ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದಿಸಲು ತಾಲೂಕು ಆಡಳಿತದಿಂದ ಕ್ರಮ: ಶಾಸಕ ಯಶವಂತರಾಯಗೌಡ ಪಾಟೀಲ
ವಿಜಯಪುರ, 03 ಅಕ್ಟೋಬರ್ (ಹಿ.ಸ.) ಇಂಡಿ ತಾಲೂಕಿನ ತಡವಲಗಾ ಗ್ರಾಮದಲ್ಲಿ ತಾಲೂಕು ಆಡಳಿತದ ವತಿಯಿಂದ ಹೋಬಳಿ ಮಟ್ಟದ ‘ಪ್ರಜಾಸೇವೆ ಆಂದೋಲನ’ ಸಭೆಯನ್ನು ಆಯೋಜಿಸಿ, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ವಿವಿಧ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಯಿತು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ತಿಳಿಸಿದ್ದಾರೆ
ಪ್ರಜಾ ಸೇವೆ


ವಿಜಯಪುರ, 03 ಅಕ್ಟೋಬರ್ (ಹಿ.ಸ.)

ಇಂಡಿ ತಾಲೂಕಿನ ತಡವಲಗಾ ಗ್ರಾಮದಲ್ಲಿ ತಾಲೂಕು ಆಡಳಿತದ ವತಿಯಿಂದ ಹೋಬಳಿ ಮಟ್ಟದ ‘ಪ್ರಜಾಸೇವೆ ಆಂದೋಲನ’ ಸಭೆಯನ್ನು ಆಯೋಜಿಸಿ, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ವಿವಿಧ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಯಿತು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶದ ಜನರು ತಮ್ಮ ಸಮಸ್ಯೆಗಳಿಗಾಗಿ ತಾಲೂಕು ಕೇಂದ್ರಕ್ಕೆ ಪದೇಪದೇ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಹೋಬಳಿ ಮಟ್ಟದಲ್ಲಿಯೇ ಪ್ರಜಾಸೇವೆ ಆಂದೋಲನ ಸಭೆಗಳನ್ನು ನಡೆಸಲಾಗುತ್ತಿದೆ. ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಭೆಯಲ್ಲಿ ಭಾಗವಹಿಸಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಸಂಬಂಧಿಸಿದ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡರು.

ತಡವಲಗಾ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ತಮ್ಮ ಪ್ರದೇಶಕ್ಕೆ ಸಂಬಂಧಿಸಿದ ಕಂದಾಯ, ಗ್ರಾಮೀಣಾಭಿವೃದ್ಧಿ, ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್, ಕೃಷಿ, ಪಿಂಚಣಿ, ವಸತಿ ಸೇರಿದಂತೆ ವಿವಿಧ ಇಲಾಖೆಗಳ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು. ಸಾರ್ವಜನಿಕರಿಂದ ಸ್ವೀಕರಿಸಲಾದ ಅಹವಾಲುಗಳನ್ನು ಪರಿಶೀಲಿಸಿ, ನಿಯಮಾನುಸಾರ ಶೀಘ್ರ ಪರಿಹಾರ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಸಭೆಯಲ್ಲಿ ಮಾತನಾಡಿದ ಶಾಸಕ ಯಶವಂತರಾಯಗೌಡ ಪಾಟೀಲ ಅವರು, ಸರ್ಕಾರದ ಯೋಜನೆಗಳು ಹಾಗೂ ಸಾರ್ವಜನಿಕ ಸೇವೆಗಳು ಜನರ ಮನೆಬಾಗಿಲಿಗೆ ತಲುಪಬೇಕು. ಜನರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಲು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂಬ ಉದ್ದೇಶದಿಂದ ಪ್ರಜಾಸೇವೆ ಆಂದೋಲನದಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳ ಮುಂದೆ ಮಂಡಿಸಲು ಇಂತಹ ಸಭೆಗಳು ಉತ್ತಮ ವೇದಿಕೆಯಾಗಿವೆ. ಸ್ವೀಕರಿಸಲಾದ ಅಹವಾಲುಗಳಿಗೆ ಆದ್ಯತೆಯ ಮೇರೆಗೆ ಸ್ಪಂದಿಸಿ, ಬಾಕಿ ಇರುವ ಸಮಸ್ಯೆಗಳನ್ನು ಸಂಬಂಧಿಸಿದ ಇಲಾಖೆಗಳ ಮೂಲಕ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ತಾಲೂಕು ಆಡಳಿತದ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಮುಖಂಡರು ಸೇರಿದಂತೆ ಹಲವರು ಸಭೆಯಲ್ಲಿ ಉಪಸ್ಥಿತರಿದ್ದರು. ಸ್ಥಳೀಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande