ದಾವಣಗೆರೆಯಲ್ಲಿ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ರೈತ ಸ್ವಾಭಿಮಾನ ಯಾತ್ರೆ
ದಾವಣಗೆರೆ, 03 ಅಕ್ಟೋಬರ್ (ಹಿ.ಸ.): ರೈತರ ಬೆಳೆ ನಷ್ಟ ಹಾಗೂ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ದಾವಣಗೆರೆ ಜಿಲ್ಲೆಯ ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ ‘ರೈತ ಸ್ವಾಭಿಮಾನ ಯಾತ್ರೆ’ಗೆ ಚಾಲನೆ ನೀಡಲಾಯಿತು. ಹರಿಹರ ತಾಲೂಕಿನ ದೇವರಬೆಳಕೆರೆ ಗ್ರಾಮ
nikhil-kumaraswamy-raitha-swabhimana-yatra-davanagere-farmers-loan-waiver-demand


ದಾವಣಗೆರೆ, 03 ಅಕ್ಟೋಬರ್ (ಹಿ.ಸ.):

ರೈತರ ಬೆಳೆ ನಷ್ಟ ಹಾಗೂ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ದಾವಣಗೆರೆ ಜಿಲ್ಲೆಯ ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ ‘ರೈತ ಸ್ವಾಭಿಮಾನ ಯಾತ್ರೆ’ಗೆ ಚಾಲನೆ ನೀಡಲಾಯಿತು.

ಹರಿಹರ ತಾಲೂಕಿನ ದೇವರಬೆಳಕೆರೆ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಯಾತ್ರೆಗೆ ಚಾಲನೆ ನೀಡಿದ ನಿಖಿಲ್ ಕುಮಾರಸ್ವಾಮಿ, ಬಳಿಕ ದೇವರಬೆಳಕೆರೆ, ಕೆ.ಬೇವಿನಹಳ್ಳಿ, ಬನ್ನಿಕೋಡು ಹಾಗೂ ಕಮಲಾಪುರ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿದರು.

ದೇವರಬೆಳಕೆರೆ ಗ್ರಾಮದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅವರು ರೈತರನ್ನು ಉದ್ದೇಶಿಸಿ ಮಾತನಾಡಿದರು. ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಸೇರಿದಂತೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಯಾತ್ರೆಗೆ ಸಾಥ್ ನೀಡಿದರು.

ಈ ಬಾರಿ ರೈತರಿಗೆ ಬಿತ್ತನೆಯ ಗುರಿ ಮುಟ್ಟಲು ಸಾಧ್ಯವಾಗಿಲ್ಲ. ದಾವಣಗೆರೆ ಜಿಲ್ಲೆಯಲ್ಲಿ ಭತ್ತ, ಮೆಕ್ಕೆಜೋಳ ಹಾಗೂ ರಾಗಿ ಬೆಳೆಗಳು ಒಣಗಿ ಹೋಗಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರೊಂದಿಗೆ ನಿಲ್ಲುವುದು ಸರ್ಕಾರದ ಧರ್ಮ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

“ಜನಪ್ರತಿನಿಧಿಗಳ ಮೊದಲ ಆದ್ಯತೆ ಅನ್ನದಾತನನ್ನು ಕಾಪಾಡುವುದಾಗಿರಬೇಕು. ಆದರೆ ರೈತರ ಕೂಗು ಕೇಳಲು ಯಾರೂ ಮುಂದಾಗುತ್ತಿಲ್ಲ. ಕೇವಲ ಯೋಜನೆಗಳು ಹಾಗೂ ಘೋಷಣೆಗಳಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಸರ್ಕಾರ ರೈತರ ನೆರವಿಗೆ ತಕ್ಷಣ ಧಾವಿಸಬೇಕು” ಎಂದು ಅವರು ಒತ್ತಾಯಿಸಿದರು.

ರಾಜ್ಯದಲ್ಲಿ ಕಳೆದ ಮೂರೂವರೆ ವರ್ಷಗಳಲ್ಲಿ 3 ಸಾವಿರಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.

ದಾವಣಗೆರೆ ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ 100ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದ ಅವರು, ಬೆಳೆಸಾಲ ತೀರಿಸಲಾಗದೆ ಸಂಕಷ್ಟದಲ್ಲಿರುವ ರೈತರ ಸಾಲಮನ್ನಾ ಮಾಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಬರಪೀಡಿತ 220 ತಾಲೂಕುಗಳನ್ನು ಘೋಷಿಸಲಾಗಿದ್ದರೂ ರೈತರಿಗೆ ₹2,500 ಪರಿಹಾರ ನೀಡುವ ಕುರಿತು ಇನ್ನೂ ಸರ್ಕಾರದ ಆದೇಶ ಹೊರಬಿದ್ದಿಲ್ಲ. “₹2,500 ಒಬ್ಬ ರೈತನಿಗೆ ನೀಡುತ್ತಾರೋ ಅಥವಾ ಕುಟುಂಬಕ್ಕೆ ನೀಡುತ್ತಾರೋ ಎಂಬುದೇ ಸ್ಪಷ್ಟವಾಗಿಲ್ಲ.

ರೈತರು ಒಂದು ಎಕರೆ ಬೆಳೆ ಬೆಳೆಯಲು ₹25 ಸಾವಿರದಿಂದ ₹30 ಸಾವಿರದವರೆಗೆ ಖರ್ಚು ಮಾಡಿದ್ದಾರೆ. ಅಷ್ಟಾದರೂ ನೆರವು ನೀಡಿದರೆ ರೈತರು ಕೊಂಚ ಉಸಿರಾಡಬಹುದು.

₹2,500ರಲ್ಲಿ ರೈತರು ಬದುಕಲು ಸಾಧ್ಯವೇ?” ಎಂದು ಅವರು ಪ್ರಶ್ನಿಸಿದರು.ರಾಜ್ಯ ಸರ್ಕಾರದ ಸಾಲದ ಬಗ್ಗೆಯೂ ಮಾತನಾಡಿದ ನಿಖಿಲ್, “ಮೂರುವರೆ ವರ್ಷದಲ್ಲಿ ರಾಜ್ಯ ಸರ್ಕಾರ ₹4.36 ಲಕ್ಷ ಕೋಟಿ ಸಾಲ ಮಾಡಿದೆ.

ಇದಕ್ಕೆ ವರ್ಷಕ್ಕೆ ₹48 ಸಾವಿರ ಕೋಟಿ ಬಡ್ಡಿ ಪಾವತಿಸುತ್ತಿದೆ. ಹೊಸ ಯೋಜನೆಗಳನ್ನು ಘೋಷಿಸಬೇಡಿ ಎಂದು ಹಣಕಾಸು ಇಲಾಖೆ ಪತ್ರ ಬರೆಯುವ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ರೈತರನ್ನು ಉಳಿಸಲು ಸರ್ಕಾರ ಏನು ಕ್ರಮ ಕೈಗೊಳ್ಳಲಿದೆ?” ಎಂದು ಪ್ರಶ್ನಿಸಿದರು.

ಭದ್ರಾ ಯೋಜನೆ ಸೇರಿದಂತೆ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ರೈತರಿಗೆ ನೀಡಿದ ಭರವಸೆಗಳನ್ನು ಕಾರ್ಯರೂಪಕ್ಕೆ ತರಬೇಕು.

ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ನೀರಾವರಿ ಅನುದಾನ ಹಾಗೂ ಎನ್ಡಿಆರ್ಎಫ್ ನಿಧಿ ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.

ನೈಸ್ ಯೋಜನೆಗಾಗಿ ರೈತರ ಭೂಮಿ ಪಡೆದು ವಂಚಿಸಲಾಗಿದೆ ಎಂದು ಆರೋಪಿಸಿದ ನಿಖಿಲ್ ಕುಮಾರಸ್ವಾಮಿ, ರೈತರ ಪರವಾಗಿ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಧ್ವನಿ ಎತ್ತಿದ್ದಾರೆ ಎಂದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande