ಬೀದಿ ನಾಯಿಗಳ ನಿಯಂತ್ರಣಕ್ಕೆ ಮಾಲೂರು ತಾಲ್ಲೂಕು ಸಂತೇಹಳ್ಳಿಯಲ್ಲಿ ವಿಶೇಷ ಆರೈಕೆ ಕೇಂದ್ರ
ಬೀದಿ ನಾಯಿಗಳ ನಿಯಂತ್ರಣಕ್ಕೆ ಮಾಲೂರು ತಾಲ್ಲೂಕು ಸಂತೇಹಳ್ಳಿಯಲ್ಲಿ ವಿಶೇಷ ಆರೈಕೆ ಕೇಂದ್ರ
ಮಾಲೂರು ತಾಲ್ಲೂಕು ಸಂತೇಹಳ್ಳಿ ಗ್ರಾಮ ಪಂಚಾಯಿ0ದ ಆರಂಬಿಸಲಾಗಿರುವ ಬೀದಿನಾಯಿಳ ಆರೈಕೆ ಕೇಂದ್ರಕ್ಕೆ ಕೋಲಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪ್ರವೀನ್ ಭಾಗೇವಾಡಿ ಭೇಟಿ ನೀಡಿ ಪರಿಶೀಲಿಸಿದರು.


ಕೋಲಾರ, 03 ಅಕ್ಟೋಬರ್ (ಹಿ.ಸ.):

ಮಾಲೂರು ತಾಲ್ಲೂಕಿನ ಸಂತೇಹಳ್ಳಿ ಗ್ರಾಮ ಪಂಚಾಯತಿ ಕೇಂದ್ರದಲ್ಲಿ ಬೀದಿ ನಾಯಿಗಳ ಸಂತಾನ ನಿಯಂತ್ರಣ ಮತ್ತು ಆರೈಕೆಗಾಗಿ ವಿಶೇಷ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸುವುದರ ಜೊತೆಗೆ ಸಾರ್ವಜನಿಕರ ಸುರಕ್ಷತೆ ಮತ್ತು ಪ್ರಾಣಿಗಳ ಕಲ್ಯಾಣವನ್ನು ಖಾತರಿಪಡಿಸುವ ಉದ್ದೇಶದಿಂದ ಕೋಲಾರ ಜಿಲ್ಲಾ ಪಂಚಾಯತ್ ಹಾಗೂ ಪಶು ಸಂಗೋಪನೆ ಇಲಾಖೆ ಸಹಯೋಗದೊಂದಿಗೆ ಮಾಲೂರು ತಾಲ್ಲೂಕಿನಲ್ಲಿ ವೈಜ್ಞಾನಿಕ ಶ್ವಾನ ಸಂತಾನಹರಣ ಹಾಗೂ ಆರೈಕೆ ಅಭಿಯಾನವನ್ನು ಕೈಗೊಳ್ಳಲಾಗಿದೆ.

ಬೀದಿ ನಾಯಿಗಳ ಅನಿಯಂತ್ರಿತ ಸಂತಾನೋತ್ಪತ್ತಿಯನ್ನು ತಡೆಗಟ್ಟುವುದು, ಅವುಗಳ ಆರೋಗ್ಯವನ್ನು ಕಾಪಾಡುವುದು, ರೇಬಿಸ್ನಂತಹ ಸಾಂಕ್ರಾಮಿಕ ರೋಗಗಳ ಅಪಾಯವನ್ನು ತಗ್ಗಿಸುವುದು ಮತ್ತು ಗ್ರಾಮೀಣ ಜನರಿಗೆ ಸುರಕ್ಷಿತ ವಾತಾವರಣ ನಿರ್ಮಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ಕೋಲಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪ್ರವೀನ್ ಭಾಗೇವಾಡಿ ತಿಳಿಸಿದ್ದಾರೆ

ಗ್ರಾಮೀಣ ಪ್ರದೇಶಗಳಲ್ಲಿನ ಜನವಸತಿ ಪ್ರದೇಶಗಳು, ಶಾಲಾ-ಕಾಲೇಜುಗಳ ಆವರಣ, ಸಾರ್ವಜನಿಕ ಸ್ಥಳಗಳು ಹಾಗೂ ರಸ್ತೆಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿದ್ದವು. ವಿಶೇಷವಾಗಿ ಮಕ್ಕಳು, ವೃದ್ಧರು, ಮಹಿಳೆಯರು ಹಾಗೂ ಮುಂಜಾನೆ ಮತ್ತು ರಾತ್ರಿ ವೇಳೆ ಸಂಚರಿಸುವ ಸಾರ್ವಜನಿಕರಿಗೆ ಬೀದಿ ನಾಯಿಗಳಿಂದ ತೊಂದರೆಯಾಗುತ್ತಿರುವುದು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.

ಕಳೆದ ೨೦೨೩ರಲ್ಲಿ ಕೇಂದ್ರ ಸರಕಾರವು ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಸಂತಾನ ನಿಯಂತ್ರಣ ಕಾರ್ಯಕ್ರಮ ಜಾರಿಗೆ ತರಲು ಮಾರ್ಗಸೂಚಿ ಹೊರಡಿಸಿದೆ. ಅದರಂತೆ ಗ್ರಾಮೀಣ ಪ್ರದೇಶದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಗ್ರಾಮ ಪಂಚಾಯಿತಿಗಳು ಪ್ರಾಣಿ ಸಂತಾನ ನಿಯಂತ್ರಣ ಹಾಗೂ ರೇಬಿಸ್ ಲಸಿಕೆ ಕಾರ್ಯಕ್ರಮಗಳನ್ನು ಮಾಲೂರು ತಾಲ್ಲೂಕಿನ ಸಂತೇಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ಮಾಲೂರು ತಾಲ್ಲೂಕಿನ ಸಂತೇಹಳ್ಳಿ ಗ್ರಾಮ ಪಂಚಾಯತಿ ಕೇಂದ್ರದಲ್ಲಿ ಬೀದಿ ನಾಯಿಗಳ ಸಂತಾನ ನಿಯಂತ್ರಣ ಮತ್ತು ಆರೈಕೆಗಾಗಿ ವಿಶೇಷ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಇದು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಂತೇಹಳ್ಳಿ ಗ್ರಾಮ ಪಂಚಾಯತಿ ಹಾಗೂ ಕೊವೆಟ್ ಸಂಸ್ಥೆಯ ಜಂಟಿ ಸಹಯೋಗದಲ್ಲಿ ಕೇಂದ್ರವನ್ನು ನಿರ್ವಹಿಸಲಾಗುತ್ತಿದೆ.

ಈ ಕೇಂದ್ರದಲ್ಲಿ ಬೀದಿ ನಾಯಿಗಳನ್ನು ಸುರಕ್ಷಿತವಾಗಿ ಹಿಡಿದು ತಂದು, ಪಶುವೈದ್ಯರ ಮೇಲ್ವಿಚಾರಣೆಯಲ್ಲಿ ಅಗತ್ಯ ಆರೋಗ್ಯ ತಪಾಸಣೆ ನಡೆಸಿ, ವೈಜ್ಞಾನಿಕ ವಿಧಾನದಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಶಸ್ತ್ರಚಿಕಿತ್ಸೆಯ ನಂತರ ಅವು ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೆ ಸೂಕ್ತ ಆರೈಕೆ ಒದಗಿಸಿ, ಆರೋಗ್ಯ ಸ್ಥಿತಿ ಸುಧಾರಿಸಿದ ಬಳಿಕ ಮೂಲ ಪ್ರದೇಶಕ್ಕೆ ಮರಳಿ ಬಿಡುವ ವ್ಯವಸ್ಥೆ ಮಾಡಲಾಗಿದೆ.

ಕೇಂದ್ರದ ಕಾರ್ಯಾಚರಣೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರತಿದಿನ ಸುಮಾರು ೧೮ರಿಂದ ೨೦ ಬೀದಿ ನಾಯಿಗಳನ್ನು ಸುರಕ್ಷಿತವಾಗಿ ಹಿಡಿದು ಕೇಂದ್ರಕ್ಕೆ ಕರೆತರಲಾಗುತ್ತಿದೆ. ನಾಯಿಗಳನ್ನು ಹಿಡಿಯಲು ಐವರು ನುರಿತ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಶಸ್ತ್ರಚಿಕಿತ್ಸೆ ಮತ್ತು ವೈದ್ಯಕೀಯ ಆರೈಕೆಗಾಗಿ ಒಬ್ಬ ಪಶುವೈದ್ಯರು, ಒಬ್ಬ ವ್ಯವಸ್ಥಾಪಕರು ಹಾಗೂ ಅಗತ್ಯ ಸಹಾಯಕ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ.

ನುರಿತ ಪಶುವೈದ್ಯರ ನೇತೃತ್ವದಲ್ಲಿ ಈಗಾಗಲೇ ಸುಮಾರು ೪೦೦ ಬೀದಿ ನಾಯಿಗಳಿಗೆ ವೈಜ್ಞಾನಿಕ ಸಂತಾನಹರಣ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಈ ಮೂಲಕ ಬೀದಿ ನಾಯಿಗಳ ಸಂತಾನೋತ್ಪತ್ತಿಯನ್ನು ನಿಯಂತ್ರಿಸುವ ದಿಸೆಯಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ.

ಶ್ವಾನಗಳ ಸಂತಾನ ನಿಯಂತ್ರಣದ ಕಾರ್ಯಾಚರಣೆಯ ಸಂದರ್ಭದಲ್ಲಿ ಅವುಗಳ ಜೀವ ರಕ್ಷಣೆ, ಆರೋಗ್ಯ ಮತ್ತು ಕಲ್ಯಾಣಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಶಸ್ತ್ರಚಿಕಿತ್ಸೆಗೆ ಒಳಪಡುವ ನಾಯಿಗಳಿಗೆ ಕೇವಲ ಚಿಕಿತ್ಸೆ ನೀಡುವುದಷ್ಟೇ ಅಲ್ಲದೆ, ಅವುಗಳ ದೈಹಿಕ ಚೇತರಿಕೆಗೆ ಅಗತ್ಯವಾದ ಆಹಾರ, ನೀರು ಮತ್ತು ಆರೈಕೆಯನ್ನು ಒದಗಿಸಲಾಗುತ್ತಿದೆ.

ಕೇಂದ್ರದಲ್ಲಿ ನಾಯಿಗಳಿಗೆ ಪ್ರತಿದಿನ ಎರಡು ಬಾರಿ ಪೌಷ್ಟಿಕ ಆಹಾರ ಹಾಗೂ ಮೂರು ಬಾರಿ ಶುದ್ಧ ಕುಡಿಯುವ ನೀರನ್ನು ನೀಡಲಾಗುತ್ತಿದೆ. ಶಸ್ತ್ರಚಿಕಿತ್ಸೆಯ ನಂತರ ಗಾಯಗಳು ಗುಣಮುಖವಾಗುವವರೆಗೆ ಪಶುವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಮತ್ತು ಆರೈಕೆ ಮುಂದುವರಿಸಲಾಗುತ್ತದೆ. ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡು ಆರೋಗ್ಯ ಸ್ಥಿತಿ ಸುಧಾರಿಸಿದ ನಂತರವೇ ಅವುಗಳನ್ನು ಕೇಂದ್ರದಿAದ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಲೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ತಿಳಿಸಿದ್ದಾರೆ.

ಇದರ ಜೊತೆಗೆ, ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ರೇಬಿಸ್ ನಿರೋಧಕ ಲಸಿಕೆ ನೀಡುವುದಕ್ಕೂ ಆದ್ಯತೆ ನೀಡಲಾಗಿದೆ. ಕೇಂದ್ರದಿAದ ಬಿಡುಗಡೆ ಮಾಡುವ ಮುನ್ನ ನಾಯಿಗಳಿಗೆ ಕಡ್ಡಾಯವಾಗಿ ನೀಡಲಾಗುತ್ತಿದ್ದು, ರೇಬಿಸ್ ಹರಡುವ ಅಪಾಯವನ್ನು ತಗ್ಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಚಿಕಿತ್ಸೆ ಪಡೆದ ನಾಯಿಗಳನ್ನು ಬೇರೆ ಪ್ರದೇಶಗಳಿಗೆ ಸ್ಥಳಾಂತರಿಸದೆ, ಅವುಗಳನ್ನು ಯಾವ ಸ್ಥಳದಿಂದ ಹಿಡಿದು ತರಲಾಗಿದೆಯೋ ಅದೇ ಮೂಲ ಪ್ರದೇಶಕ್ಕೆ ಸುರಕ್ಷಿತವಾಗಿ ಮರಳಿ ಬಿಡಲಾಗುತ್ತಿದೆ. ಇದು ಪ್ರಾಣಿಗಳ ಮೇಲಿನ ದಯಾಭಾವವನ್ನು ಪ್ರತಿಬಿಂಬಿಸುವುದರ ಜೊತೆಗೆ ಪ್ರಾಣಿ ಕಲ್ಯಾಣಕ್ಕೆ ಸಂಬAಧಿಸಿದ ನಿಯಮಾವಳಿಗಳನ್ನು ಪಾಲಿಸುವ ಕ್ರಮವೂ ಆಗಿದೆ.

ಸಂತೇಹಳ್ಳಿ ಗ್ರಾಮ ಪಂಚಾಯತಿಯು ಶ್ವಾನ ಸಂತಾನಹರಣ ಮತ್ತು ಆರೈಕೆ ಕೇಂದ್ರದ ಸುಗಮ ಕಾರ್ಯಾಚರಣೆಗೆ ಅಗತ್ಯವಿರುವ ಮೂಲಸೌಕರ್ಯ ತಾಲೂಕು ಪಂಚಾಯತಿಯಿAದ ಒದಗಿಸುತ್ತಿದೆ.

ಕೇಂದ್ರಕ್ಕೆ ನಿರಂತರ ನೀರು ಮತ್ತು ವಿದ್ಯುತ್ ಪೂರೈಕೆ ಕಲ್ಪಿಸಲಾಗಿದ್ದು, ಶಸ್ತ್ರಚಿಕಿತ್ಸೆಗೆ ಅಗತ್ಯವಿರುವ ಕಿಟ್ಗಳು ಮತ್ತು ವೈದ್ಯಕೀಯ ಪರಿಕರಗಳ ಪೂರೈಕೆಗೆ ಸಹಕಾರ ನೀಡಲಾಗುತ್ತಿದೆ. ಇದಲ್ಲದೆ, ಬೀದಿ ನಾಯಿಗಳನ್ನು ಸುರಕ್ಷಿತವಾಗಿ ಹಿಡಿಯುವುದು, ವಾಹನಗಳ ಮೂಲಕ ಕೇಂದ್ರಕ್ಕೆ ಸಾಗಿಸುವುದು, ಚಿಕಿತ್ಸೆ ಪೂರ್ಣಗೊಂಡ ಬಳಿಕ ಅವುಗಳನ್ನು ಮೂಲ ಸ್ಥಳಕ್ಕೆ ಮರಳಿ ಬಿಡುವುದು ಸೇರಿದಂತೆ ವಿವಿಧ ಹಂತಗಳಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿ ಸಕ್ರಿಯವಾಗಿ ಸಹಕರಿಸುತ್ತಿದ್ದಾರೆ.

ಸಂತಾನಹರಣದ ಮೂಲಕ ಬೀದಿ ನಾಯಿಗಳ ಅನಿಯಂತ್ರಿತ ಸಂತಾನೋತ್ಪತ್ತಿಯನ್ನು ನಿಯಂತ್ರಿಸುವುದರಿ0ದ ದೀರ್ಘಕಾಲದಲ್ಲಿ ಅವುಗಳ ಸಂಖ್ಯೆಯ ಹೆಚ್ಚಳವನ್ನು ತಗ್ಗಿಸಲು ಸಾಧ್ಯವಾಗುತ್ತದೆ. ರೇಬಿಸ್ ನಿರೋಧಕ ಲಸಿಕೆ ನೀಡುವುದರಿಂದ ಸಾರ್ವಜನಿಕ ಆರೋಗ್ಯದ ಅಪಾಯಗಳನ್ನು ಕಡಿಮೆ ಮಾಡುವ ಪ್ರಯತ್ನವೂ ನಡೆಯುತ್ತಿದೆ. ಇದರೊಂದಿಗೆ ನಾಯಿಗಳಿಗೆ ಆಹಾರ, ನೀರು ಮತ್ತು ವೈದ್ಯಕೀಯ ಆರೈಕೆ ಒದಗಿಸುವ ಮೂಲಕ ಪ್ರಾಣಿಗಳ ಮೇಲಿನ ಮಾನವೀಯ ಕಾಳಜಿಯನ್ನು ಎತ್ತಿಹಿಡಿಯಲಾಗುತ್ತಿದೆ.

ಈ ಅಭಿಯಾನವು ಬೀದಿ ನಾಯಿಗಳ ಸಮಸ್ಯೆಗೆ ಕೇವಲ ತಾತ್ಕಾಲಿಕ ಪರಿಹಾರ ಒದಗಿಸುವುದಕ್ಕಿಂತಲೂ, ಸಾರ್ವಜನಿಕರು ಮತ್ತು ಪ್ರಾಣಿಗಳು ಸುರಕ್ಷಿತವಾಗಿ ಸಹಬಾಳ್ವೆ ನಡೆಸಲು ಅಗತ್ಯವಾದ ವ್ಯವಸ್ಥೆಯನ್ನು ರೂಪಿಸುವ ಗುರಿಯನ್ನು ಹೊಂದಿದೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande