
ಕೋಲಾರ ೨೯ ಅಕ್ಟೋಬರ್ (ಹಿ.ಸ.):
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್ ಪಿ. ಬಾಗೇವಾಡಿ ಶ್ರೀನಿವಾಸಪುರ ತಾಲ್ಲೂಕಿನ ರೋಣೂರು ಗ್ರಾಮ ಪಂಚಾಯತಿಗೆ ಭೇಟಿ ನೀಡಿ ವಿಬಿಜಿರಾಮ್ಜಿ ಕಾಮಗಾರಿಗಳು, ತೆರಿಗೆ ವಸೂಲಾತಿ, ಭಾರತ್ ಜೋಡೋ ಅರ್ಜಿಗಳ ಪರಿಶೀಲನೆ ನಡೆಸಿದರು. ವಸತಿ ಯೋಜನೆ, ಲೆಕ್ಕಪರಿಶೋಧನೆಯಲ್ಲಿ ಸೂಚಿಸಿರುವ ವಸೂಲಾತಿ ಮತ್ತು ಆಕ್ಷೇಪಣೆ ಕಂಡಿಕೆಗಳ ತಿಳುವಳಿ ಬಗ್ಗೆ, ಸ್ವಚ್ಛತಾ ಸಂಕೀರ್ಣ ಘಟಕದ ಕಾರ್ಯ ನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸಿದರು. ಆ ನಂತರ ಕೋಟಪಲ್ಲಿ ಗ್ರಾಮದಲ್ಲಿ ಜೆಜೆಎಂ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿ ಆ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪೌಷ್ಟಿಕ ಆಹಾರ ವಿತರಣೆ ಮಕ್ಕಳ ಹಾಜರಾತಿ ಮತ್ತು ಶಾಲಾ ಮೂಲ ಭೂತ ಸೌಕರ್ಯಗಳನ್ನು ಪರಿಶೀಲನೆ ನಡೆಸಿದರು.
ರೇಡಂಪಲ್ಲಿ ಗ್ರಾಮದಲ್ಲಿ ವಿಬಿಜಿರಾಮ್ಜಿ ಯೋಜನೆಯಡಿ ಪ್ರಗತಿಯಲ್ಲಿದ್ದ ಕಾಲುವೆ ಅಭಿವೃದ್ಧಿ ಕಾಮಗಾರಿಯನ್ನು ಸ್ಥಳಕ್ಕೆ ಭೇಟಿ ನೀಡಿ ಕೂಲಿಕಾರರ ಹಾಜರಾತಿಯನ್ನು ಎನ್.ಎಂ.ಎA.ಎಸ್ ಆ್ಯಪ್ ಮೂಲಕ ಪ್ರಾಯೋಗಿಕವಾಗಿ ಸೆರೆಹಿಡಿಯುವ ಪ್ರಕ್ರಿಯೆಯನ್ನು ಸ್ಥಳದಲ್ಲೇ ಪರಿಶೀಲಿಸಿದರು. ದೊಡ್ಡಪಲ್ಲಿ ಗ್ರಾಮದಲ್ಲಿ ಚಾಲ್ತಿಯಲ್ತಿಯಲ್ಲಿದ್ದ ಸ್ವಚ್ಚ ಸಂಕೀರ್ಣ ಘಟಕ ಸ್ಥಳಕ್ಕೆ ಭೇಟಿ ನೀಡಿ ಘಟಕದ ನಿರ್ವಹಣೆಯನ್ನು ಪರಿಶೀಲನೆ ನಡೆಸಿದರು.
ಈ ವೇಳೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ ಸರ್ವೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸುನೀತಾ, ಸಹಾಯಕ ನಿರ್ದೇಶಕರಾದ ರಾಮಪ್ಪ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಹೇಶ್ ಕುಮಾರ್ ಹಾಗೂ ವಿಬಿಜಿರಾಮ್ಜಿ ತಾಂತ್ರಿಕ ಸಿಬ್ಬಂದಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್