
ಬೆಂಗಳೂರು, ಅಕ್ಟೋಬರ್ 3 (ಹಿ.ಸ.): ಸಿಲಿಕಾನ್ ಸಿಟಿ ಬೆಂಗಳೂರು ಡಿಸೆಂಬರ್ನಲ್ಲಿ ಹತ್ತು ದಿನಗಳ ಕಾಲ ಜಾತ್ರೆಯ ಸಂಭ್ರಮಕ್ಕೆ ಸಜ್ಜಾಗುತ್ತಿದೆ. ಡಿಸೆಂಬರ್ 4ರಿಂದ 13ರವರೆಗೆ ‘ಬೆಂಗಳೂರು ಜಾತ್ರೆ’ ಆಯೋಜಿಸಲು ಉದ್ದೇಶಿಸಲಾಗಿದ್ದು, ನಗರದ ಒಂದೇ ಸ್ಥಳಕ್ಕೆ ಕಾರ್ಯಕ್ರಮಗಳನ್ನು ಸೀಮಿತಗೊಳಿಸದೆ ವಿವಿಧ ಭಾಗಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಲು ಯೋಜಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
‘ವೈವಿಧ್ಯತೆಯಲ್ಲಿ ಏಕತೆ–ಸಂಭ್ರಮದಲ್ಲಿ ಬೆಂಗಳೂರು’ ಎಂಬ ಆಶಯದೊಂದಿಗೆ ನಡೆಯಲಿರುವ ಜಾತ್ರೆಯಲ್ಲಿ ಕಲೆ, ಸಂಸ್ಕೃತಿ, ಸಂಗೀತ, ನೃತ್ಯ, ಆಹಾರ ಹಾಗೂ ಸೃಜನಶೀಲತೆಗೆ ಆದ್ಯತೆ ನೀಡಲಾಗುವುದು. ಸರ್ಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ಉದ್ಯಾನಗಳು, ರಸ್ತೆಗಳು ಹಾಗೂ ಸಾಂಸ್ಕೃತಿಕ ಕೇಂದ್ರಗಳಲ್ಲಿಯೂ ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸರ್ಕಾರಿ ಕಟ್ಟಡಗಳಲ್ಲಿ ವಿಶೇಷ ಪ್ರದರ್ಶನಗಳು, ಮಾರ್ಗದರ್ಶಿತ ಪ್ರವಾಸಗಳು ಹಾಗೂ ನಾಗರಿಕ ಸಂವಾದಗಳನ್ನು ನಡೆಸಲು ಚಿಂತನೆ ನಡೆದಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಜಾನಪದ ಕಲೆಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮೂಲಕ ಕರ್ನಾಟಕದ ವೈವಿಧ್ಯಮಯ ಆಹಾರ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುವುದು ಎಂದು ತಿಳಿಸಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲೂ ಜಾತ್ರೆಯ ಅಂಗವಾಗಿ ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ರಸ್ತೆಗಳು, ಉದ್ಯಾನಗಳು ಮತ್ತು ಆಟದ ಮೈದಾನಗಳ ಜತೆಗೆ ಮೆಟ್ರೋ ನಿಲ್ದಾಣಗಳ ಕಾನ್ಕೋರ್ಸ್ಗಳಲ್ಲಿಯೂ ಕಲಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಯೋಜಿಸಲಾಗಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಗಳಿಗೂ ‘ಬೆಂಗಳೂರು ಜಾತ್ರೆ’ಯ ಬ್ರ್ಯಾಂಡಿಂಗ್ ನೀಡಲು ಉದ್ದೇಶಿಸಲಾಗಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮೂಲಸೌಕರ್ಯಗಳನ್ನೂ ಕಲಾ ಹಾಗೂ ಸಮುದಾಯ ಕಾರ್ಯಕ್ರಮಗಳಿಗೆ ಬಳಸುವ ಕುರಿತು ಚಿಂತನೆ ನಡೆಸಲಾಗಿದೆ.
ಶಾಲೆ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೂ ವೇದಿಕೆ ಕಲ್ಪಿಸಲಾಗುವುದು. ಭಾರತೀಯ ವಿಜ್ಞಾನ ಸಂಸ್ಥೆ, ಭಾರತೀಯ ನಿರ್ವಹಣಾ ಸಂಸ್ಥೆ, ರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿ, ಚಿತ್ರಕಲಾ ಪರಿಷತ್, ತಾರಾಲಯ ಸೇರಿದಂತೆ ವಿವಿಧ ಸಂಸ್ಥೆಗಳು ಭಾಗವಹಿಸುವ ನಿರೀಕ್ಷೆಯಿದೆ.
ರಂಗಶಂಕರ, ಬೆಂಗಳೂರು ಅಂತಾರಾಷ್ಟ್ರೀಯ ಕೇಂದ್ರ, ಮ್ಯೂಸಿಯಂ ಆಫ್ ಆರ್ಟ್ ಅಂಡ್ ಫೋಟೋಗ್ರಫಿ ಸೇರಿದಂತೆ ಕಲಾ–ಸಾಂಸ್ಕೃತಿಕ ಸಂಸ್ಥೆಗಳಿಗೂ ಕಾರ್ಯಕ್ರಮ ಆಯೋಜಿಸಲು ಮುಕ್ತ ಅವಕಾಶ ನೀಡಲಾಗುವುದು. ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ಸ್ವಯಂಸೇವಾ ಸಂಸ್ಥೆಗಳು, ಪ್ರತಿಷ್ಠಾನಗಳು, ಸಾಮಾಜಿಕ ಹೊಣೆಗಾರಿಕೆ ನಿಧಿ ಸಂಸ್ಥೆಗಳು, ಮಾಹಿತಿ ತಂತ್ರಜ್ಞಾನ ಕಂಪನಿಗಳು ಹಾಗೂ ಇತರ ಉದ್ಯಮ ಸಂಸ್ಥೆಗಳಿಗೂ ತಮ್ಮ ಪ್ರದೇಶ ಅಥವಾ ಆವರಣಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ಆಹ್ವಾನ ನೀಡಲಾಗುವುದು ಎಂದು ಸಚಿವರು ಹೇಳಿದರು.
ಜಾತ್ರೆಯ ಆಯೋಜನೆಯಲ್ಲಿ ಸರ್ಕಾರದ ಪಾತ್ರ ಆಯೋಜಕಕ್ಕಿಂತ ಸಮನ್ವಯಕಾರಕವಾಗಿರಲಿದೆ. ಜಾತ್ರೆಯ ಎಲ್ಲ ಕಾರ್ಯಕ್ರಮಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಲು ಏಕೀಕೃತ ಗುರುತು, ಅಂತರ್ಜಾಲ ತಾಣ ಹಾಗೂ ಸಮಗ್ರ ಕಾರ್ಯಕ್ರಮ ವೇಳಾಪಟ್ಟಿಯನ್ನು ರೂಪಿಸುವ ಉದ್ದೇಶವಿದೆ.
‘ನಮ್ಮ ರಸ್ತೆ, ನಮ್ಮ ಬಡಾವಣೆ, ನಮ್ಮ ಸಂಸ್ಥೆ, ನಮ್ಮ ಕಲೆ–ಎಲ್ಲರ ಜಾತ್ರೆ’ ಎಂಬ ಆಶಯದೊಂದಿಗೆ ಬೆಂಗಳೂರು ಜಾತ್ರೆಯಲ್ಲಿ ನಗರದ ಎಲ್ಲ ವರ್ಗದ ಜನರು ಭಾಗವಹಿಸಲು ಮುಕ್ತ ಆಹ್ವಾನ ನೀಡಲಾಗುತ್ತಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R