ಎಸ್ಐಆರ್ ಗೊಂದಲ ಸತ್ಯ; ತಪ್ಪಿತಸ್ಥರ ವಿರುದ್ಧ ಕ್ರಮ: ಸಿಎಂ ಡಿ.ಕೆ. ಶಿವಕುಮಾರ್
ಪಿರಿಯಾಪಟ್ಟಣ, 03 ಅಕ್ಟೋಬರ್ (ಹಿ.ಸ.): ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಗೊಂದಲ ಇರುವುದು ಸತ್ಯ. ಫಾರಂ–7 ಅರ್ಜಿಗಳ ವಿಚಾರದಲ್ಲಿ ಬಂದಿರುವ ದೂರುಗಳನ್ನು ಕಾನೂನು ಪ್ರಕಾರ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಪಿರ
ಸಿಎಂ ಶಿವಕುಮಾರ್


ಪಿರಿಯಾಪಟ್ಟಣ, 03 ಅಕ್ಟೋಬರ್ (ಹಿ.ಸ.):

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಗೊಂದಲ ಇರುವುದು ಸತ್ಯ. ಫಾರಂ–7 ಅರ್ಜಿಗಳ ವಿಚಾರದಲ್ಲಿ ಬಂದಿರುವ ದೂರುಗಳನ್ನು ಕಾನೂನು ಪ್ರಕಾರ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಪಿರಿಯಾಪಟ್ಟಣದ ಹೆಲಿಪ್ಯಾಡ್ ಬಳಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗಕ್ಕೆ 25 ಸಾವಿರ ಫಾರಂ–7 ಅರ್ಜಿಗಳು ಸಲ್ಲಿಕೆಯಾಗಿವೆಯೋ ಅಥವಾ 50 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆಯೋ ಎಂಬುದು ಮುಖ್ಯವಲ್ಲ. ಪೂರ್ವಮುದ್ರಿತ ಫಾರಂ–7 ಮೂಲಕ ಮತದಾರರ ಹೆಸರು ಅಳಿಸಲು ಮನವಿ ಮಾಡಿರುವುದು ಸತ್ಯವಲ್ಲವೇ ಎಂದು ಪ್ರಶ್ನಿಸಿದರು. ಅರ್ಜಿ ಸಲ್ಲಿಸಿದವರಿಗೂ ಈ ವಿಚಾರ ತಿಳಿದಿಲ್ಲ. ಇದಕ್ಕೆ ದಾಖಲೆಗಳಿವೆ ಎಂದು ಹೇಳಿದರು.

ಫಾರಂ–7 ಅರ್ಜಿಗಳ ವಿಚಾರದಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಯಾವುದೇ ಮತದಾರರ ಹೆಸರನ್ನು ತಕ್ಷಣ ಅಳಿಸದೆ, ಪ್ರತಿಯೊಂದು ಅರ್ಜಿಯನ್ನೂ ಪರಿಶೀಲಿಸುವಂತೆ ಎಲ್ಲ ಚುನಾವಣಾಧಿಕಾರಿಗಳಿಗೆ ಸಂದೇಶ ನೀಡಲಾಗಿದೆ. ಇದು ಸ್ವಾಗತಾರ್ಹ ಬೆಳವಣಿಗೆ ಎಂದು ಶಿವಕುಮಾರ್ ಹೇಳಿದರು.

ಹಳೆಯ ಮತದಾರರ ಪಟ್ಟಿಯನ್ನೂ ಪರಿಶೀಲಿಸಿ, ಎಲ್ಲೆಲ್ಲಿ ತಪ್ಪುಗಳಾಗಿವೆ ಎಂಬುದನ್ನು ಸರಿಪಡಿಸುವಂತೆ ಸೂಚಿಸಲಾಗಿದೆ. ಅಲ್ಪಸಂಖ್ಯಾತರು, ದಲಿತರು, ಪರಿಶಿಷ್ಟ ಜಾತಿ–ಪಂಗಡಗಳು ಹಾಗೂ ಬಡವರು ಸೇರಿದಂತೆ ಯಾವುದೇ ಅರ್ಹ ಮತದಾರರ ಹೆಸರು ಕೈತಪ್ಪದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ದುರ್ಬಲ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಮತದಾರರ ಪಟ್ಟಿ ಪರಿಷ್ಕರಣೆ ನಡೆಸಬೇಕು. ಅರ್ಹರನ್ನು ಹೊಸದಾಗಿ ಮತದಾರರ ಪಟ್ಟಿಗೆ ಸೇರಿಸುವ ಕೆಲಸವೂ ನಡೆಯಬೇಕು ಎಂದು ಹೇಳಿದರು.

‘ಅರ್ಜಿಗಳನ್ನು ಹಿಂಪಡೆಯಲು ಮನವಿ ಮಾಡಿದ್ದಾರೆ’

ಈ ವಿಚಾರದಲ್ಲಿ ರಾಜ್ಯ ಸರ್ಕಾರ ತನಿಖೆ ನಡೆಸಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಯಾವ ವಿಚಾರ ಹೊರಬರುತ್ತದೆ ಎಂಬುದನ್ನು ನೋಡೋಣ ಎಂದರು.

ಕೆಲವರು ತಾವು ಇಲ್ಲಿಯೇ ಇದ್ದರೂ ಮೃತಪಟ್ಟಿದ್ದಾರೆ ಎಂದು ಅರ್ಜಿ ಸಲ್ಲಿಸಿರುವುದಾಗಿ, ಮನೆಯಲ್ಲಿ ಇದ್ದವರ ಹೆಸರನ್ನೂ ತೆಗೆದುಹಾಕಬೇಕು ಎಂದು ಅರ್ಜಿ ಸಲ್ಲಿಸಿರುವುದಾಗಿ ಸ್ಥಳೀಯ ಮತದಾರರು ದೂರು ನೀಡಿದ್ದಾರೆ. ವಿಚಾರಣೆ ನಡೆಸಿದಾಗ ಕೆಲವರು ತಾವು ಸಲ್ಲಿಸಿದ ಅರ್ಜಿಗಳನ್ನು ಹಿಂಪಡೆಯಲು ಮನವಿ ಮಾಡಿದ್ದಾರೆ. ಇನ್ನೂ ಕೆಲವರು ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ತಮ್ಮ ವಿರುದ್ಧ ಪ್ರಕರಣ ದಾಖಲಿಸಬೇಕು ಎಂಬ ಬಿಜೆಪಿ ನಾಯಕರ ಆಗ್ರಹದ ಕುರಿತು ಮಾತನಾಡಿದ ಅವರು, ತಾವು ಚುನಾವಣಾ ಆಯೋಗದ ಮುಂದೆ ಧರಣಿ ನಡೆಸಲು ಹೋಗಿರಲಿಲ್ಲ. ರಾಜ್ಯದ ಪ್ರತಿನಿಧಿಯಾಗಿ ಸಂವಿಧಾನಾತ್ಮಕ ಸಂಸ್ಥೆಯ ಮುಂದೆ ಮನವಿ ಸಲ್ಲಿಸಲು ಹೋಗಿದ್ದೆ. ಚುನಾವಣಾ ಆಯೋಗಕ್ಕೆ ಗೌರವ ನೀಡುವುದು ತಮ್ಮ ಕರ್ತವ್ಯ ಎಂದರು.

ತಾವು ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಪ್ರಕರಣ ದಾಖಲಿಸಲಿ. ಕಾನೂನಿಗೆ ಗೌರವ ನೀಡಬೇಕು. ತಾವು ಏನಾದರೂ ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳುವುದರಲ್ಲಿ ತಪ್ಪಿಲ್ಲ ಎಂದು ಶಿವಕುಮಾರ್ ಹೇಳಿದರು.

ಬರ ಪರಿಹಾರ: ಆತುರ ಬೇಡ, ಕೇಂದ್ರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳೋಣ

ರಾಜ್ಯದಲ್ಲಿ ಬರ ಪರಿಸ್ಥಿತಿ ಪರಿಶೀಲಿಸಲು ಕೇಂದ್ರ ಸರ್ಕಾರದ ತಂಡ ಆಗಮಿಸಿರುವ ಕುರಿತು ಮಾತನಾಡಿದ ಮುಖ್ಯಮಂತ್ರಿ, ಕೇಂದ್ರದಿಂದ ಆಗಮಿಸಿರುವ ಬರ ಅಧ್ಯಯನ ತಂಡದೊಂದಿಗೆ ಮಾತುಕತೆ ನಡೆಸಿ ಹೆಚ್ಚಿನ ಪ್ರದೇಶಗಳ ಪರಿಶೀಲನೆಗೆ ಮನವಿ ಮಾಡಲಾಗಿದೆ ಎಂದರು.

ಈಗಾಗಲೇ 217 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಮೊದಲ ಹಂತದಲ್ಲಿ ಕೆಲವು ಪ್ರದೇಶಗಳ ಪರಿಶೀಲನೆಗೆ ಬಂದಿರುವ ತಂಡವು ಎರಡು–ಮೂರು ಹಂತಗಳಲ್ಲಿ ಹೆಚ್ಚಿನ ಪ್ರದೇಶಗಳನ್ನೂ ಒಳಗೊಳ್ಳುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಕಳೆದ ಹಲವು ದಶಕಗಳ ಮಳೆ ಹಾಗೂ ಬರ ಪರಿಸ್ಥಿತಿಯ ದಾಖಲೆಗಳನ್ನು ತಂಡದ ಮುಂದೆ ಮಂಡಿಸಲಾಗಿದೆ. ಹಿಂದಿನ 50 ವರ್ಷಗಳ ದಾಖಲೆಗಳನ್ನೂ ಪರಿಶೀಲಿಸಿ ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸುವಂತೆ ಮನವಿ ಮಾಡಲಾಗಿದೆ. ಮೂರು ತಂಡಗಳು ವಿವಿಧ ಪ್ರದೇಶಗಳಿಗೆ ತೆರಳಲಿದ್ದು, ಅವರಿಗೆ ಅಗತ್ಯ ಮಾಹಿತಿ ಹಾಗೂ ಸ್ಥಳೀಯ ಪರಿಸ್ಥಿತಿಯನ್ನು ತೋರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಕಳೆದ ಎರಡು ಬಾರಿ ರಾಜ್ಯ ಕೇಳಿದಷ್ಟು ಪರಿಹಾರ ಬಂದಿಲ್ಲ. ಈ ಬಾರಿಯೂ ನ್ಯಾಯಾಲಯದ ಮೊರೆ ಹೋಗಲಾಗುವುದೇ ಎಂಬ ಪ್ರಶ್ನೆಗೆ, ಈಗಲೇ ಆತುರಪಡುವುದಿಲ್ಲ. ಮೊದಲು ಕೇಂದ್ರ ತಂಡವನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಾಸ್ತವ ಪರಿಸ್ಥಿತಿಯನ್ನು ವಿವರಿಸೋಣ. ಬೇರೆ ರೀತಿಯಲ್ಲಿ ತರಾತುರಿಯಲ್ಲಿ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.

‘ಕಾನೂನು ಎಲ್ಲರಿಗೂ ಉತ್ತರ ಕೊಡುತ್ತದೆ’

ಕಾಫಿ–ಟೀಗೆ ಕೋಟಿ ರೂ. ಖರ್ಚು ಮಾಡಲಾಗಿದೆ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪದ ಕುರಿತು ಕೇಳಿದಾಗ ಮುಖ್ಯಮಂತ್ರಿ, “ಬಹಳ ಸಂತೋಷ” ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು.

ನೈಸ್ ಯೋಜನೆ ವ್ಯಾಪ್ತಿಯಲ್ಲಿ ಒಂದು ಎಕರೆ ಜಾಗ ಖರೀದಿ ಮಾಡಿದ್ದರೂ ನೇಣು ಹಾಕಿಕೊಳ್ಳುವೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ, “ಈಗ ಅದರ ಬಗ್ಗೆ ಚರ್ಚೆ ಬೇಡ. ರಾಜ್ಯ ಹಾಗೂ ದೇಶದಲ್ಲಿ ಕಾನೂನುಗಳಿವೆ. ಕಾನೂನು ಎಲ್ಲರಿಗೂ ಉತ್ತರ ಕೊಡುತ್ತದೆ” ಎಂದು ಶಿವಕುಮಾರ್ ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande