
ಗದಗ, 03 ಅಕ್ಟೋಬರ್ (ಹಿ.ಸ.):
ಸಂವಿಧಾನದ ಕಾನೂನು ಚೌಕಟ್ಟಿನಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ಹಾಗೂ ಪ್ರತಿಭಟನೆ ನಡೆಸಲು ಪ್ರತಿಯೊಬ್ಬರಿಗೂ ಹಕ್ಕಿದೆ. ಆದರೆ ರೈತರ ಪ್ರತಿಭಟನೆಯ ವೇದಿಕೆಯನ್ನು ವೈಯಕ್ತಿಕ ರಾಜಕೀಯ ಅಜೆಂಡಾಗಳಿಗೆ ಬಳಸಿಕೊಂಡು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ವಿರುದ್ಧ ಅವಹೇಳನಕಾರಿ ಹಾಗೂ ವೈಯಕ್ತಿಕ ಟೀಕೆಗಳನ್ನು ಮಾಡುವುದು ಖಂಡನೀಯ ಎಂದು ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪ್ರಲ್ಹಾದ ಜೋಶಿ ಅವರು ಐದು ಬಾರಿ ಸಂಸದರಾಗಿ ಹಾಗೂ ಎರಡು ಬಾರಿ ಕೇಂದ್ರ ಸಚಿವರಾಗಿ ಸಾರ್ವಜನಿಕ ಸೇವೆ ಸಲ್ಲಿಸುತ್ತಿದ್ದಾರೆ. ರೈತರ ಹೋರಾಟದ ಹೆಸರಿನಲ್ಲಿ ಶಶಿಕಾಂತ್ ಪಡಸಲಗಿ ಹಾಗೂ ಚೂನಪ್ಪ ಪೂಜೇರಿ ಅವರು ಜೋಶಿ ಅವರ ಬಗ್ಗೆ ಏಕವಚನದಲ್ಲಿ ಮಾತನಾಡಿರುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.
ಅಲ್ಲದೇ, ಕೇಂದ್ರ ಸಚಿವರ ಕುಟುಂಬದ ಕುರಿತು ಕೀಳುಮಟ್ಟದ ಹೇಳಿಕೆಗಳನ್ನು ನೀಡುವುದು ಮಾತನಾಡಿದವರ ಘನತೆಗೆ ತಕ್ಕದ್ದಲ್ಲ. ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತಪಡಿಸುವ ಸಂದರ್ಭದಲ್ಲಿ ಭಾಷೆಯ ಘನತೆ ಹಾಗೂ ಸಂಯಮವನ್ನು ಕಾಪಾಡಿಕೊಳ್ಳಬೇಕು ಎಂದು ರಾಜು ಕುರುಡಗಿ ಸಲಹೆ ನೀಡಿದ್ದಾರೆ.
ರೈತರ ಸಮಸ್ಯೆಗಳ ಕುರಿತು ಹೋರಾಟ ನಡೆಸುವುದು ಪ್ರಜಾಪ್ರಭುತ್ವದಲ್ಲಿ ಸಹಜ. ಆದರೆ ಹೋರಾಟದ ವೇದಿಕೆಯನ್ನು ವೈಯಕ್ತಿಕ ಟೀಕೆಗಳಿಗೆ ಬಳಸಿಕೊಳ್ಳುವ ಬದಲು ರೈತರ ನೈಜ ಸಮಸ್ಯೆಗಳ ಕುರಿತು ಧ್ವನಿ ಎತ್ತಬೇಕು ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ಬರ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಪರಿಹಾರ ಕ್ರಮಗಳು, ರೈತರಿಗೆ ದೊರೆಯಬೇಕಾದ ನೆರವು ಹಾಗೂ ಬರಪೀಡಿತ ತಾಲೂಕುಗಳ ಆಯ್ಕೆಯ ಕುರಿತು ರೈತ ಸಂಘಟನೆಗಳು ಸರ್ಕಾರದ ಗಮನ ಸೆಳೆಯಬೇಕು. ರೈತರ ಹಿತಾಸಕ್ತಿಗಾಗಿ ನಡೆಯುವ ಹೋರಾಟಗಳು ಯಾವುದೇ ರಾಜಕೀಯ ಉದ್ದೇಶದಿಂದ ಕೂಡಿರಬಾರದು ಎಂದು ರಾಜು ಕುರುಡಗಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP