
ಬೆಂಗಳೂರು, 03 ಅಕ್ಟೋಬರ್ (ಹಿ.ಸ.):
ನಟಿ ರಚಿತಾ ರಾಮ್ ಅವರು 34ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಸಂಭ್ರಮದಿಂದ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಅಭಿಮಾನಿಗಳು ತೋರಿದ ಅಪಾರ ಪ್ರೀತಿಗೆ ರಚಿತಾ ರಾಮ್ ಭಾವುಕರಾಗಿ ಪ್ರತಿಕ್ರಿಯಿಸಿದರು.
“ಈ ವರ್ಷದ ಹುಟ್ಟುಹಬ್ಬ ನನಗೆ ತುಂಬಾ ವಿಶೇಷ. ಸೆಲೆಬ್ರೇಷನ್ ಮುಗಿದ ಬಳಿಕ ಎಲ್ಲವನ್ನೂ ನೆನಪು ಮಾಡಿಕೊಂಡರೆ ನಿಜಕ್ಕೂ ಭಾವುಕಳಾಗುತ್ತೇನೆ.
ನನ್ನ ಮೊದಲ ಸಿನಿಮಾ ನರ್ತಕಿ ಥಿಯೇಟರ್ನಲ್ಲಿ ಬಿಡುಗಡೆಯಾಗಿತ್ತು. ಆಗ ‘ಬುಲ್ ಬುಲ್’ ಸಿನಿಮಾದ ಸ್ಕೆಚ್ ನೋಡಿದ್ದೆ. ಆ ಸ್ಕೆಚ್ನಲ್ಲಿ ನಾನೇ ಇರುತ್ತೇನೆ ಎಂದು ಅಂದುಕೊಂಡಿರಲಿಲ್ಲ” ಎಂದು ಅವರು ನೆನಪಿಸಿಕೊಂಡರು.
“ನನ್ನ ಮೊದಲ ಸಿನಿಮಾದ ಪ್ರೊಡಕ್ಷನ್ ಹೌಸ್ಗೆ ಇಡೀ ಕುಟುಂಬ ಚಿರಋಣಿಯಾಗಿದೆ. ನನ್ನನ್ನು ಎಲ್ಲರೂ ಮನೆ ಮಗಳಾಗಿ ಸ್ವೀಕರಿಸಿದ್ದೀರಿ.
ಇದನ್ನು ನಾನು ಯಾವತ್ತೂ ಮರೆಯುವುದಿಲ್ಲ. ಭಗವಂತ ನನಗೆ ಒಂದು ಅವಕಾಶ ಕೊಟ್ಟಿದ್ದಾನೆ. ಅದನ್ನು ತೀರಿಸುತ್ತೇನೆ” ಎಂದು ರಚಿತಾ ರಾಮ್ ಹೇಳಿದರು.
ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿಯ ಬಗ್ಗೆಯೂ ಮಾತನಾಡಿದ ಅವರು, “ಪ್ರತಿ ಭಾನುವಾರ ಅಭಿಮಾನಿಗಳು ಮನೆ ಹತ್ತಿರ ಬರುತ್ತಾರೆ. ಸಾಕಷ್ಟು ಪ್ರೀತಿ ತೋರಿಸುತ್ತಾರೆ.
ನಾನು ಯಾವ ಜನ್ಮದಲ್ಲಿ ಪುಣ್ಯ ಮಾಡಿದ್ದೇನೋ ಗೊತ್ತಿಲ್ಲ. ಎಷ್ಟೇ ದುಡ್ಡು ಕೊಟ್ಟರೂ ಈ ಪ್ರೀತಿ ಸಿಗುವುದಿಲ್ಲ. ಭಗವಂತನಲ್ಲಿ ಒಂದೇ ಒಂದು ಕೇಳಿಕೊಳ್ಳುತ್ತೇನೆ. ಯಾವತ್ತೂ ನನ್ನನ್ನು ಬೀಳಿಸಬೇಡ ಎಂದು” ಎಂದರು.
ತಮ್ಮ ಬಗ್ಗೆ ಹರಿದಾಡುವ ಗಾಸಿಪ್ಗಳ ಕುರಿತು ಪ್ರತಿಕ್ರಿಯಿಸಿದ ಅವರು, “ನನ್ನ ಬಗ್ಗೆ ಫಾಲ್ಸ್ ನ್ಯೂಸ್ ಬಂದಾಗ ನನ್ನಿಂದ ಸ್ಪಷ್ಟನೆ ಕೇಳಿದರೆ ಖುಷಿಯಾಗುತ್ತದೆ. ಆದರೆ ನನ್ನ ಬಗ್ಗೆ ಯಾರು ಆರೋಪ ಮಾಡುತ್ತಾರೋ, ಅವರ ಬಳಿಯೂ ಅದರ ಬಗ್ಗೆ ಕೇಳಬೇಕು” ಎಂದು ಹೇಳಿದರು.
‘ಕೂಲಿ’ ಸಿನಿಮಾ ಬಳಿಕ ಚೆನ್ನೈಗೆ ತೆರಳಲು ಸಾಧ್ಯವಾಗಿಲ್ಲ. ಸದ್ಯದಲ್ಲೇ ತಮ್ಮ ಹೊಸ ಸಿನಿಮಾಗಳ ಬಗ್ಗೆ ಮಾಹಿತಿ ನೀಡುವುದಾಗಿ ರಚಿತಾ ರಾಮ್ ತಿಳಿಸಿದರು.
ರಾಜಕೀಯ ಪ್ರವೇಶದ ಕುರಿತು ಕೇಳಿದ ಪ್ರಶ್ನೆಗೆ, “ರಾಜಕೀಯ ಸಮುದ್ರ ಇದ್ದಂತೆ. ನಾನು ಪಾಲಿಟಿಕ್ಸ್ಗೆ ಬರುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಕೊರಗಜ್ಜನ ಮೇಲಿನ ತಮ್ಮ ನಂಬಿಕೆಯ ಬಗ್ಗೆಯೂ ಮಾತನಾಡಿದ ಅವರು, “ಕೊರಗಜ್ಜ ನನ್ನ ಶಕ್ತಿ. ನಾನು ಏನಾದರೂ ಸಣ್ಣಪುಟ್ಟ ತಪ್ಪು ಮಾಡಿದ್ದರೆ ಕ್ಷಮೆ ಕೇಳುತ್ತೇನೆ” ಎಂದು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R