
ಕಲಬುರಗಿ, 29 ಅಕ್ಟೋಬರ್ (ಹಿ.ಸ.):
ವಿದ್ಯುತ್ ತಂತಿಯಿಂದ ಹಾರಿದ ಬೆಂಕಿಯ ಕಿಡಿ ತಗುಲಿ ಮಾರಾಟಕ್ಕಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಹತ್ತಿ ಸುಟ್ಟು ಭಸ್ಮವಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಗೊಬ್ಬರ (ಬಿ) ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಅಂಬರೀಶ್ ಎಂಬುವರಿಗೆ ಸೇರಿದ ಹತ್ತಿ ಬೆಂಕಿಗೆ ಆಹುತಿಯಾಗಿದೆ. ಅಂಬರೀಶ್ ಅವರು ರೈತರಿಂದ ಹತ್ತಿಯನ್ನು ಖರೀದಿಸಿ, ಮಾರುಕಟ್ಟೆಗೆ ಸಾಗಿಸಿ ಮಾರಾಟ ಮಾಡುವ ಉದ್ದೇಶದಿಂದ ಒಂದೆಡೆ ಸಂಗ್ರಹಿಸಿಟ್ಟಿದ್ದರು.
ಆದರೆ, ವಿದ್ಯುತ್ ತಂತಿಯಿಂದ ಹಾರಿದ ಬೆಂಕಿಯ ಕಿಡಿ ಹತ್ತಿಗೆ ತಗುಲಿದ ಪರಿಣಾಮ ಬೆಂಕಿ ಹೊತ್ತಿಕೊಂಡು ಅಪಾರ ಪ್ರಮಾಣದ ಹತ್ತಿ ಸುಟ್ಟುಹೋಗಿದೆ.
ಘಟನೆ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆದರೆ, ಅಷ್ಟರಲ್ಲಾಗಲೇ ಲಕ್ಷಾಂತರ ರೂಪಾಯಿ ಮೌಲ್ಯದ ಹತ್ತಿ ಸುಟ್ಟು ಭಸ್ಮವಾಗಿದ್ದು, ಅಂಬರೀಶ್ ಅವರಿಗೆ ಭಾರಿ ಆರ್ಥಿಕ ನಷ್ಟ ಉಂಟಾಗಿದೆ.
ದೇವಲ ಗಾಣಗಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R