ಮಂಡ್ಯ: ಹೋಟೆಲ್ ಪಾರ್ಕಿಂಗ್ನಲ್ಲಿ ನಿಂತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ
ಮಂಡ್ಯ ನಗರದ ಹೊರವಲಯದ ಅಮರಾವತಿ ಹೋಟೆಲ್ ಪಾರ್ಕಿಂಗ್ನಲ್ಲಿ ನಿಂತಿದ್ದ ಬೆಂಗಳೂರಿನ ಸಿಂಧು ಅವರಿಗೆ ಸೇರಿದ ಟೊಯೋಟಾ ಗ್ಲಾಂಜಾ ಕಾರಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.
mandya-toyota-glanza-car-catches-fire-at-hotel-parking


ಮಂಡ್ಯ, 29 ಅಕ್ಟೋಬರ್ (ಹಿ.ಸ.):

ನಗರದ ಹೊರವಲಯದಲ್ಲಿರುವ ಅಮರಾವತಿ ಹೋಟೆಲ್ನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಟೊಯೋಟಾ ಗ್ಲಾಂಜಾ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.

ಕ್ಷಣಾರ್ಧದಲ್ಲೇ ಕಾರಿಗೆ ಬೆಂಕಿ ವ್ಯಾಪಿಸಿದ್ದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಬೆಂಗಳೂರಿನ ಬಾಣಸವಾಡಿ ನಿವಾಸಿ ಸಿಂಧು ಅವರಿಗೆ ಸೇರಿದ ಕಾರು ಇದಾಗಿದೆ ಎಂದು ತಿಳಿದುಬಂದಿದೆ.

ಕಾರಿನ ಎಸಿ ವ್ಯವಸ್ಥೆಯಲ್ಲಿ ಗ್ಯಾಸ್ ಸೋರಿಕೆಯಾಗಿರುವುದರಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಪ್ರಾಥಮಿಕವಾಗಿ ಹೇಳಲಾಗಿದ್ದು, ನಿಖರ ಕಾರಣ ಇನ್ನಷ್ಟೇ ದೃಢಪಡಬೇಕಿದೆ.

ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಾಘವೇಂದ್ರ ಅವರ ನೇತೃತ್ವದ ತಂಡ ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿತು.

ಘಟನೆಯಿಂದ ಹೋಟೆಲ್ ಆವರಣದಲ್ಲಿ ಕೆಲಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹೆಚ್ಚಿನ ವಿವರಗಳು ತಿಳಿದುಬರಬೇಕಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande