
ಬೆಂಗಳೂರು, 30 ಅಕ್ಟೋಬರ್ (ಹಿ.ಸ.):
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಅನಧಿಕೃತ ನಿರ್ಮಾಣಗಳ ತೆರವು ಕಾರ್ಯಾಚರಣೆ ಮುಂದುವರಿಸಿದ್ದು, ನಗರದ ಅರಕೆರೆ ಗ್ರಾಮದಲ್ಲಿ ಸುಮಾರು ₹50 ಕೋಟಿ ಮೌಲ್ಯದ ಎರಡು ನಾಗರಿಕ ಸೌಲಭ್ಯ (ಸಿಎ) ನಿವೇಶನಗಳನ್ನು ವಶಕ್ಕೆ ಪಡೆದಿದೆ.
ಬೆಂಗಳೂರು ದಕ್ಷಿಣ ತಾಲೂಕು, ಬೇಗೂರು ಹೋಬಳಿಯ ಅರಕೆರೆ ಗ್ರಾಮದ ಶಾಂತಿನಿಕೇತನ ಖಾಸಗಿ ಬಡಾವಣೆಯಲ್ಲಿರುವ ಒಟ್ಟು 1 ಎಕರೆ 10 ಗುಂಟೆ ವಿಸ್ತೀರ್ಣದ ಎರಡು ಸಿಎ ನಿವೇಶನಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಕಟ್ಟಡಗಳನ್ನು ತೆರವುಗೊಳಿಸಿ ಬಿಡಿಎ ಅಧಿಕಾರಿಗಳು ನಿವೇಶನಗಳನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯಲ್ಲಿ ಬಿಡಿಎ ಕಾರ್ಯಪಡೆಯ ಪೊಲೀಸ್ ಅಧೀಕ್ಷಕರು, ದಕ್ಷಿಣ ವಲಯದ ವಲಯ ಆಯುಕ್ತರು, ಅಭಿಯಂತರ ಅಧಿಕಾರಿ-3, ದಕ್ಷಿಣ ವಿಭಾಗದ ಕಾರ್ಯಪಾಲಕ ಅಭಿಯಂತರರು ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R