
ಭೋಪಾಲ್, 03 ಅಕ್ಟೋಬರ್ (ಹಿ.ಸ.):
2029ರ ಡಿಸೆಂಬರ್ 31ರ ಬಳಿಕ ಮಧ್ಯಪ್ರದೇಶದಲ್ಲಿ ಮಾದಕವಸ್ತುಗಳಿಗೆ ಯಾವುದೇ ಅವಕಾಶ ಇರುವುದಿಲ್ಲ. ರಾಜ್ಯವನ್ನು ಮಾದಕವಸ್ತು ಮುಕ್ತಗೊಳಿಸಲು ವಿಸ್ತೃತ ಯೋಜನೆ ರೂಪಿಸಲಾಗುತ್ತಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಹೇಳಿದರು.
ಭೋಪಾಲ್‌ನ ಬಿಎಚ್‌ಇಎಲ್ ದಸರಾ ಮೈದಾನದಲ್ಲಿ ಶನಿವಾರ ನಡೆದ ಗೋಪಾಲಕರ ಸಮಾವೇಶ ಹಾಗೂ ಪೊಲೀಸ್ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಧ್ಯಪ್ರದೇಶದ ತಾಯಂದಿರಿಗೆ ಈ ಭರವಸೆ ನೀಡಲು ಬಂದಿದ್ದೇನೆ. 2029ರ ಡಿಸೆಂಬರ್ 31ರ ಬಳಿಕ ರಾಜ್ಯದಲ್ಲಿ ಅವರ ಮಕ್ಕಳು ಮಾದಕವಸ್ತುಗಳ ಸಮಸ್ಯೆ ಎದುರಿಸುವಂತಾಗಬಾರದು ಎಂಬ ಗುರಿಯೊಂದಿಗೆ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಮಾದಕವಸ್ತುಗಳ ವಿರುದ್ಧದ ಕ್ರಮವನ್ನು ಆಂತರಿಕ ಭದ್ರತೆಯೊಂದಿಗೆ ಜೋಡಿಸುತ್ತಿರುವುದಾಗಿ ತಿಳಿಸಿದ ಶಾ, ಮಾದಕವಸ್ತುಗಳ ವಿರುದ್ಧದ ಕಾರ್ಯಾಚರಣೆಯನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುವ ಅಗತ್ಯವಿದೆ ಎಂದರು.
‘ನ್ಯಾಯವೇ ಗುರಿ, ಶಿಕ್ಷೆಯಲ್ಲ’
ಹೊಸ ಅಪರಾಧ ಕಾನೂನುಗಳ ಕುರಿತು ಮಾತನಾಡಿದ ಅಮಿತ್ ಶಾ, ಇವು ನ್ಯಾಯ ಕೇಂದ್ರಿತವಾಗಿದ್ದು, ‘ನ್ಯಾಯವೇ ಗುರಿ, ಶಿಕ್ಷೆಯಲ್ಲ’ ಎಂಬುದು ಇದರ ಮೂಲಮಂತ್ರವಾಗಿದೆ ಎಂದರು.
ಬ್ರಿಟಿಷರ ಕಾಲದಲ್ಲಿ ರೂಪಿಸಲಾದ ಅಪರಾಧ ಕಾನೂನುಗಳ ಉದ್ದೇಶ ಅಂದಿನ ಆಡಳಿತ ಮತ್ತು ವ್ಯವಸ್ಥೆಯ ರಕ್ಷಣೆಯಾಗಿತ್ತು. ಆದರೆ ಹೊಸ ಕಾನೂನುಗಳಲ್ಲಿ ಭಾರತೀಯ ನಾಗರಿಕರ ಗೌರವ, ಆಸ್ತಿ ಮತ್ತು ದೇಹದ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಪ್ರಥಮ ಮಾಹಿತಿ ವರದಿ ದಾಖಲಾದ ಹಂತದಿಂದ ಉಚ್ಚತಮ ನ್ಯಾಯಾಲಯದವರೆಗೆ ನ್ಯಾಯ ದೊರಕಿಸುವ ಪ್ರಕ್ರಿಯೆಯನ್ನು ಮೂರು ವರ್ಷಗಳೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದರು.
ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮಗಳು 2024ರ ಜುಲೈ 1ರಿಂದ ಜಾರಿಗೆ ಬಂದಿವೆ. ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಪೊಲೀಸ್, ಅಭಿಯೋಜನೆ ಹಾಗೂ ನ್ಯಾಯಾಂಗದ ಹಲವು ಪ್ರಕ್ರಿಯೆಗಳನ್ನು ಕಾಲಮಿತಿಗೆ ಒಳಪಡಿಸಲಾಗಿದೆ ಎಂದು ಅವರು ಹೇಳಿದರು.
35 ಸಾವಿರ ಗೋಪಾಲಕರ ನಡುವೆ ‘ಶ್ವೇತ ಕ್ರಾಂತಿ’ ಸಂದೇಶ
11 ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು 35 ಸಾವಿರ ಗೋಪಾಲಕರನ್ನು ಉದ್ದೇಶಿಸಿ ಮಾತನಾಡಿದ ಶಾ, ಮಧ್ಯಪ್ರದೇಶದಲ್ಲಿ ಹಾಲು ಉತ್ಪಾದನೆ ಹೆಚ್ಚಿಸುವಲ್ಲಿ ಸಹಕಾರ ಕ್ಷೇತ್ರ ಪ್ರಮುಖ ಪಾತ್ರ ವಹಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಗೋಶಾಲೆಗಳಿಗೆ ಸುಮಾರು ₹101 ಕೋಟಿ ನೆರವು ನೀಡುವ ಘೋಷಣೆ ಮಾಡಲಾಯಿತು. ಉಜ್ಜಯಿನಿಯಲ್ಲಿ ₹255 ಕೋಟಿ ವೆಚ್ಚದಲ್ಲಿ ದಿನಕ್ಕೆ 3 ಲಕ್ಷ ಲೀಟರ್ ಸಾಮರ್ಥ್ಯದ ಹಾಲು ಸಂಸ್ಕರಣಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಭೋಪಾಲ್‌ನಲ್ಲಿ ಹಾಲಿನ ಉತ್ಪನ್ನಗಳ ಘಟಕ ಮತ್ತು ಅತ್ಯಾಧುನಿಕ ಪ್ರಯೋಗಾಲಯ ಹಾಗೂ ಶಿವಪುರಿಯಲ್ಲಿ ಕಿರು ಹಾಲು ಘಟಕದ ಬಲವರ್ಧನೆ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಭೋಪಾಲ್ ಮತ್ತು ಇಂದೋರ್ ಹಾಲು ಒಕ್ಕೂಟಗಳ ಸದಸ್ಯರಿಗೆ ಬೋನಸ್, ಗೋಶಾಲೆಗಳಿಗೆ ₹101 ಕೋಟಿ ನೆರವು ಹಾಗೂ ಹಾಲು ಸಹಕಾರಿ ಸಂಘಗಳ ಸದಸ್ಯರಿಗೆ ₹15.10 ಕೋಟಿ ಲಾಭಾಂಶವನ್ನು ಏಕಕಾಲದಲ್ಲಿ ವಿತರಿಸಲಾಯಿತು.
ಲಕ್ಷಾಧಿಪತಿ ಗೋಪಾಲಕ ಮಹಿಳೆಯರನ್ನು ಸನ್ಮಾನಿಸಲಾಯಿತು. ಡಾ. ಬಿ.ಆರ್. ಅಂಬೇಡ್ಕರ್ ಕಾಮಧೇನು ಯೋಜನೆಯ ಫಲಾನುಭವಿಗಳಿಗೆ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು.
ಜಾನುವಾರುಗಳ ಉತ್ಪಾದಕತೆ ಹೆಚ್ಚಿಸಲು ತಳಿ ಸುಧಾರಣೆ
ಮಧ್ಯಪ್ರದೇಶದಲ್ಲಿ ಜಾನುವಾರುಗಳ ಉತ್ಪಾದಕತೆ ಹೆಚ್ಚಿಸಲು ತಳಿ ಸುಧಾರಣೆಗೆ ಒತ್ತು ನೀಡಲಾಗುವುದು ಎಂದು ಶಾ ಹೇಳಿದರು. ಭೋಪಾಲ್‌ನಲ್ಲಿ ಸುಮಾರು ₹12 ಕೋಟಿ ವೆಚ್ಚದಲ್ಲಿ ಕೇಂದ್ರ ಪ್ರಯೋಗಾಲಯ ನಿರ್ಮಿಸುವ ಯೋಜನೆಯನ್ನು ಅವರು ಉಲ್ಲೇಖಿಸಿದರು.
ಶಿವಪುರಿಯಲ್ಲಿ ಕಿರು ಹಾಲು ಘಟಕದ ಯೋಜನೆಯನ್ನೂ ಪ್ರಸ್ತಾಪಿಸಿದ ಅವರು, ಲಿಂಗ ವಿಂಗಡಿತ ವೀರ್ಯ ತಂತ್ರಜ್ಞಾನದ ಮೂಲಕ ಹೆಣ್ಣು ಕರುಗಳ ಸಂಖ್ಯೆಯನ್ನು ಹೆಚ್ಚಿಸಿ ಹಾಲು ಉತ್ಪಾದನೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ತಮ್ಮ ಭಾಷಣದಲ್ಲಿ ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದ ಅಮಿತ್ ಶಾ, ಕೇಂದ್ರ ಸರ್ಕಾರದ ಸಾಧನೆಗಳನ್ನು ಅಂಕಿ-ಅಂಶಗಳೊಂದಿಗೆ ವಿವರಿಸಿದರು.
ಕಳೆದ ಒಂದು ದಶಕದಲ್ಲಿ ದೇಶದ ಹಾಲು ಉತ್ಪಾದನೆ ಹೆಚ್ಚಾಗಿದೆ. 2014-15ರಲ್ಲಿ ಪ್ರತಿ ವ್ಯಕ್ತಿಗೆ 307 ಗ್ರಾಂನಷ್ಟಿದ್ದ ಹಾಲಿನ ಲಭ್ಯತೆ ಈಗ 485 ಗ್ರಾಂಗೆ ಏರಿಕೆಯಾಗಿದೆ ಎಂದು ಹೇಳಿದರು.
ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರ ದೇಶದ ಪ್ರಮುಖ ಹಾಲು ಉತ್ಪಾದಕ ರಾಜ್ಯಗಳಾಗಿವೆ ಎಂದು ಅವರು ತಿಳಿಸಿದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.