
ರಾಜೌರಿ, 03 ಅಕ್ಟೋಬರ್ (ಹಿ.ಸ.):
ರಾಜೌರಿ ಜಿಲ್ಲೆಯ ನೌಶೇರಾ ಪ್ರದೇಶದಲ್ಲಿ ನಿಯಂತ್ರಣ ರೇಖೆ ದಾಟಿ ಭಾರತೀಯ ಪ್ರದೇಶಕ್ಕೆ ಪ್ರವೇಶಿಸಿದ್ದ ಪಾಕಿಸ್ತಾನ ಆಕ್ರಮಿತ ಜಮ್ಮು-ಕಾಶ್ಮೀರದ 17 ವರ್ಷದ ಯುವತಿಯನ್ನು ಭಾರತೀಯ ಸೇನೆ ವಶಕ್ಕೆ ಪಡೆದಿದೆ.
ಅಧಿಕಾರಿಗಳ ಪ್ರಕಾರ, ನೌಶೇರಾದ ಲಾಮ್ ವಲಯದಲ್ಲಿ ನಿಯಂತ್ರಣ ರೇಖೆಯ ಸಮೀಪ ಸೇನೆಯ ಗಸ್ತು ತಂಡಕ್ಕೆ ಯುವತಿಯೊಬ್ಬಳ ಅನುಮಾನಾಸ್ಪದ ಚಲನವಲನ ಕಂಡುಬಂದಿದೆ. ಬಳಿಕ ಆಕೆಯನ್ನು ವಶಕ್ಕೆ ಪಡೆಯಲಾಗಿದೆ. ಪಾಕಿಸ್ತಾನ ಆಕ್ರಮಿತ ಜಮ್ಮು-ಕಾಶ್ಮೀರದ ಖುಯಿರೇಟಾ ನಿವಾಸಿ ಮೊಹಮ್ಮದ್ ಅಜೀಂ ಅವರ ಪುತ್ರಿ ಸಾಮಿಯಾ ಅಜೀಂ ಎಂದು ಆಕೆಯನ್ನು ಗುರುತಿಸಲಾಗಿದೆ.
ಆರಂಭಿಕ ವಿಚಾರಣೆ ನಡೆಸಿದ ಬಳಿಕ ಸೇನೆಯು ಯುವತಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದೆ. ನೌಶೇರಾ ಪೊಲೀಸರು ಆಕೆಯನ್ನು ವಿಚಾರಣೆ ನಡೆಸುತ್ತಿದ್ದಾರೆ.
ವಿಚಾರಣೆ ವೇಳೆ ತಾನು ಉದ್ದೇಶಪೂರ್ವಕವಾಗಿ ಅಲ್ಲದೆ, ತಿಳಿಯದೆ ನಿಯಂತ್ರಣ ರೇಖೆ ದಾಟಿ ಭಾರತೀಯ ಪ್ರದೇಶಕ್ಕೆ ಬಂದಿರುವುದಾಗಿ ಯುವತಿ ಹೇಳಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.