
ವಿಜಯಪುರ, 03 ಅಕ್ಟೋಬರ್ (ಹಿ.ಸ.):
ಉತ್ತರ ಕರ್ನಾಟಕದ ಬರಪೀಡಿತ ಪ್ರದೇಶದಲ್ಲೂ ಮಲೆನಾಡಿನ ನೈಸರ್ಗಿಕ ಸೌಂದರ್ಯವನ್ನು ನೆನಪಿಸುವಂತಹ ಹಸಿರು ವಾತಾವರಣ ನಿರ್ಮಿಸಬಹುದು ಎಂಬುದಕ್ಕೆ ಸಿಂದಗಿ ಮತಕ್ಷೇತ್ರದಲ್ಲಿ ಕೈಗೊಳ್ಳಲಾಗುತ್ತಿರುವ ಪರಿಸರಮುಖಿ ಅಭಿವೃದ್ಧಿ ಕಾರ್ಯಗಳು ಸಾಕ್ಷಿಯಾಗಿವೆ ಎಂದು ಸ್ಥಳೀಯ ರಾಜಶೇಖರ ಹಾದಿಮನಿ ಹೇಳಿದರು.
ಸಿಂದಗಿ ಮತಕ್ಷೇತ್ರದ ಶಾಸಕ ಅಶೋಕ ಎಂ. ಮನಗೂಳಿ ಅವರ ದೂರದೃಷ್ಟಿ ಹಾಗೂ ಪರಿಸರದ ಮೇಲಿನ ಕಾಳಜಿಯಿಂದ ಕ್ಷೇತ್ರದಲ್ಲಿ ಹಸಿರು ಪರಿಸರ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ದೊರೆಯುತ್ತಿದೆ. ವಿಶೇಷವಾಗಿ ಆಲಮೇಲದಲ್ಲಿ ಪದ್ಮಶ್ರೀ ಪುರಸ್ಕೃತ ಪರಿಸರ ಹೋರಾಟಗಾರ್ತಿ ಸಾಲುಮರದ ತಿಮ್ಮಕ್ಕ ಅವರ ಹೆಸರಿನಲ್ಲಿ ನೂತನವಾಗಿ ನಿರ್ಮಿಸಿರುವ ವೃಕ್ಷೋದ್ಯಾನ ಸಾರ್ವಜನಿಕರ ಗಮನ ಸೆಳೆಯುತ್ತಿದೆ ಎಂದು ಅವರು ತಿಳಿಸಿದರು.
ಮರಗಿಡಗಳ ಸಂರಕ್ಷಣೆ, ಹಸಿರು ವಾತಾವರಣ ನಿರ್ಮಾಣ ಹಾಗೂ ಸಾರ್ವಜನಿಕರಿಗೆ ಪ್ರಕೃತಿಯೊಂದಿಗೆ ಬೆರೆಯುವ ಅವಕಾಶ ಕಲ್ಪಿಸುವ ಉದ್ದೇಶದಿಂದ ವೃಕ್ಷೋದ್ಯಾನ ರೂಪುಗೊಂಡಿದೆ. ಇದು ಆಲಮೇಲ ಹಾಗೂ ಸಿಂದಗಿ ತಾಲೂಕಿನ ಜನರಿಗೆ ಉಪಯುಕ್ತ ಪರಿಸರ ತಾಣವಾಗುವ ನಿರೀಕ್ಷೆಯಿದೆ.
ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಕಾಂಕ್ರೀಟ್ ವಿಸ್ತರಣೆಯ ನಡುವೆ ಇಂತಹ ಹಸಿರು ತಾಣಗಳು ಸಾರ್ವಜನಿಕರಿಗೆ ವಿಶ್ರಾಂತಿ, ವಾಯುವಿಹಾರ ಹಾಗೂ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಅವಕಾಶ ಕಲ್ಪಿಸುತ್ತವೆ ಎಂದರು.
ಸಿಂದಗಿಯಲ್ಲೇ ಮಲೆನಾಡಿನ ಸೊಬಗು
ಮಲೆನಾಡಿನ ಪ್ರದೇಶಗಳಲ್ಲಿ ಸಹಜವಾಗಿ ಕಂಡುಬರುವ ದಟ್ಟ ಹಸಿರು, ತಂಪಾದ ವಾತಾವರಣ ಹಾಗೂ ಮರಗಿಡಗಳ ಸೌಂದರ್ಯವನ್ನು ಅನುಭವಿಸಲು ಸಾಧ್ಯವಾಗುವಂತಹ ವಾತಾವರಣವನ್ನು ನಮ್ಮದೇ ನೆಲದಲ್ಲಿ ಸೃಷ್ಟಿಸುವ ಪ್ರಯತ್ನ ಶ್ಲಾಘನೀಯವಾಗಿದೆ ಎಂದು ರಾಜಶೇಖರ ಹಾದಿಮನಿ ಹೇಳಿದರು.
ವೃಕ್ಷೋದ್ಯಾನದಲ್ಲಿ ಬೆಳೆಸಲಾಗುತ್ತಿರುವ ಮರಗಿಡಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಳೆದು ದಟ್ಟ ಹಸಿರು ವಾತಾವರಣ ನಿರ್ಮಾಣವಾಗುವ ನಿರೀಕ್ಷೆಯಿದೆ. ಇದರಿಂದ ಸ್ಥಳೀಯ ಜನರಿಗೆ ಪ್ರಕೃತಿಯ ಮಡಿಲಿನಲ್ಲಿ ಸಮಯ ಕಳೆಯಲು ಉತ್ತಮ ಅವಕಾಶ ದೊರೆಯಲಿದೆ. ಮಕ್ಕಳಿಗೂ ಪರಿಸರದ ಮಹತ್ವವನ್ನು ಅರಿಯಲು ಇಂತಹ ತಾಣಗಳು ಸಹಕಾರಿಯಾಗಲಿವೆ ಎಂದು ಅವರು ಅಭಿಪ್ರಾಯಪಟ್ಟರು.
ಪರಿಸರ ಸಂರಕ್ಷಣೆಗೆ ಮಾದರಿ ಹೆಜ್ಜೆ
ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರ ಹೆಸರಿನಲ್ಲಿ ವೃಕ್ಷೋದ್ಯಾನ ನಿರ್ಮಿಸಿರುವುದು ಪರಿಸರ ಸಂರಕ್ಷಣೆಯ ಸಂದೇಶವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಅರ್ಥಪೂರ್ಣ ಹೆಜ್ಜೆಯಾಗಿದೆ. ಮರಗಳನ್ನು ನೆಡುವುದಷ್ಟೇ ಅಲ್ಲದೆ ಅವುಗಳನ್ನು ಬೆಳೆಸಿ ಸಂರಕ್ಷಿಸುವ ಮನೋಭಾವ ಸಮಾಜದಲ್ಲಿ ಬೆಳೆಯಬೇಕಾಗಿದೆ. ಇಂತಹ ಹಸಿರು ತಾಣಗಳು ಪರಿಸರದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ಹಾದಿಮನಿ ಹೇಳಿದರು.
ಸಿಂದಗಿ ಹಾಗೂ ಆಲಮೇಲ ತಾಲೂಕಿನ ಜನರಿಗೆ ಪ್ರಕೃತಿಯ ಸೌಂದರ್ಯವನ್ನು ಸವಿಯಲು, ಶುದ್ಧ ಗಾಳಿಯನ್ನು ಅನುಭವಿಸಲು ಹಾಗೂ ನೆಮ್ಮದಿಯ ವಾತಾವರಣದಲ್ಲಿ ಸಮಯ ಕಳೆಯಲು ಈ ವೃಕ್ಷೋದ್ಯಾನ ಉತ್ತಮ ತಾಣವಾಗಿ ರೂಪುಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಇಲ್ಲಿಗೆ ಭೇಟಿ ನೀಡುವಂತಾಗಬೇಕು ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.
ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಪರಿಸರ ಸಂರಕ್ಷಣೆಯತ್ತ ಗಮನಹರಿಸಿ ಇಂತಹ ಹಸಿರು ಯೋಜನೆಗೆ ಉತ್ತೇಜನ ನೀಡುತ್ತಿರುವ ಶಾಸಕ ಅಶೋಕ ಎಂ. ಮನಗೂಳಿ ಅವರಿಗೆ ಸಿಂದಗಿ ಮತಕ್ಷೇತ್ರದ ಸಮಸ್ತ ಜನತೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುವುದಾಗಿ ರಾಜಶೇಖರ ಹಾದಿಮನಿ ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande