
ವಿಜಯಪುರ, 03 ಅಕ್ಟೋಬರ್ (ಹಿ.ಸ.)
ಪಾಸ್ ಪೋರ್ಟ್ ಪರಿಶೀಲನಾ ಪ್ರಕ್ರಿಯೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ, ತ್ವರಿತವಾಗಿ ಹಾಗೂ ನಿಯಮಾನುಸಾರ ನಡೆಸುವ ಉದ್ದೇಶದಿಂದ ವಿಜಯಪುರ ಪೊಲೀಸ್ ಸಮುದಾಯ ಭವನದಲ್ಲಿ ಶನಿವಾರ ಪಾಸ್ ಪೋರ್ಟ್ ಪರಿಶೀಲನೆ ಕುರಿತು ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.
ಕಾರ್ಯಾಗಾರದಲ್ಲಿ ಪಾಸ್ ಪೋರ್ಟ್ ಪರಿಶೀಲನೆಗೆ ಸಂಬಂಧಿಸಿದ ವಿವಿಧ ಹಂತಗಳು, ದಾಖಲೆಗಳ ಪರಿಶೀಲನೆ, ಅರ್ಜಿದಾರರ ಮಾಹಿತಿಯ ದೃಢೀಕರಣ, ಸ್ಥಳ ಪರಿಶೀಲನೆ ಸೇರಿದಂತೆ ಪರಿಶೀಲನಾ ಪ್ರಕ್ರಿಯೆಯಲ್ಲಿ ಪೊಲೀಸ್ ಸಿಬ್ಬಂದಿ ಅನುಸರಿಸಬೇಕಾದ ಕ್ರಮಗಳ ಕುರಿತು ಸಮಗ್ರ ತರಬೇತಿ ನೀಡಲಾಯಿತು.
ಪಾಸ್ ಪೋರ್ಟ್ ಅರ್ಜಿಗಳ ಪರಿಶೀಲನೆಯಲ್ಲಿ ಯಾವುದೇ ರೀತಿಯ ವಿಳಂಬವಾಗದಂತೆ ಹಾಗೂ ಅರ್ಜಿದಾರರಿಗೆ ತ್ವರಿತ ಸೇವೆ ದೊರೆಯುವಂತೆ ಕಾರ್ಯನಿರ್ವಹಿಸುವ ಅಗತ್ಯದ ಕುರಿತು ಅಧಿಕಾರಿಗಳು ಸಿಬ್ಬಂದಿಗೆ ಮಾರ್ಗದರ್ಶನ ನೀಡಿದರು. ಪರಿಶೀಲನಾ ಪ್ರಕ್ರಿಯೆಯಲ್ಲಿ ನಿಖರತೆ, ಪಾರದರ್ಶಕತೆ ಹಾಗೂ ನಿಯಮಾನುಸರಣೆಗೆ ಆದ್ಯತೆ ನೀಡುವಂತೆ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಪಾಸ್ ಪೋರ್ಟ್ ಪರಿಶೀಲನಾ ಕಾರ್ಯದಲ್ಲಿ ವಿಜಯಪುರ ಜಿಲ್ಲೆಯ ಪೊಲೀಸ್ ಇಲಾಖೆ ಉತ್ತಮ ಸಾಧನೆ ಮಾಡಿದ್ದು, ಕರ್ನಾಟಕ ರಾಜ್ಯದಲ್ಲಿ ಪಾಸ್ಪೋರ್ಟ್ ನಿರ್ವಹಣೆ ಹಾಗೂ ಪರಿಶೀಲನಾ ಕಾರ್ಯದಲ್ಲಿ ಪ್ರಥಮ ಸ್ಥಾನ ಪಡೆದಿದೆ ಎಂದು ತಿಳಿಸಿದರು.
ಪಾಸ್ ಪೋರ್ಟ್ ಪರಿಶೀಲನೆ ಸಾರ್ವಜನಿಕರಿಗೆ ನೇರವಾಗಿ ಸಂಬಂಧಿಸಿದ ಪ್ರಮುಖ ಪೊಲೀಸ್ ಸೇವೆಯಾಗಿದ್ದು, ಅರ್ಜಿದಾರರ ದಾಖಲೆಗಳು ಮತ್ತು ಮಾಹಿತಿಯನ್ನು ನಿಗದಿತ ನಿಯಮಗಳಂತೆ ಪರಿಶೀಲಿಸಿ, ವರದಿಯನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವುದು ಸಿಬ್ಬಂದಿಯ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಇಂತಹ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು.
ಕಾರ್ಯಾಗಾರದಲ್ಲಿ ಪಾಸ್ಪೋರ್ಟ್ ಪರಿಶೀಲನಾ ಪ್ರಕ್ರಿಯೆಯಲ್ಲಿ ಎದುರಾಗಬಹುದಾದ ವಿವಿಧ ಸಂದರ್ಭಗಳು, ಅವುಗಳನ್ನು ನಿಯಮಾನುಸಾರ ನಿರ್ವಹಿಸುವ ವಿಧಾನ ಹಾಗೂ ಸಾರ್ವಜನಿಕರೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸುವ ಕುರಿತು ಸಹ ಚರ್ಚಿಸಲಾಯಿತು.
ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ಪಾಸ್ಪೋರ್ಟ್ ಪರಿಶೀಲನಾ ಕಾರ್ಯದಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಗಳಿಸಿರುವುದು ಜಿಲ್ಲೆಯ ಪೊಲೀಸ್ ವ್ಯವಸ್ಥೆಯ ಕಾರ್ಯಕ್ಷಮತೆಗೆ ಮತ್ತೊಂದು ಹೆಗ್ಗಳಿಕೆಯಾಗಿದೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಗುಣಮಟ್ಟದ ಹಾಗೂ ತ್ವರಿತ ಸೇವೆಯನ್ನು ಸಾರ್ವಜನಿಕರಿಗೆ ಒದಗಿಸುವ ನಿಟ್ಟಿನಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸಬೇಕೆಂದು ಕಾರ್ಯಾಗಾರದಲ್ಲಿ ತಿಳಿಸಲಾಯಿತು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande