ಬೆಂಗಳೂರಿನ ಕಸ ನಿರ್ವಹಣೆ ಕುರಿತು ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ
ಬೆಂಗಳೂರು ಕಸ ನಿರ್ವಹಣೆ ಸುಧಾರಣೆಗೆ ಹೊಸ ಜಿಪಿಎಸ್ ವಾಹನಗಳ ಖರೀದಿ ಹಾಗೂ ಸಚಿವ ಸಂಪುಟ ಸಭೆಯ ಇـತರೆ ಪ್ರಮುಖ ನಿರ್ಧಾರಗಳ ಕುರಿತು ವರದಿ.
bengaluru-cabinet-waste-management


ಬೆಂಗಳೂರು, 29 ಅಕ್ಟೋಬರ್ (ಹಿ.ಸ.):

ರಾಜಧಾನಿ ಬೆಂಗಳೂರಿನ ಸೌಂದರ್ಯೀಕರಣ, ತ್ಯಾಜ್ಯ ನಿರ್ವಹಣೆ ಹಾಗೂ ಸರ್ಕಾರದ ಪ್ರಮುಖ ಯೋಜನೆಗಳ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟ ಸಭೆಯಲ್ಲಿ ಹಲವು ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, ನಗರದಲ್ಲಿ ಕಸ ನಿರ್ವಹಣೆ ಸುಧಾರಿಸಲು ಸಂಪೂರ್ಣ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದರು.

ಕಸದ ಸಮಸ್ಯೆಗೆ ಮುಕ್ತಿ ಪಡೆಯಲು ಮಾಸ್ಟರ್ ಪ್ಲ್ಯಾನ್

ಪ್ರಸ್ತುತ ಕಸ ಸಾಗಣೆ ಮಾಡುತ್ತಿರುವ ಹಳೆಯ ವಾಹನಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಹಾಗೂ ಹಲವು ಪ್ರದೇಶಗಳಿಗೆ ತಲುಪುತ್ತಿಲ್ಲ. ಜಿಪಿಎಸ್ ಕಡ್ಡಾಯಗೊಳಿಸಿದ್ದರೂ ಸಂಪೂರ್ಣ ಅನುಷ್ಠಾನವಾಗಿಲ್ಲ.

ಹೀಗಾಗಿ, ಜಿಪಿಎಸ್ ತಂತ್ರಜ್ಞಾನ ಹೊಂದಿರುವ 1 ರಿಂದ 5 ಟನ್ ಸಾಮರ್ಥ್ಯದ ಹೊಸ ಆಟೋ ಹಾಗೂ ವಾಹನಗಳನ್ನು ಪರಿಚಯಿಸಲಾಗುತ್ತಿದೆ.

ಇದಕ್ಕಾಗಿ 1,900 ಮೂರು ಚಕ್ರದ ಹಾಗೂ 3,000 ನಾಲ್ಕು ಚಕ್ರದ ಹೊಸ ವಾಹನಗಳನ್ನು ಖರೀದಿಸಲಾಗುವುದು.

ಈ ಹಿಂದೆ 5 ಪ್ಯಾಕೇಜ್ಗಳಿಗೆ ವರ್ಕ್ ಆರ್ಡರ್ ನೀಡಲಾಗಿದ್ದು, ಇದೀಗ ಹೆಚ್ಚುವರಿ 10 ಪ್ಯಾಕೇಜ್ಗಳಿಗೆ ವರ್ಕ್ ಆರ್ಡರ್ ನೀಡಲು ಸಂಪುಟ ಅನುಮೋದನೆ ನೀಡಿದೆ.

7 ವರ್ಷಗಳ ಅವಧಿಯ ಈ ಟೆಂಡರ್ ಪಡೆದುಕೊಳ್ಳುವ ಸಂಸ್ಥೆಗಳು ಕನಿಷ್ಠ 10 ಕೋಟಿ ರೂಪಾಯಿ ಬಂಡವಾಳ ಹೂಡಬೇಕಿದ್ದು, ಇದರಿಂದ ವಾರ್ಷಿಕ ಕಸ ನಿರ್ವಹಣೆ ವೆಚ್ಚ 598 ಕೋಟಿಯಿಂದ 620 ಕೋಟಿ ರೂಪಾಯಿಗೆ ತಲುಪುವ ನಿರೀಕ್ಷೆಯಿದೆ.

ಇನ್ನು ಶಿವಾಜಿನಗರ ಭಾಗದಲ್ಲಿ ಕಲುಷಿತ ನೀರು ಕೆರೆಗೆ ಸೇರುತ್ತಿರುವುದನ್ನು ತಡೆಯಲು ಕಾಚಾರಕನಹಳ್ಳಿಯಲ್ಲಿ 10 ಕೋಟಿ ರೂಪಾಯಿ ವೆಚ್ಚದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ, ದೇವರಾಜು ಅರಸು ಹಿಂದುಳಿದ ವರ್ಗಗಳ ನಿಗಮದ ಮೂಲಕ 9,243 ಹೊಲಿಗೆ ಯಂತ್ರಗಳನ್ನು ಒದಗಿಸಲು ಅನುಮೋದನೆ ನೀಡಲಾಗಿದೆ.

ಸರ್ಕಾರದ ಪ್ರಮುಖ ಯೋಜನೆಗಳ ಮೌಲ್ಯಮಾಪನ

ಇದೇ ವೇಳೆ, ಸರ್ಕಾರದ ಪ್ರಮುಖ ಯೋಜನೆಗಳ ಮೌಲ್ಯಮಾಪನ ನಡೆಸಲು ಯೋಜನೆ ಮತ್ತು ಸಾಂಖ್ಯಿಕ ಇಲಾಖೆಗೆ ಸಂಪುಟ ಒಪ್ಪಿಗೆ ನೀಡಿದೆ.

ಪ್ರಥಮ ಹಂತದಲ್ಲಿ 1 ಲಕ್ಷ ಫಲಾನುಭವಿಗಳನ್ನು ಗುರುತಿಸಿ, ಅವರಿಂದ 60 ಸಾವಿರ ಪ್ರತಿಕ್ರಿಯೆಗಳನ್ನು ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ.

ಇದರಿಂದ ಯೋಜನೆಗಳಲ್ಲಿ ಅಗತ್ಯ ಬದಲಾವಣೆ ಹಾಗೂ ಸುಧಾರಣೆ ಮಾಡಲು ನೆರವಾಗಲಿದೆ.

ಮುಂಬರುವ ಚುನಾವಣೆ ಹೊತ್ತಿನಲ್ಲಿ ಈ ಮೌಲ್ಯಮಾಪನಕ್ಕೆ ಟೀಕೆಗಳು ಎದುರಾಗಬಹುದು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, 'ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಯಾವ ರೀತಿಯ ಒಲವಿದೆ ಅಥವಾ ಇಲ್ಲ ಎಂದು ತಿಳಿದುಕೊಳ್ಳುವುದರಲ್ಲಿ ತಪ್ಪೇನಿದೆ?' ಎಂದು ಸಮರ್ಥಿಸಿಕೊಂಡರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande