


ತೋರಣಗಲ್ಲು, 29 ಅಕ್ಟೋಬರ್ (ಹಿ.ಸ.):
ಜೆಎಸ್ಡಬ್ಲ್ಯೂ ಫೌಂಡೇಶನ್ ವತಿಯಿಂದ ಭಾರೀ ಮೋಟಾರು ವಾಹನಗಳ ಚಾಲನಾ ತರಬೇತಿಯ ಮೊದಲ ತಂಡವನ್ನು ಆರಂಭಿಸಲಾಗಿದ್ದು, 30 ಅಭ್ಯರ್ಥಿಗಳು ತರಬೇತಿಗೆ ಸೇರ್ಪಡೆಯಾಗಿದ್ದಾರೆ.
ತರಬೇತಿಯ ಭಾಗವಾಗಿ ಚಾಲನಾ ಅನುಕರಣ ಯಂತ್ರದ ಮೂಲಕ ವಾಹನ ನಿಯಂತ್ರಣ, ಚಾಲನಾ ಚಕ್ರ ನಿರ್ವಹಣೆ, ಗೇರ್ ಬದಲಾವಣೆ, ಬ್ರೇಕ್ ಬಳಕೆ, ಸಂಚಾರ ಸನ್ನಿವೇಶಗಳ ನಿರ್ವಹಣೆ, ಅಪಾಯಗಳನ್ನು ಗುರುತಿಸುವುದು ಹಾಗೂ ಸುರಕ್ಷಿತ ಚಾಲನೆಯ ಕುರಿತು ಅಭ್ಯರ್ಥಿಗಳಿಗೆ ಪ್ರಾಥಮಿಕ ತರಬೇತಿ ನೀಡಲಾಗುತ್ತದೆ. ಇದಾದ ಬಳಿಕ ಮುಂದಿನ ಹಂತದ ತರಬೇತಿ ನೀಡಲಾಗುತ್ತದೆ.
ಈ ಕುರಿತು ಮಾಹಿತಿ ನೀಡಿರುವ ಜೆಎಸ್ಡಬ್ಲ್ಯೂ ಸ್ಟೀಲ್‌ನ ಮಾನವ ಸಂಪನ್ಮೂಲ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮಯೂರೇಶ್ ಬಾಪಟ್, ಎಲ್ಲ ಸಮುದಾಯಗಳ ಜನರ ಜೀವನಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಜೆಎಸ್ಡಬ್ಲ್ಯೂ ವತಿಯಿಂದ ಉಚಿತ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಜೆಎಸ್ಡಬ್ಲ್ಯೂ ಫೌಂಡೇಶನ್ ಮುಖ್ಯಸ್ಥ ಪೆದ್ದಣ್ಣ ಬೀದಲ ಮಾತನಾಡಿ, ಸಮುದಾಯದ ಸಮಗ್ರ ಬೆಳವಣಿಗೆಯೊಂದಿಗೆ ಉದ್ಯಮದ ಅಭಿವೃದ್ಧಿಯನ್ನೂ ಸಾಧಿಸುವ ನಿಟ್ಟಿನಲ್ಲಿ ಜೆಎಸ್ಡಬ್ಲ್ಯೂ ಬದ್ಧವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಎಸ್ಡಬ್ಲ್ಯೂ ಫೌಂಡೇಶನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿತೇಶ್ ಸಿನ್ಹಾ, ಹಿರಿಯ ಉಪಾಧ್ಯಕ್ಷ ಸುನಿಲ್ ರಾಲ್ಫ್, ಕೌಶಲ್ಯ ವಲಯದ ಮುಖ್ಯಸ್ಥ ಮಹೇಶ್ ಶೆಟ್ಟಿ, ಭಾರತಿ ಪಳನಿಸ್ವಾಮಿ, ಶ್ರೇಷ್ಠಾ ಭಟ್ಟಾಚಾರ್ಜಿ ಹಾಗೂ ಗೋಪಾಲ್ ಮಣಿ ಡಿಬಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್