
ಬೆಂಗಳೂರು, 03 ಅಕ್ಟೋಬರ್ (ಹಿ.ಸ.):
ಕಾಂಗ್ರೆಸ್ ನಾಯಕರು ನಡೆಸಿದ ಪ್ರತಿಭಟನೆಯನ್ನು ವಿರೋಧಿಸಿದ್ದ ಬಿಜೆಪಿ ನಾಯಕರು ಇದೀಗ ತಾವೇ ಪೊಲೀಸ್ ಆಯುಕ್ತರ ಕಚೇರಿ ಮುಂದೆ ಧರಣಿ ನಡೆಸುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.
ಕೇಂದ್ರ ಚುನಾವಣಾ ಆಯುಕ್ತರ ವಿರುದ್ಧ ಕಾಂಗ್ರೆಸ್ ನಾಯಕರು ಪ್ರಜಾಪ್ರಭುತ್ವದ ಹಕ್ಕಿಗಾಗಿ ಧ್ವನಿ ಎತ್ತಿದಾಗ, ಬಿಜೆಪಿ ನಾಯಕರು ನ್ಯಾಯಾಲಯದ ಆದೇಶದ ಬಗ್ಗೆ ಮಾತನಾಡಿ ಪ್ರತಿಭಟನೆಯನ್ನು ವಿರೋಧಿಸಿದ್ದರು.
ಆದರೆ ಇದೀಗ ಅದೇ ರೀತಿಯಲ್ಲಿ ಪೊಲೀಸ್ ಆಯುಕ್ತರ ಕಚೇರಿ ಮುಂದೆ ಧರಣಿ ನಡೆಸುವ ಮೂಲಕ ಬಿಜೆಪಿ ನಾಯಕರ ಕಪಟತನ ಬಯಲಾಗಿದೆ ಎಂದು ರಾಮಲಿಂಗಾರೆಡ್ಡಿ ಟೀಕಿಸಿದ್ದಾರೆ.
“ಕಾಂಗ್ರೆಸ್ ಮಾಡಿದರೆ ತಪ್ಪು, ಅದೇ ಕೆಲಸವನ್ನು ಬಿಜೆಪಿ ನಾಯಕರು ಮಾಡಿದರೆ ನ್ಯಾಯವೇ? ಜನಸಾಮಾನ್ಯರು ಹಾಗೂ ಕಾಂಗ್ರೆಸ್ಗೆ ಒಂದು ಕಾನೂನು, ಬಿಜೆಪಿ ನಾಯಕರಿಗೆ ಮತ್ತೊಂದು ಕಾನೂನು ಎಂಬ ರೀತಿಯ ಪ್ರತ್ಯೇಕ ನೀತಿ ರಾಜ್ಯದ ಜನರಿಗೆ ತಿಳಿದಿದೆ” ಎಂದು ಅವರು ಸಾಮಾಜಿಕ ಜಾಲತಾಣದ ಮೂಲಕ ಹೇಳಿದ್ದಾರೆ.
ಚುನಾವಣಾ ಆಯೋಗ ಕೇವಲ ಮುಖವಾಡವಾಗಿದ್ದು, ತೆರೆಮರೆಯಲ್ಲಿ ಬಿಜೆಪಿ ಸರ್ಕಾರ ಮತ್ತು ಅದರ ನಾಯಕರು ಸ್ವಾರ್ಥ ಸಾಧನೆಗಾಗಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎಂದು ಸಚಿವರು ಆರೋಪಿಸಿದ್ದಾರೆ.
ಇಂತಹ ಕ್ರಮಗಳು ಪ್ರಜಾಪ್ರಭುತ್ವ ಹಾಗೂ ಜನರ ಮೂಲಭೂತ ಹಕ್ಕುಗಳಿಗೆ ಧಕ್ಕೆ ತರುತ್ತವೆ ಎಂದಿರುವ ಅವರು, ಮತದಾರರು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲುಗಳ ಮೇಲೆ ಕುಳಿತು ಪ್ರತಿಭಟನೆ ನಡೆಸುವ ಬದಲು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಬಿಜೆಪಿ ನಾಯಕರು ನಡೆದುಕೊಳ್ಳಬೇಕು ಎಂದು ರಾಮಲಿಂಗಾರೆಡ್ಡಿ ಸಲಹೆ ನೀಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R