ಕೋಲಾರ ಆರ್.ಎಲ್.ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಯಶಸ್ವಿ ಮೃತ ದಾನಿಯ ಯಕೃತ್ ಕಸಿ
ಕೋಲಾರ ಆರ್.ಎಲ್.ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಯಶಸ್ವಿ ಮೃತ ದಾನಿಯ ಯಕೃತ್ ಕಸಿ
ಕೋಲಾರ ನಗರ ಹೊರವಲಯದ ಟಮಕ ಆರ್.ಎಲ್.ಜಾಲಪ್ಪ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಯಶಸ್ವಿಯಾಗಿ ಯಕೃತ್ ಕಸಿ ಮಾಡಲಾಯಿತು.


ಕೋಲಾರ, 03 ಅಕ್ಟೋಬರ್ (ಹಿ.ಸ) :

ಮೃತ ದಾನಿಯಿಂದ ಯಕೃತ್ತಿನ ಕಸಿಯನ್ನು ಯಶಸ್ವಿಯಾಗಿ ನೆರವೇರಿಸುವ ಮೂಲಕ ಉನ್ನತ ಮಟ್ಟದ ಆರೋಗ್ಯ ಸೇವೆಯಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಈ ಸಾಧನೆಯೊಂದಿಗೆ ಆಸ್ಪತ್ರೆಯ ಕಸಿ ಚಿಕಿತ್ಸಾ ಸೇವೆಗಳಲ್ಲಿ ಹೊಸ ಅಧ್ಯಾಯ ಆರಂಭವಾಗಿದ್ದು, ಯಕೃತ್ತಿನ ಕಸಿ ಚಿಕಿತ್ಸೆಗೆ ಇದುವರೆಗೆ ಪ್ರಮುಖ ಮಹಾನಗರಗಳಿಗೆ ತೆರಳಬೇಕಾಗಿದ್ದ ಕೋಲಾರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ರೋಗಿಗಳಿಗೆ ಜೀವ ಉಳಿಸುವ ಈ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯವು ಇನ್ನಷ್ಟು ಸಮೀಪಕ್ಕೆ ಬಂದಿದೆ ಎಂದು ಆಸ್ಪತ್ರೆಯ ಯಕೃತ್ ಕಸಿ ವಿಭಾಗದ ವೈದ್ಯಾಧಿಕಾರಿ ಡಾ. ರಾಧಿಕಾ ರಾಜಾ ತಿಳಿಸಿದ್ದಾರೆ.

ದೀರ್ಘಕಾಲೀನ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದ ೪೦ ವರ್ಷದ ರೋಗಿಗೆ ಈ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಡಾ. ರಾಧಿಕಾ ರಾಜಾ, ಡಾ. ಮನು ಭಾರದ್ವಾಜ್, ಡಾ. ಮನೋಜ್ ಕೆ.ಪಿ. ಹಾಗೂ ಏಂಜಲ್ ಬೇಬಿ ಪ್ರಿನ್ಸ್ ಅವರ ನೇತೃತ್ವದಲ್ಲಿ ಬಹುಶಿಸ್ತೀಯ ಕಸಿ ತಂಡವು ಯಶಸ್ವಿಯಾಗಿ ನೆರವೇರಿಸಿತು.

ಯಕೃತ್ತಿನ ಕಸಿ ಆಧುನಿಕ ವೈದ್ಯಕೀಯ ಕ್ಷೇತ್ರದ ಅತ್ಯಂತ ಸಂಕೀರ್ಣ ಚಿಕಿತ್ಸಾ ವಿಧಾನಗಳಲ್ಲಿ ಒಂದಾಗಿದೆ. ವಿವಿಧ ವಿಭಾಗಗಳ ನಡುವೆ ಅತ್ಯಂತ ಸಮನ್ವಯ ಮತ್ತು ನಿಖರವಾದ ಕಾರ್ಯನಿರ್ವಹಣೆ ಅಗತ್ಯವಿರುತ್ತದೆ. ಈ ಯಶಸ್ಸಿಗೆ ಕಸಿ ಶಸ್ತ್ರಚಿಕಿತ್ಸಾ ತಂಡ, ಹೆಪಟಾಲಜಿ ಮತ್ತು ಗ್ಯಾಸ್ಟ್ರೋಎಂಟರಾಲಜಿ ತಜ್ಞರು, ಅರಿವಳಿಕೆ ಮತ್ತು ತೀವ್ರ ನಿಗಾ ಘಟಕದ ತಂಡಗಳು, ಕಸಿ ಸಂಯೋಜಕರು, ನರ್ಸಿಂಗ್ ಸಿಬ್ಬಂದಿ, ಪ್ರಯೋಗಾಲಯ ಮತ್ತು ರಕ್ತಕೇಂದ್ರದ ಸಿಬ್ಬಂದಿ, ರೇಡಿಯಾಲಜಿ, ಪ್ಯಾಥಾಲಜಿ, ಫಾರ್ಮಸಿ, ಸೋಂಕು ನಿಯಂತ್ರಣ, ಬಯೋಮೆಡಿಕಲ್ ಎಂಜಿನಿಯರಿ0ಗ್ ಹಾಗೂ ಇತರ ಸಹಾಯಕ ವಿಭಾಗಗಳ ಸಿಬ್ಬಂದಿಯ ಸಮಗ್ರ ಕೊಡುಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಈ ಸಾಧನೆಯು ಸಂಕೀರ್ಣ ವೈದ್ಯಕೀಯ ಪರಿಸ್ಥಿತಿಗಳಿರುವ ರೋಗಿಗಳಿಗೆ ವಿಶೇಷ ಮತ್ತು ಉನ್ನತ ಮಟ್ಟದ ಚಿಕಿತ್ಸೆಯನ್ನು ಒದಗಿಸುವ ಆಸ್ಪತ್ರೆಯ ಹೆಚ್ಚುತ್ತಿರುವ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಕಸಿ ಪೂರ್ವ ಮೌಲ್ಯಮಾಪನ, ಶಸ್ತ್ರಚಿಕಿತ್ಸೆ, ತೀವ್ರ ನಿಗಾ ಚಿಕಿತ್ಸೆ, ಸೋಂಕು ನಿಯಂತ್ರಣ, ರಕ್ತ ಮತ್ತು ರಕ್ತ ಉತ್ಪನ್ನಗಳ ಪೂರೈಕೆ, ಪ್ರಯೋಗಾಲಯ ಪರೀಕ್ಷೆಗಳು, ಇಮೇಜಿಂಗ್, ರೋಗನಿರೋಧಕ ಶಮನ ಚಿಕಿತ್ಸೆ ಹಾಗೂ ದೀರ್ಘಕಾಲೀನ ಚಿಕಿತ್ಸಾ ಅನುಸರಣೆಗಾಗಿ ಅಗತ್ಯವಿರುವ ಅತ್ಯಾಧುನಿಕ ಮೂಲಸೌಕರ್ಯವನ್ನು ಆಸ್ಪತ್ರೆ ಹೊಂದಿದೆ.

“ಯಕೃತ್ತಿನ ಕಸಿ ಚಿಕಿತ್ಸೆಗೆ ಅತ್ಯುನ್ನತ ಪರಿಣತಿ, ನಿಖರತೆ ಮತ್ತು ವಿವಿಧ ವೈದ್ಯಕೀಯ ವಿಭಾಗಗಳ ನಡುವೆ ನಿರಂತರ ಹಾಗೂ ಸಮನ್ವಯಯುತ ತಂಡಕಾರ್ಯ ಅಗತ್ಯವಿದೆ. ಈ ಯಶಸ್ವಿ ಕಸಿ ನಮ್ಮ ಸಂಪೂರ್ಣ ತಂಡದ ಸಮರ್ಪಣೆ ಮತ್ತು ಬದ್ಧತೆಯ ಪ್ರತಿಬಿಂಬವಾಗಿದೆ. ಈ ಪ್ರದೇಶದ ಜನರಿಗೆ ಅತ್ಯಾಧುನಿಕ ಹಾಗೂ ಜೀವ ಉಳಿಸುವ ಆರೋಗ್ಯ ಸೇವೆಗಳನ್ನು ಇನ್ನಷ್ಟು ಸಮೀಪಕ್ಕೆ ತರುವ ನಮ್ಮ ನಿರಂತರ ಬದ್ಧತೆಯನ್ನು ಇದು ತೋರಿಸುತ್ತದೆ,” ಎಂದು ತಿಳಿಸಿದರು.

ಆರ್.ಎಲ್.ಜೆ.ಎಚ್ ಮತ್ತು ಆರ್.ಸಿ.ಯು ಕೋಲಾರ, ಸುತ್ತಮುತ್ತಲಿನ ಜಿಲ್ಲೆಗಳು ಹಾಗೂ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ವಿವಿಧ ಪ್ರದೇಶಗಳ ಜನರಿಗೆ ಸೇವೆ ಸಲ್ಲಿಸುವ ಉದ್ದೇಶದಿಂದ ತನ್ನ ತೃತೀಯ ಹಂತದ ಹಾಗೂ ಸೂಪರ್-ಸ್ಪೆಷಾಲಿಟಿ ವೈದ್ಯಕೀಯ ಸೇವೆಗಳನ್ನು ನಿರಂತರವಾಗಿ ವಿಸ್ತರಿಸುತ್ತಿದೆ ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande