ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ರೈತ ಸಂಘಟನೆಗಳಿ0ದ ಪ್ರತಿಭಟನೆ
ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ರೈತ ಸಂಘಟನೆಗಳಿ0ದ ಪ್ರತಿಭಟನೆ
ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಕೋಲಾರ ತಾಲ್ಲೂಕು ಕಛೇರಿಯ ಮುಂದೆ ರಾಜ್ಯ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.


ಕೋಲಾರ, ೨೯ ಅಕ್ಟೋಬರ್ (ಹಿ.ಸ): ಕಂದಾಯ ಇಲಾಖೆಯಿಂದ ಮಂಜೂರಾಗಿರುವ ರೈತರ ಜಮೀನುಗಳ ವಿಚಾರದಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಜಂಟಿ ಸರ್ವೆ ನಡೆಸದೆ ಏಕಪಕ್ಷೀಯವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಅರಣ್ಯ ಇಲಾಖೆ ಡಿಎಫ್ಒ ಸರಿನಾ ಸಿಕ್ಕಲಿಗರ್ ಅವರು ಜನಪ್ರತಿನಿಧಿಗಳ ಸೂಚನೆಗಳಿಗೂ ಮಣಿಯದೆ ರೈತರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ನಗರದ ತಹಶಿಲ್ದಾರ್ ಕಛೇರಿ ಮುಂದೆ ಗುರುವಾರ ಸಂಯುಕ್ತ ಹೋರಾಟ ಕರ್ನಾಟಕದ ವತಿಯಿಂದ ಪ್ರತಿಭಟನೆ ನಡೆಸಿದರು.

ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ ಶ್ರೀನಿವಾಸಪುರ ತಾಲ್ಲೂಕಿನ ನೆಲವಂಕಿ ಹೋಬಳಿಯ ಮಲ್ಲಂಪಲ್ಲಿ ಗ್ರಾಮದ ಸರ್ವೆ ನಂ.೩೫ರಲ್ಲಿ ಉತ್ತರಪಲ್ಲಿ ಗ್ರಾಮದ ೧೯ ದಲಿತ ಕುಟುಂಬಗಳಿಗೆ ಸರ್ಕಾರ ಮಂಜೂರು ಮಾಡಿರುವ ಜಮೀನಿನಲ್ಲಿ ಸುಮಾರು ವರ್ಷಗಳಿಂದ ಕೃಷಿ ಮಾಡಲಾಗುತ್ತಿದೆ. ಅ.೨೮ರಂದು ಅರಣ್ಯ ಇಲಾಖೆ ಸಿಬ್ಬಂದಿ ಜೆಸಿಬಿ ಮತ್ತು ಟ್ರ್ಯಾಕ್ಟರ್ಗಳೊಂದಿಗೆ ಜಮೀನಿಗೆ ಪ್ರವೇಶಿಸಿ ಬೆಳೆ ನಾಶಪಡಿಸಲು ಮುಂದಾಗಿದ್ದಾರೆ. ಇದನ್ನು ವಿರೋಧಿಸಿದ ನಾಲ್ವರು ರೈತರನ್ನು ಬಂಧಿಸಿ ಸಂಜೆ ಬಿಡುಗಡೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ ಮಾತನಾಡಿ ರೈತರ ಭೂಮಿಯ ಹಕ್ಕುಗಳನ್ನು ಪರಿಶೀಲಿಸದೆ ಅರಣ್ಯ ಇಲಾಖೆ ಅಧಿಕಾರಿಗಳು ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿರುವುದು ಖಂಡನೀಯ. ಜನಪ್ರತಿನಿಧಿಗಳು ಸೂಚನೆ ನೀಡಿದ್ದರೂ ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ತೊಂದರೆ ನೀಡಲಾಗುತ್ತಿದೆ. ತಕ್ಷಣ ಜಂಟಿ ಸರ್ವೆ ನಡೆಸಿ, ರೈತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಸಂತ್ರಸ್ತ ರೈತ ಮುಖಂಡರಾದ ಹರಟಿ ಪ್ರಕಾಶ್ ಹಾಗೂ ಆರ್. ಶ್ರೀನಿವಾಸನ್ ಮಾತನಾಡಿ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು. ರೈತರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು, ಭೂಮಿಯ ಹಕ್ಕುಗಳನ್ನು ರಕ್ಷಿಸಬೇಕು ಶ್ರೀನಿವಾಸಪುರದಲ್ಲಿ ನಡೆದ ಘಟನೆ ಬಗ್ಗೆ ಧ್ವನಿ ಎತ್ತಬೇಕಾದ ಶಾಸಕ ವೆಂಕಟಶಿವಾರೆಡ್ಡಿ ಮೌನವಾಗಿದ್ದಾರೆ ಎಂದು ಆರೋಪಿಸಿದರು

ಮನವಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ತಹಶೀಲ್ದಾರ್ ಕಚೇರಿಯ ಅಧಿಕಾರಿಗಳ ಮೂಲಕ ಸಲ್ಲಿಸಿ, ದಾಖಲೆಗಳ ಪರಿಶೀಲನೆ ಹಾಗೂ ಜಂಟಿ ಸರ್ವೆ ಪೂರ್ಣಗೊಳ್ಳುವವರೆಗೆ ರೈತರನ್ನು ಒಕ್ಕಲೆಬ್ಬಿಸದಂತೆ ಕ್ರಮ ಕೈಗೊಳ್ಳಬೇಕು ಹಾಗೂ ಅರಣ್ಯ ಇಲಾಖೆಯ ಡಿಎಫ್ಒ ಸರಿನಾ ಸಿಕ್ಕಲಿಗರ್ ಅವರನ್ನು ಕೂಡಲೇ ವರ್ಗಾವಣೆ ಮಾಡಿ ಜಿಲ್ಲೆಯ ರೈತರನ್ನು ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕೆ.ಪಿ.ಆರ್.ಎಸ್ ಜಿಲ್ಲಾ ಅಧ್ಯಕ್ಷ ಎನ್ ಎನ್ ಶ್ರೀರಾಮ್, ತಾಲೂಕು ಕಾರ್ಯದರ್ಶಿ ವಿ.ನಾರಾಯಣರೆಡ್ಡಿ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕೃಷ್ಣ ಕಾರ್ಯದರ್ಶಿ ಭೀಮರಾಜ್, ಮುಖಂಡರಾದ ಗಂಗಮ್ಮ, ಮುನಿರತ್ನಮ್ಮ, ಹೊಲ್ಲಂಬಳ್ಳಿ ವೆಂಕಟೇಶಪ್ಪ, ಕೋಟಿಗಾನಹಳ್ಳಿ ಗಣೇಶ್ ಗೌಡ, ಚಿನ್ನಮ್ಮ, ಕೆ ಬಿ ಹೊಸಳ್ಳಿ ನಾರಾಯಣಸ್ವಾಮಿ, ರಾಜೇಂದ್ರ ಕುಮಾರ್, ಮಂಜುನಾಥ್ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande