
ಕೋಲಾರ, 03 ಅಕ್ಟೋಬರ್ (ಹಿ.ಸ) :
ವಿದ್ಯಾರ್ಥಿನಿಲಯಗಳಲ್ಲಿನ ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಆಹಾರ ನೀಡಿದರೆ, ಸೌಲಭ್ಯ ಒದಗಿಸುವಲ್ಲಿ ನಿರ್ಲಕ್ಷ್ಯ ತೋರಿದರೆ ಅಥವಾ ಸುಳ್ಳು ಲೆಕ್ಕ ನೀಡಿ ಅಕ್ರಮವೆಸಗಿದರೆ ಕೇವಲ ಅಮಾನತು ಮಾಡುವುದಿಲ್ಲ. ಬದಲಾಗಿ ನೇರವಾಗಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್ ಪಿ. ಬಾಗೇವಾಡಿ ವಿದ್ಯಾರ್ಥಿ ನಿಲಯಗಳ ಅಧೀಕ್ಷಕರಿಗೆ ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತ ಇಲಾಖೆಗಳ ವ್ಯಾಪ್ತಿಯ ಹಾಸ್ಟೆಲ್ ವಾರ್ಡನ್ಗಳು ಮತ್ತು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಂಬರುವ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಗಳಲ್ಲಿ ಶೇ.೧೦೦ರಷ್ಟು ಫಲಿತಾಂಶ ದಾಖಲಿಸಲು ವಿದ್ಯಾರ್ಥಿಗಳಿಗೆ ನವೆಂಬರ್ ನಿಂದ ಕಡ್ಡಾಯವಾಗಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ತಲಾ ಒಂದು ಗಂಟೆ ವಿಶೇಷ ತರಗತಿಗಳನ್ನು ನಡೆಸಬೇಕು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಹಾಸ್ಟೆಲ್ ಗಳಲ್ಲಿ ಶೇ. ೧೦೦ರಷ್ಟು ದಾಖಲಾತಿಯಾಗಬೇಕು ಹಾಗೂ ಕಡ್ಡಾಯವಾಗಿ ಬಯೋಮೆಟ್ರಿಕ್ ಹಾಜರಾತಿ ಪಡೆದು, ಹಾಜರಾತಿಗೆ ಅನುಗುಣವಾಗಿ ಮಾತ್ರ ಆಹಾರದ ಬಿಲ್ ಮಾಡಬೇಕು ಎಂದು ತಿಳಿಸಿದರು.
ಬಡ ಮತ್ತು ಹಿಂದುಳಿದ ವರ್ಗದ ಮಕ್ಕಳು ವ್ಯಾಸಂಗಕ್ಕಾಗಿ ಹಾಸ್ಟೆಲ್ಗೆ ಬರುತ್ತಾರೆ. ವಾರ್ಡನ್ ಗಳು ಪೋಷಕರ ಸ್ಥಾನದಲ್ಲಿ ನಿಂತು ಸ್ವಂತ ಮಕ್ಕಳಂತೆ ಅವರನ್ನು ನೋಡಿಕೊಳ್ಳಬೇಕು. ಮಕ್ಕಳ ಭವಿಷ್ಯದೊಂದಿಗೆ ಆಟವಾಡಲು ಯಾರಿಗೂ ಹಕ್ಕಿಲ್ಲ, ಯಾವುದೇ ಕಾರಣಕ್ಕೂ ಕೇಂದ್ರಸ್ಥಾನ ಬಿಡುವಂತಿಲ್ಲ ಎಂದು ಅವರು ತರಾಟೆಗೆ ತೆಗೆದುಕೊಂಡರು.
ಹಾಸ್ಟೆಲ್ಗಳಲ್ಲಿ ಕಡ್ಡಾಯವಾಗಿ ಮೆನು ಚಾರ್ಟ್ ಪ್ರದರ್ಶಿಸಬೇಕು ಹಾಗೂ ಮೆನು ಪ್ರಕಾರವೇ ಗುಣಮಟ್ಟದ ಪೌಷ್ಟಿಕ ಆಹಾರ ನೀಡಬೇಕು ಎಂದು ಅವರು ನಿರ್ದೇಶನ ನೀಡಿದರು. ವಿದ್ಯಾರ್ಥಿಗಳಿಗೆ ಊಟ ಬಡಿಸುವ ಮುನ್ನ ವಾರ್ಡನ್ಗಳು ಕಡ್ಡಾಯವಾಗಿ ತಾವೇ ಊಟವನ್ನು ರುಚಿ ನೋಡಬೇಕು. ಕೊಳೆತ ಅಥವಾ ಕಳಪೆ ತರಕಾರಿಗಳನ್ನು ಬಳಸುವಂತಿಲ್ಲ, ಅಡುಗೆ ಕೋಣೆ ಹಾಗೂ ಶೌಚಾಲಯಗಳನ್ನು ಅತ್ಯಂತ ಶುಚಿಯಾಗಿ ಹಾಗೂ ಹೈಜಿನಿಕ್ ಆಗಿ ನಿರ್ವಹಿಸಬೇಕು. ಅಡುಗೆ ಮಾಡುವ ಸಿಬ್ಬಂದಿ ಕಡ್ಡಾಯವಾಗಿ ಏಪ್ರನ್ ಹಾಗೂ ಗ್ಲೌಸ್ ಧರಿಸಿರಬೇಕು ಎಂದು ಅವರು ಸೂಚಿಸಿದರು.
ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅನುಕೂಲವಾಗುವಂತೆ ಪ್ರತಿ ೭೫ ಮಕ್ಕಳಿಗೆ ಒಂದರAತೆ ಎಲ್ಲಾ ಹಾಸ್ಟೆಲ್ ಗಳಲ್ಲಿ ಕಡ್ಡಾಯವಾಗಿ 'ಸಲಹಾ ಪೆಟ್ಟಿಗೆ' ಹಾಗೂ ದೂರು ಪೆಟ್ಟಿಗೆ ಅಳವಡಿಸಬೇಕು ಹಾಗೂ ಮಕ್ಕಳ ಸಹಾಯವಾಣಿ '೧೦೯೮' ಅನ್ನು ಪ್ರಚುರಪಡಿಸಬೇಕು ಎಂದು ತಿಳಿಸಿದರು.
ಎಲ್ಲಾ ಹಾಸ್ಟೆಲ್ ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು, ಆರ್.ಓ ಕುಡಿಯುವ ನೀರಿನ ಘಟಕಗಳು ಮತ್ತು ಬಿಸಿನೀರಿನ ಗೀಸರ್ ಗಳು ಸುಸ್ಥಿತಿಯಲ್ಲಿರಬೇಕು, ಜೊತೆಗೆ ಬಾಲಕಿಯರ ಹಾಸ್ಟೆಲ್ ಗಳಲ್ಲಿ ಇನ್ಸಿನರೇಟರ್ ಗಳು ಕಾರ್ಯನಿರ್ವಹಿಸುತ್ತಿರಬೇಕು ಎಂದು ಆದೇಶಿಸಿದರು. ಈಗಾಗಲೇ ೪೨ ಹಾಸ್ಟೆಲ್ ಗಳಲ್ಲಿ ಕೈತೋಟ ನಿರ್ಮಿಸಲಾಗಿದ್ದು, ಉಳಿದ ಕಡೆಯೂ ಇದನ್ನು ವಿಸ್ತರಿಸಬೇಕು ಮತ್ತು ದಾಸ್ತಾನು ವಹಿಗಳನ್ನು ಪ್ರತಿದಿನ ನಿಖರವಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು.
ಹಾಸ್ಟೆಲ್ಗಳಲ್ಲಿ ಮಕ್ಕಳ ನಿರಂತರ ಆರೋಗ್ಯ ತಪಾಸಣೆ ನಡೆಯಬೇಕು ಹಾಗೂ ಕ್ಯಾಂಪಸ್ಗಳನ್ನು ಮಾದಕ ವ್ಯಸನ ಮುಕ್ತ ಪ್ರದೇಶಗಳನ್ನಾಗಿ ನಿರ್ವಹಿಸಲು ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ಅವರು ತಿಳಿಸಿದರು. ಪೋಷಕರೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಪ್ರತಿ ೨-೩ ತಿಂಗಳಿಗೊಮ್ಮೆ ಪೋಷಕರ ಸಭೆ ನಡೆಸಬೇಕು ಎಂದು ಅವರು ಸಲಹೆ ನೀಡಿದರು.
ಸಭೆಯಲ್ಲಿ ಉಪಕಾರ್ಯದರ್ಶಿ ಟಿ.ಕೆ. ರಮೇಶ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಮೈಲಾರಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಅಧಿಕಾರಿ ಗೀತಮ್ಮ, ಎಲ್ಲಾ ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿಗಳು, ಎಲ್ಲಾ ತಾಲ್ಲೂಕು ಕಾರ್ಯನಿರ್ವಾಹಣಾಧಿಕಾರಿಗಳು, ಮೂರೂ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಹಾಸ್ಟೆಲ್ ವಾರ್ಡನ್ಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್