
ವಿಜಯಪುರ, 29 ಅಕ್ಟೋಬರ್ (ಹಿ.ಸ.)
ವಿಜಯಪುರ ಜಿಲ್ಲೆಯನ್ನು ಸಂವಿಧಾನದ 371(ಜೆ) ವಿಶೇಷ ಮೀಸಲಾತಿ ಸೌಲಭ್ಯದ ವ್ಯಾಪ್ತಿಗೆ ಒಳಪಡಿಸುವಂತೆ ಆಗ್ರಹಿಸಿ ವಿಜಯಪುರ ಜಿಲ್ಲಾ 371(ಜೆ) ಹೋರಾಟ ಸಮಿತಿಯ ವತಿಯಿಂದ ರಾಜ್ಯಸಭಾ ಸದಸ್ಯ ಹಾಗೂ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾದ ಪ್ರೊ. ಎಂ. ನಾಗರಾಜ ಅವರಿಗೆ ಮನವಿ ಸಲ್ಲಿಸಲಾಯಿತು ಎಂದು ಹೋರಾಟಗಾರ ವಿನೋದ ಖೇಡಾ ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆ ಹಲವು ವರ್ಷಗಳಿಂದ ಹಿಂದುಳಿದ ಪ್ರದೇಶಗಳ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿ, ಉದ್ಯೋಗಾವಕಾಶ, ಶಿಕ್ಷಣ, ಕೈಗಾರಿಕೆ, ಮೂಲಸೌಕರ್ಯ ಹಾಗೂ ಸರ್ಕಾರಿ ನೇಮಕಾತಿಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ 371(ಜೆ) ವಿಶೇಷ ಸ್ಥಾನಮಾನ ಅಗತ್ಯವಾಗಿದೆ ಎಂದು ಹೋರಾಟ ಸಮಿತಿ ಪ್ರತಿಪಾದಿಸಿದೆ.
ಜಿಲ್ಲೆಯ ಅನೇಕ ತಾಲೂಕುಗಳು ಬರ, ನೀರಿನ ಸಮಸ್ಯೆ, ಕೃಷಿ ಅವಲಂಬನೆ ಹಾಗೂ ಕೈಗಾರಿಕಾ ಅಭಿವೃದ್ಧಿಯ ಕೊರತೆಯಂತಹ ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯನ್ನು 371(ಜೆ) ಮೀಸಲಾತಿ ಸೌಲಭ್ಯದ ವ್ಯಾಪ್ತಿಗೆ ತರಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಟ್ಟದಲ್ಲಿ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಒತ್ತಾಯಿಸಿದೆ.
371(ಜೆ) ಅಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ದೊರೆಯುತ್ತಿರುವ ಶಿಕ್ಷಣ ಮತ್ತು ಉದ್ಯೋಗ ಸೇರಿದಂತೆ ವಿವಿಧ ವಿಶೇಷ ಸೌಲಭ್ಯಗಳಿಂದ ಅಲ್ಲಿನ ಯುವಜನತೆಗೆ ಹೆಚ್ಚಿನ ಅವಕಾಶಗಳು ಲಭಿಸುತ್ತಿವೆ. ಇದೇ ರೀತಿಯ ಸೌಲಭ್ಯಗಳು ವಿಜಯಪುರ ಜಿಲ್ಲೆಯ ಜನರಿಗೂ ದೊರೆಯಬೇಕು. ಜಿಲ್ಲೆಯ ಯುವಕರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಅವಕಾಶ, ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಅನುಕೂಲ ಹಾಗೂ ಅಭಿವೃದ್ಧಿ ಯೋಜನೆಗಳಲ್ಲಿ ವಿಶೇಷ ಆದ್ಯತೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ವಿಜಯಪುರ ಜಿಲ್ಲೆಗೆ 371(ಜೆ) ಸೌಲಭ್ಯ ದೊರೆಯುವುದರಿಂದ ಜಿಲ್ಲೆಯ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ವೇಗ ದೊರೆಯಲಿದ್ದು, ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ-ಆರ್ಥಿಕ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ಆದ್ದರಿಂದ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಸಂಸತ್ ಹಾಗೂ ಕೇಂದ್ರ ಸರ್ಕಾರದ ಗಮನಕ್ಕೆ ತಂದು, ವಿಜಯಪುರ ಜಿಲ್ಲೆಗೆ ನ್ಯಾಯ ಒದಗಿಸಲು ಸಹಕರಿಸಬೇಕು ಎಂದು ರಾಜ್ಯಸಭಾ ಸದಸ್ಯ ಎಂ. ನಾಗರಾಜ ಅವರಿಗೆ ಮನವಿ ಮಾಡಲಾಗಿದೆ ಎಂದು ವಿನೋದ ಖೇಡಾ ತಿಳಿಸಿದರು.
ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳು, ಯುವಕರು ಹಾಗೂ ಸಾರ್ವಜನಿಕರು ಪಕ್ಷಾತೀತವಾಗಿ 371(ಜೆ) ಬೇಡಿಕೆಗೆ ಬೆಂಬಲ ನೀಡಬೇಕು. ಜಿಲ್ಲೆಯ ಹಕ್ಕು ಹಾಗೂ ಅಭಿವೃದ್ಧಿಗಾಗಿ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಹೋರಾಟ ಸಮಿತಿ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande