
ಬೆಂಗಳೂರು, 03 ಅಕ್ಟೋಬರ್ (ಹಿ.ಸ.):
ಗಾಂಧಿ ಜಯಂತಿ ರಜೆ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ಟ್ರೆಕ್ಕಿಂಗ್ಗೆ ತೆರಳಿದ್ದ ಸಾಫ್ಟ್ವೇರ್ ಉದ್ಯೋಗಿಯೊಬ್ಬರು ಕಲ್ಲು ಕ್ವಾರಿಯ ನೀರಿನಲ್ಲಿ ಈಜಲು ಹೋಗಿ ನಾಪತ್ತೆಯಾಗಿರುವ ಘಟನೆ ಬೆಂಗಳೂರು ಹೊರವಲಯದ ಜಿಗಣಿ ಸಮೀಪ ನಡೆದಿದೆ.
ಆಂಧ್ರಪ್ರದೇಶ ಮೂಲದ 30 ವರ್ಷದ ವಿನಯ್ ನಾಪತ್ತೆಯಾಗಿರುವ ಟೆಕ್ಕಿ. ಅವರು ಬೆಂಗಳೂರಿನ ಹಲಸೂರು ಪ್ರದೇಶದಲ್ಲಿ ವಾಸವಿದ್ದು, ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದರು ಎಂದು ತಿಳಿದುಬಂದಿದೆ.
ಗಾಂಧಿ ಜಯಂತಿ ರಜೆ ಹಿನ್ನೆಲೆಯಲ್ಲಿ ವಿನಯ್ ಸೇರಿದಂತೆ ಎಂಟು ಮಂದಿ BLR Hike ಎಂಬ ಇನ್ಸ್ಟಾಗ್ರಾಂ ಗುಂಪಿನ ಮೂಲಕ ಒಟ್ಟಾಗಿ ಟ್ರೆಕ್ಕಿಂಗ್ಗೆ ತೆರಳಿದ್ದರು ಎನ್ನಲಾಗಿದೆ.
ಈ ವೇಳೆ ವಿನಯ್ ಈಜಲು ನೀರಿಗೆ ಇಳಿದಿದ್ದು, ಈಜುತ್ತಿದ್ದಾಗ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಉಳಿದ ಸ್ನೇಹಿತರು ಕೂಡಲೇ ನೀರಿನಿಂದ ಹೊರಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ಜಿಗಣಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿಯ ಸಹಾಯದಿಂದ ವಿನಯಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದು, ನಾಪತ್ತೆಯಾಗಿರುವ ವಿನಯ್ ಗಾಗಿ ಕುಟುಂಬಸ್ಥರು ಆತಂಕದಿಂದ ಕಾಯುತ್ತಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R