
ಕೋಲಾರ, 03 ಅಕ್ಟೋಬರ್ (ಹಿ.ಸ) :
ಸಾರ್ವಜನಿಕರ ಸುರಕ್ಷತೆ, ಸುಗಮ ಸಂಚಾರ ಹಾಗೂ ಆಟೋ ಚಾಲಕರ ಶ್ರೇಯೋಭಿವೃದ್ಧಿಯ ಹಿತದೃಷ್ಟಿಯಿಂದ ಆಡಳಿತ ಮತ್ತು ಚಾಲಕರ ನಡುವೆ ಸಮನ್ವಯತೆ ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ತಿಳಿಸಿದ್ದಾರೆ.
ಸಾರಿಗೆ ಇಲಾಖೆ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿಯಮಗಳ ಪಾಲನೆಯೊಂದಿಗೆ ಚಾಲಕರ ನ್ಯಾಯಯುತ ಸಮಸ್ಯೆಗಳನ್ನು ಬಗೆಹರಿಸಲು ಆಡಳಿತ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಸಭೆಯಲ್ಲಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳು ತಮ್ಮ ದೈನಂದಿನ ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿಟ್ಟರು. ಮುಖ್ಯವಾಗಿ, ಗ್ರಾಮೀಣ ಭಾಗದ ಆಟೋಗಳು ನಗರ ಪ್ರದೇಶದೊಳಗೆ ಪ್ರವೇಶಿಸಿ ವಹಿವಾಟು ನಡೆಸುತ್ತಿರುವುದರಿಂದ ನಗರದ ಆಟೋ ಚಾಲಕರಿಗೆ ಆರ್ಥಿಕವಾಗಿ ತೊಂದರೆಯಾಗುತ್ತಿದೆ ಎಂದು ಅವರು ಅಳಲು ತೋಡಿಕೊಂಡರು.
ನಗರದ ಹಳೇ ಬಸ್ ನಿಲ್ದಾಣ, ಕಾಲೇಜುಗಳ ಬಳಿ ಹಾಗೂ ಪ್ರಮುಖ ವೃತ್ತಗಳಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಮತ್ತು ಇಳಿಸಲು ಸೂಕ್ತ ಸ್ಥಳಾವಕಾಶದ ಕೊರತೆಯಿದೆ. ಅಲ್ಲದೆ, ರಾತ್ರಿ ವೇಳೆ ಬಸ್ ನಿಲ್ದಾಣಗಳ ಬಳಿ ವಾಹನ ನಿಲ್ಲಿಸುವಾಗ ಚಾಲಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಭೆಲ್ಲಿ ವಿವರಿಸಿದರು.
ಚಾಲಕರ ಬೇಡಿಕೆಗಳನ್ನು ತಾಳ್ಮೆಯಿಂದ ಆಲಿಸಿದ ಜಿಲ್ಲಾಧಿಕಾರಿಗಳು, ಸಮಸ್ಯೆಗಳ ಪರಿಹಾರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದರು. ಚಾಲಕರು ತಮ್ಮ ವಾಹನಗಳ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಹಾಗೂ ಕಡ್ಡಾಯವಾಗಿ ಚಾಲನಾ ಪರವಾನಗಿ ಮತ್ತು ಸಮವಸ್ತ್ರವನ್ನು ಅಳವಡಿಸಿಕೊಳ್ಳಲು ನವೆಂಬರ್ ೧ ರವರೆಗೆ ಮುಕ್ತ ಕಾಲಾವಕಾಶ ನೀಡಲಾಗಿದೆ ಎಂದು ತಿಳಿಸಿದರು.
ನಗರದ ಪ್ರಮುಖ ವೃತ್ತಗಳು ಮತ್ತು ಕಾಲೇಜುಗಳ ಬಳಿ ವ್ಯವಸ್ಥಿತವಾಗಿ ಆಟೋ ನಿಲ್ದಾಣಗಳನ್ನು ಗುರುತಿಸಲು ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಲಾಯಿಸಲು ನೀಡಬಾರದು ಎಚ್ಚರಿಕೆ ನೀಡಿದರು. ಜೊತೆಗೆ, ಸಾರ್ವಜನಿಕರ ಅನುಕೂಲಕ್ಕಾಗಿ ರೈಲ್ವೆ ನಿಲ್ದಾಣ ಮತ್ತು ಪ್ರಮುಖ ಬಸ್ ನಿಲ್ದಾಣಗಳ ಬಳಿ 'ಪ್ರಿಪೇಯ್ಡ್ ಆಟೋ' ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಸಿ. ಜಗದೀಶ್ ಮಾತನಾಡಿ, ಆಟೋ ಚಾಲಕರನ್ನು ಶೋಷಣೆಯಿಂದ ಮುಕ್ತಗೊಳಿಸಲು ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಲು ಪ್ರತಿ ಆಟೋಗೂ ಆಟೋ ನಿಲ್ದಾಣದ ಆಧಾರದ ಮೇಲೆ ನಿರ್ದಿಷ್ಟ ಸಂಖ್ಯೆ ನೀಡುವ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ತಿಳಿಸಿದರು.
ಇದರಿಂದ ಅಪರಿಚಿತ ವಾಹನಗಳಿಂದ ಆಗುವ ತೊಂದರೆ ತಪ್ಪಲಿದ್ದು, ರಾತ್ರಿ ವೇಳೆ ಪ್ರಯಾಣಿಸುವ ಮಹಿಳೆಯರು ಹಾಗೂ ವೃದ್ಧರಿಗೆ ಹೆಚ್ಚಿನ ಭದ್ರತೆ ಸಿಗಲಿದೆ ಎಂದು ವಿವರಿಸಿದರು. ಸಂಚಾರ ನಿರ್ವಹಣೆಯನ್ನು ಸರಳೀಕರಿಸಲು 'ಟ್ರಾಫಿಕ್ ವಾರ್ಡನ್'ಗಳನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್ ಅವರು ಮಾತನಾಡಿ, ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಒಳಭಾಗದಲ್ಲಿ ಆಟೋಗಳು ಬರುವುದರಿಂದ ಪ್ರಯಾಣಿಕರ ಓಡಾಟಕ್ಕೆ ಹಾಗೂ ಬಸ್ಸುಗಳ ಸಂಚಾರಕ್ಕೆ ತೀವ್ರ ಅಡ್ಡಿಯಾಗುತ್ತಿದೆ. ಬಸ್ ನಿಲ್ದಾಣದ ಪ್ಲಾಟ್ಫಾರ್ಮ್ಗಳ ಬಳಿ ಆಟೋಗಳು ಪ್ರವೇಶಿಸದಂತೆ ತಡೆಯಲು ಕ್ರಮ ಕೈಗೊಳ್ಳಲಾಗಿದ್ದು, ಚಾಲಕರು ನಿಲ್ದಾಣದ ಹೊರಗೆ ನಿಗದಿಪಡಿಸಿದ ಅಂತರದಲ್ಲಿಯೇ ವಾಹನಗಳನ್ನು ನಿಲ್ಲಿಸಿ ಆಡಳಿತದೊಂದಿಗೆ ಸಹಕರಿಸುವಂತೆ ಅವರು ಸೌಮ್ಯವಾಗಿ ಮನವಿ ಮಾಡಿದರು. ಸಭೆಯಲ್ಲಿ ಪೊಲೀಸ್, ಸಾರಿಗೆ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಆಟೋ ಚಾಲಕರ ಸಂಘದ ಮುಖಂಡರು ಸಕ್ರಿಯವಾಗಿ ಪಾಲ್ಗೊಂಡು ಚರ್ಚೆ ನಡೆಸಿದರು.
ಸಭೆಯಲ್ಲಿ ಜಿಲ್ಲಾ ಸಾರಿಗೆ ಅಧಿಕಾರಿ ನಯಾಜ್ ಪಾಷಾ, ರಾಜ್ಯ ಆಟೋ ಯೂನಿಯನ್ ಅಧ್ಯಕ್ಷ ಕೆ.ವಿ. ಸುರೇಶ್ ಕುಮಾರ್, ಎಲ್ಲಾ ಸಾರಿಗೆ ಇನ್ಸ್ಪೆಕ್ಟರ್ಗಳು, ಯೂನಿಯನ್ ಮುಖಂಡರಾದ ಮುನಿವೆಂಕಟಪ್ಪ, ಮುಷ್ಠಾಕ್, ಏಕಾಂಬರ0, ಜಗದೀಶ, ಮದನಿ, ಮಂಜುನಾಥ ಅವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್