಗಿರುವ 22 ಅಸ್ಥಿ ಅವಶೇಷಗಳು ದೊರೆತಿದ್ದವು. ಇವುಗಳಲ್ಲಿ 20 ಅವಶೇಷಗಳನ್ನು ನವದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಹಾಗೂ ಎರಡು ಅವಶೇಷಗಳನ್ನು ಕೋಲ್ಕತ್ತಾದ ಭಾರತೀಯ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಲಾಗಿದೆ.

ಈ ಕಾರ್ಯಕ್ರಮದ ಅಂಗವಾಗಿ 'ಅನ್‌ಅರ್ಥಿಂಗ್ ದಿ ಸೇಕ್ರೆಡ್ ಪಿಪ್ರಹ್ವಾ' ಹೆಸರಿನ ವಿಶೇಷ ಪ್ರದರ್ಶನವನ್ನೂ ಆಯೋಜಿಸಲಾಗುತ್ತದೆ. ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟದ ವತಿಯಿಂದ ನಡೆಯುವ ಈ ಪ್ರದರ್ಶನ ತವಾಂಗ್, ಬೊಮ್ಡಿಲಾ ಮತ್ತು ನಾಮ್ಸಾಯಿಯಲ್ಲೂ ಇರಲಿದೆ. ಪಿಪ್ರಹ್ವಾ ಉತ್ಖನನ, ಪವಿತ್ರ ಅವಶೇಷಗಳ ಪತ್ತೆ, ಅವುಗಳ ಐತಿಹಾಸಿಕ ಮಹತ್ವ ಹಾಗೂ 2025ರಲ್ಲಿ ಭಾರತಕ್ಕೆ ಮರಳಿ ತರಲಾದ ಪಿಪ್ರಹ್ವಾದ ಆಭರಣಗಳ ಕುರಿತು ಮಾಹಿತಿ ಪ್ರದರ್ಶಿಸಲಾಗುತ್ತದೆ.

ನ.2ರಂದು ಅಂತಾರಾಷ್ಟ್ರೀಯ ಸಮ್ಮೇಳನ

ತವಾಂಗ್‌ನಲ್ಲಿ ನವೆಂಬರ್ 2ರಂದು 'ಬೌದ್ಧ ಧರ್ಮ: ಹಿಮಾಲಯ ಪ್ರದೇಶ ಮತ್ತು ಅದರಾಚೆಗೆ ಹರಡುವಿಕೆ' ಎಂಬ ವಿಷಯದ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ ನಡೆಯಲಿದೆ. ಕಾಲಾವಾಂಗ್ಪೋ ಸಮಾವೇಶ ಭವನದಲ್ಲಿ ನಡೆಯುವ ಈ ಸಮ್ಮೇಳನದಲ್ಲಿ ಭಾರತ ಸೇರಿದಂತೆ ನೇಪಾಳ, ಶ್ರೀಲಂಕಾ, ಮ್ಯಾನ್ಮಾರ್, ಮಲೇಷ್ಯಾ, ಇಂಡೋನೇಷ್ಯಾ ಮತ್ತು ಜರ್ಮನಿಯ ಬೌದ್ಧ ಸನ್ಯಾಸಿಗಳು, ವಿದ್ವಾಂಸರು ಹಾಗೂ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಭಗವಾನ್ ಬುದ್ಧರ ಮಹಾಪರಿನಿರ್ವಾಣದ ನಂತರ ಅವರ ಬೋಧನೆಗಳು ಹೇಗೆ ಹರಡಿದವು, ಬೌದ್ಧ ಪರಂಪರೆಗಳ ನಿರಂತರತೆ, ಮಠಗಳು ಮತ್ತು ಧಾರ್ಮಿಕ ಸಂಸ್ಥೆಗಳ ಪಾತ್ರ ಹಾಗೂ ಆಧುನಿಕ ಕಾಲದಲ್ಲಿ ಬೌದ್ಧ ತತ್ತ್ವಶಾಸ್ತ್ರದ ಪ್ರಸ್ತುತತೆ ಕುರಿತು ಚರ್ಚೆ ನಡೆಯಲಿದೆ.

ಇದರ ಜತೆಗೆ ಹಿಮಾಲಯ ಪ್ರದೇಶದಲ್ಲಿ ಬೌದ್ಧ ಪರಂಪರೆಗಳ ಸಂರಕ್ಷಣೆ, ಸಮಕಾಲೀನ ಜೀವನದಲ್ಲಿ ಬೌದ್ಧ ನೈತಿಕ ಬೋಧನೆಗಳ ಪಾತ್ರ, ಸಾಂಸ್ಕೃತಿಕ ಪ್ರವಾಸೋದ್ಯಮ, ಯಾತ್ರೆ, ಕೌಶಲಾಭಿವೃದ್ಧಿ ಮತ್ತು ಸುಸ್ಥಿರ ಜೀವನೋಪಾಯದ ಬಗ್ಗೆಯೂ ವಿಚಾರ ವಿನಿಮಯ ನಡೆಯಲಿದೆ.

ಅರುಣಾಚಲ ಪ್ರದೇಶದಲ್ಲಿ ವಿವಿಧ ಬೌದ್ಧ ಪರಂಪರೆಗಳು ಆಚರಣೆಯಲ್ಲಿವೆ. ತವಾಂಗ್ ಮತ್ತು ಪಶ್ಚಿಮ ಕಾಮೆಂಗ್ ಪ್ರದೇಶಗಳಲ್ಲಿ ಮಹಾಯಾನ ಹಾಗೂ ವಜ್ರಯಾನ ಬೌದ್ಧ ಪರಂಪರೆಗಳು ಪ್ರಚಲಿತದಲ್ಲಿದ್ದರೆ, ನಾಮ್ಸಾಯಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೈ ಖಾಮ್ತಿ ಸಮುದಾಯ ಸೇರಿದಂತೆ ಹಲವು ಬೌದ್ಧ ಸಮುದಾಯಗಳು ಥೇರವಾದ ಪರಂಪರೆಯನ್ನು ಅನುಸರಿಸುತ್ತವೆ. ಮೂರು ಪ್ರಮುಖ ಕೇಂದ್ರಗಳಲ್ಲಿ ಪವಿತ್ರ ಅವಶೇಷಗಳ ದರ್ಶನ ಆಯೋಜಿಸುವುದರಿಂದ ವಿಭಿನ್ನ ಬೌದ್ಧ ಪರಂಪರೆಗಳ ಸಮುದಾಯಗಳನ್ನು ಸಾಮಾನ್ಯ ಆಧ್ಯಾತ್ಮಿಕ ಪರಂಪರೆಯಡಿ ಒಗ್ಗೂಡಿಸಲು ಅವಕಾಶವಾಗಲಿದೆ.

ಈ ಹಿಂದೆ ಕೇಂದ್ರ ಸರ್ಕಾರ ಮಂಗೋಲಿಯಾ, ಥಾಯ್ಲೆಂಡ್, ವಿಯೆಟ್ನಾಂ, ರಷ್ಯಾದ ಕಲ್ಮೀಕಿಯಾ ಪ್ರದೇಶ, ಭೂತಾನ್, ಶ್ರೀಲಂಕಾ ಮತ್ತು ಲಡಾಖ್‌ನಲ್ಲಿಯೂ ಭಗವಾನ್ ಬುದ್ಧನ ಪವಿತ್ರ ಅವಶೇಷಗಳ ಪ್ರದರ್ಶನ ಆಯೋಜಿಸಿತ್ತು. 2022ರಲ್ಲಿ ಮಂಗೋಲಿಯಾ, 2024ರಲ್ಲಿ ಥಾಯ್ಲೆಂಡ್ ಹಾಗೂ 2025ರಲ್ಲಿ ವಿಯೆಟ್ನಾಂನಲ್ಲಿ ನಡೆದ ಪ್ರದರ್ಶನಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. 2026ರ ಫೆಬ್ರವರಿಯಲ್ಲಿ ದೇವನಿಮೊರಿಯ ಪವಿತ್ರ ಅವಶೇಷಗಳನ್ನು ಶ್ರೀಲಂಕಾಕ್ಕೆ ಕೊಂಡೊಯ್ಯಲಾಗಿತ್ತು. ಮೇ ತಿಂಗಳಲ್ಲಿ ಲಡಾಖ್‌ನಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮೇ-ಜೂನ್ 2026ರಲ್ಲಿ ಭಗವಾನ್ ಬುದ್ಧರ ಪ್ರಮುಖ ಶಿಷ್ಯರಾದ ಅರಹಂತ ಸಾರಿಪುತ್ರ ಮತ್ತು ಅರಹಂತ ಮಹಾಮೊಗ್ಗಲ್ಲಾನ ಅವರ ಅವಶೇಷಗಳನ್ನು ಮಂಗೋಲಿಯಾಕ್ಕೆ ಕೊಂಡೊಯ್ಯಲಾಗಿತ್ತು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande