ನಂಬರ್ ಪ್ಲೇಟ್ ದೋಷ: ಬಾಗಲಕೋಟೆ ಜಿಲ್ಲೆಯಲ್ಲಿ ಪೊಲೀಸರ ವಿಶೇಷ ಕಾರ್ಯಾಚರಣೆ
ಬಾಗಲಕೋಟೆ, 03 ಅಕ್ಟೋಬರ್ (ಹಿ.ಸ.) ಬಾಗಲಕೋಟೆ ಜಿಲ್ಲಾ ಪೊಲೀಸ್ ವತಿಯಿಂದ ನಂಬರ್ ಪ್ಲೇಟ್ ಇಲ್ಲದ ಹಾಗೂ ದೋಷಪೂರಿತ, ಅಸ್ಪಷ್ಟ ನಂಬರ್ ಪ್ಲೇಟ್ ಹೊಂದಿರುವ ವಾಹನಗಳ ವಿರುದ್ಧ ಶನಿವಾರ ವಿಶೇಷ ಕಾರ್ಯಾಚರಣೆ ನಡೆಸಲಾಯಿತು. ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಪಾಲನೆಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿ
ಪೊಲೀಸರ ಕಾರ್ಯಾಚರಣೆ


ಬಾಗಲಕೋಟೆ, 03 ಅಕ್ಟೋಬರ್ (ಹಿ.ಸ.)

ಬಾಗಲಕೋಟೆ ಜಿಲ್ಲಾ ಪೊಲೀಸ್ ವತಿಯಿಂದ ನಂಬರ್ ಪ್ಲೇಟ್ ಇಲ್ಲದ ಹಾಗೂ ದೋಷಪೂರಿತ, ಅಸ್ಪಷ್ಟ ನಂಬರ್ ಪ್ಲೇಟ್ ಹೊಂದಿರುವ ವಾಹನಗಳ ವಿರುದ್ಧ ಶನಿವಾರ ವಿಶೇಷ ಕಾರ್ಯಾಚರಣೆ ನಡೆಸಲಾಯಿತು.

ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಪಾಲನೆಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಜಿಲ್ಲೆಯ ವಿವಿಧೆಡೆ ಪೊಲೀಸರು ವಾಹನಗಳನ್ನು ಪರಿಶೀಲಿಸಿ, ನಿಯಮ ಉಲ್ಲಂಘಿಸಿದ ಸವಾರರ ವಿರುದ್ಧ ಕ್ರಮ ಕೈಗೊಂಡರು.

ವಾಹನಗಳಿಗೆ ಅಳವಡಿಸಲಾಗಿರುವ ನಂಬರ್ ಪ್ಲೇಟ್ಗಳು ಸ್ಪಷ್ಟವಾಗಿ ಕಾಣುವಂತಿರಬೇಕು ಹಾಗೂ ಕಾನೂನುಬದ್ಧ ನಿಯಮಗಳಿಗೆ ಅನುಗುಣವಾಗಿರಬೇಕು. ಆದರೆ ಕೆಲ ವಾಹನಗಳಲ್ಲಿ ನಂಬರ್ ಪ್ಲೇಟ್ಗಳನ್ನು ಅಳವಡಿಸದೇ ಸಂಚರಿಸುವುದು, ನಂಬರ್ ಪ್ಲೇಟ್ಗಳನ್ನು ತಿರುಚುವುದು, ಅಸ್ಪಷ್ಟವಾಗಿರುವಂತೆ ಮಾಡುವುದು ಸೇರಿದಂತೆ ವಿವಿಧ ರೀತಿಯ ಉಲ್ಲಂಘನೆಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆ ಕೈಗೊಂಡಿತು.

ಕಾರ್ಯಾಚರಣೆಯ ಸಂದರ್ಭದಲ್ಲಿ ಪೊಲೀಸರು ವಾಹನಗಳ ನಂಬರ್ ಪ್ಲೇಟ್ಗಳನ್ನು ಪರಿಶೀಲಿಸುವುದರ ಜತೆಗೆ ಸವಾರರಿಗೆ ಸಂಚಾರ ನಿಯಮಗಳ ಮಹತ್ವದ ಕುರಿತು ತಿಳುವಳಿಕೆ ನೀಡಿದರು. ನಂಬರ್ ಪ್ಲೇಟ್ ಇಲ್ಲದೆ ಅಥವಾ ದೋಷಪೂರಿತ ನಂಬರ್ ಪ್ಲೇಟ್ನೊಂದಿಗೆ ವಾಹನ ಚಲಾಯಿಸುವುದರಿಂದ ಕಾನೂನುಬದ್ಧ ಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂದು ವಾಹನ ಸವಾರರಿಗೆ ಎಚ್ಚರಿಕೆ ನೀಡಲಾಯಿತು.

ನಿಯಮ ಉಲ್ಲಂಘಿಸಿರುವ ವಾಹನಗಳ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿ ದಂಡ ವಿಧಿಸಲಾಯಿತು. ವಾಹನದ ನೋಂದಣಿ ಸಂಖ್ಯೆಯು ಸ್ಪಷ್ಟವಾಗಿ ಗೋಚರಿಸುವುದು ಸಂಚಾರ ನಿಯಂತ್ರಣ, ಅಪಘಾತಗಳ ಸಂದರ್ಭದಲ್ಲಿ ವಾಹನ ಗುರುತಿಸುವಿಕೆ ಹಾಗೂ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಮಹತ್ವದ್ದಾಗಿದೆ ಎಂದು ಪೊಲೀಸರು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು.

ವಾಹನ ಸವಾರರು ತಮ್ಮ ವಾಹನಗಳಿಗೆ ಕಡ್ಡಾಯವಾಗಿ ಸರಿಯಾದ, ಕಾನೂನುಬದ್ಧ ಹಾಗೂ ಸ್ಪಷ್ಟವಾಗಿ ಕಾಣುವ ನಂಬರ್ ಪ್ಲೇಟ್ ಅಳವಡಿಸಿಕೊಂಡು ಸಂಚರಿಸಬೇಕು. ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಮೂಲಕ ತಮ್ಮ ಹಾಗೂ ಇತರರ ಸುರಕ್ಷತೆಗೆ ಅಪಾಯ ಉಂಟುಮಾಡಬಾರದು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.

ರಸ್ತೆ ಸುರಕ್ಷತೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಸಾರ್ವಜನಿಕರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿಯೂಷ್ ಗೋಯೆಲ್ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande