
ಪಿರಿಯಾಪಟ್ಟಣ, 03 ಅಕ್ಟೋಬರ್ (ಹಿ.ಸ.):
ತಂತ್ರಜ್ಞಾನ ಬದಲಾದಂತೆ ಜನರ ನಿರೀಕ್ಷೆಗಳೂ ಬದಲಾಗುತ್ತಿವೆ. ಹೀಗಾಗಿ ನಾಡಹಬ್ಬ ಮೈಸೂರು ದಸರಾಕ್ಕೆ ಪ್ರತಿವರ್ಷ ಹೊಸತನದ ಸ್ಪರ್ಶ ನೀಡುವ ಉದ್ದೇಶದಿಂದ ಏರೋ ಶೋ, ಹೊರರಾಜ್ಯಗಳ ಕಲಾ ತಂಡಗಳ ಪ್ರದರ್ಶನ ಸೇರಿದಂತೆ ಹಲವು ಹೊಸ ಕಾರ್ಯಕ್ರಮಗಳನ್ನು ಸೇರಿಸಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಪಿರಿಯಾಪಟ್ಟಣದ ಹೆಲಿಪ್ಯಾಡ್ ಬಳಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿನಿಮಾ, ದೂರದರ್ಶನ, ಕಂಪ್ಯೂಟರ್, ಮೊಬೈಲ್ ಬಳಿಕ ಈಗ ಕೃತಕ ಬುದ್ಧಿಮತ್ತೆಯ ಕಾಲ ಬಂದಿದೆ. ಜನರು ಎಲ್ಲವನ್ನೂ ಎಲ್ಲಿಂದಲಾದರೂ ವೀಕ್ಷಿಸಬಹುದಾದ ಪರಿಸ್ಥಿತಿ ಇದೆ. ಆದರೂ ನೇರವಾಗಿ ಕಣ್ಣಾರೆ ಕಾರ್ಯಕ್ರಮಗಳನ್ನು ವೀಕ್ಷಿಸಲು ಜನರು ಆಗಮಿಸುತ್ತಾರೆ. ಹೀಗಾಗಿ ದಸರಾ ಆಚರಣೆಯಲ್ಲಿ ಪ್ರತಿವರ್ಷವೂ ಕೆಲವೊಂದು ಬದಲಾವಣೆಗಳನ್ನು ತರಬೇಕು ಎಂದರು.
ಏರೋ ಶೋಗೆ ರಕ್ಷಣಾ ಸಚಿವರ ಸಕಾರಾತ್ಮಕ ಸ್ಪಂದನೆ
ದಸರಾ ಸಂದರ್ಭದಲ್ಲಿ ಏರೋ ಶೋ ನಡೆಸುವಂತೆ ರಕ್ಷಣಾ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿರುವುದಾಗಿ ಶಿವಕುಮಾರ್ ತಿಳಿಸಿದರು.
ರಕ್ಷಣಾ ಪಡೆಗಳ ಶಿಸ್ತು ಮತ್ತು ಸಾಮರ್ಥ್ಯವನ್ನು ಯುವಕರು ಹಾಗೂ ವಿದ್ಯಾರ್ಥಿಗಳು ಅರಿಯಬೇಕು. ಎನ್‌ಸಿಸಿ ಮತ್ತು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಯುವ ಸಮುದಾಯಕ್ಕೆ ಏರೋ ಶೋ ಪ್ರೇರಣೆಯಾಗಲಿದೆ. ಏರೋ ಶೋ ತಂಡವನ್ನು ಕಳುಹಿಸುವಂತೆ ಮನವಿ ಮಾಡಿದ್ದು, ರಕ್ಷಣಾ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
ಬೈಲಕುಪ್ಪೆ ಸಂಸ್ಕೃತಿಗೂ ದಸರಾ ವೇದಿಕೆ
ಬೈಲಕುಪ್ಪೆಯಲ್ಲಿ ಹಲವು ವರ್ಷಗಳಿಂದ ನೆಲೆಸಿರುವ ಸಮುದಾಯದ ವಿಶಿಷ್ಟ ಪರಂಪರೆ, ಸಂಸ್ಕೃತಿ ಹಾಗೂ ಸಂಸ್ಕಾರವನ್ನು ದಸರಾ ಸಂದರ್ಭದಲ್ಲಿ ಪ್ರದರ್ಶಿಸಲು ಅವಕಾಶ ನೀಡುವಂತೆ ಸೂಚಿಸಲಾಗಿದೆ. ಅವರ ಕಲಾ ಮತ್ತು ಸಾಂಸ್ಕೃತಿಕ ಪ್ರದರ್ಶನಕ್ಕೆ ಪ್ರತ್ಯೇಕ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಸ್ಯಾಂಡಲ್‌ವುಡ್‌ನ ಹೊಸ ಹಾಗೂ ಹಿರಿಯ ಕಲಾವಿದರು ಕೂಡ ನಾಡಹಬ್ಬದಲ್ಲಿ ಪಾಲ್ಗೊಳ್ಳಬೇಕು. ಈ ಕುರಿತು ಚಲನಚಿತ್ರ ವಾಣಿಜ್ಯ ಮಂಡಳಿಯವರಿಗೆ ಮನವಿ ಮಾಡಿದ್ದು, ಎಲ್ಲ ಕಲಾವಿದರು ದಸರಾಕ್ಕೆ ಆಗಮಿಸಿ ಜನರ ಆಶೀರ್ವಾದ ಪಡೆಯಬೇಕು ಎಂದು ತಿಳಿಸಲಾಗಿದೆ. ಕಲಾವಿದರು ಆಗಮಿಸುವುದಾಗಿ ತಿಳಿಸಿದ್ದಾರೆ ಎಂದರು.
ನೆರೆ ರಾಜ್ಯಗಳ ಕಲಾ ತಂಡಗಳಿಗೂ ಆಹ್ವಾನ
ತಮಿಳುನಾಡು, ಕೇರಳ ಸೇರಿದಂತೆ ನೆರೆ ರಾಜ್ಯಗಳಿಗೂ ತಮ್ಮದೇ ಆದ ಕಲೆ, ಸಂಸ್ಕೃತಿ ಮತ್ತು ಪರಂಪರೆ ಇದೆ. ಅವುಗಳನ್ನೂ ದಸರಾ ವೇದಿಕೆಯಲ್ಲಿ ಪರಿಚಯಿಸುವ ಉದ್ದೇಶವಿದೆ ಎಂದು ಶಿವಕುಮಾರ್ ಹೇಳಿದರು.
ನಾವು ಅವರಿಂದ ಕಲಿಯಬೇಕು, ಅವರು ನಮ್ಮಿಂದ ಕಲಿಯಬೇಕು. ನಮ್ಮ ಕಲೆಗಳು ವಿದೇಶಗಳಲ್ಲೂ ಪ್ರದರ್ಶನಗೊಳ್ಳುತ್ತಿವೆ. ಹೀಗಿರುವಾಗ ನೆರೆ ರಾಜ್ಯಗಳ ಕಲಾ ತಂಡಗಳು ಮೈಸೂರಿಗೆ ಬಂದು ಪ್ರದರ್ಶನ ನೀಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ನೆರೆ ರಾಜ್ಯಗಳ ಕಲಾ ತಂಡಗಳನ್ನು ಆಹ್ವಾನಿಸುವಂತೆ ಸೂಚಿಸಲಾಗಿದೆ. ಪ್ರತಿವರ್ಷ ದಸರಾ ಆಚರಣೆಯಲ್ಲಿ ಹೊಸತನ ಕಾಣಬೇಕು ಎಂಬ ಉದ್ದೇಶದಿಂದ ಈ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
ಪಕ್ಕದ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಆಹ್ವಾನ
ಕೆಲವು ಕೇಂದ್ರ ನಾಯಕರಿಗೂ ಮೈಸೂರು ದಸರಾಕ್ಕೆ ಆಹ್ವಾನ ನೀಡುವ ಕುರಿತು ಚರ್ಚೆ ನಡೆದಿದೆ. ಪಕ್ಕದ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಸಮಯಾವಕಾಶ ಸಿಕ್ಕರೆ ಮೈಸೂರು ದಸರಾಕ್ಕೆ ಆಗಮಿಸುವಂತೆ ಮನವಿ ಮಾಡಲಾಗಿದೆ ಎಂದು ಶಿವಕುಮಾರ್ ತಿಳಿಸಿದರು.
ಅವರ ರಾಜ್ಯಗಳಲ್ಲೂ ದಸರಾ ಆಚರಣೆ ಇರುವುದರಿಂದ ಸಮಯಾವಕಾಶ ದೊರೆತರೆ ಮೈಸೂರು ದಸರಾಕ್ಕೆ ಆಗಮಿಸುವಂತೆ ತಿಳಿಸಲಾಗಿದೆ ಎಂದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.