
ಬೆಂಗಳೂರು, 29 ಅಕ್ಟೋಬರ್ (ಹಿ.ಸ.);
ರಾಜ್ಯದ ಬರಪೀಡಿತ ಪ್ರದೇಶಗಳ ರೈತರಿಗೆ ಮೊದಲ ಕಂತಿನಲ್ಲಿ ತಲಾ ₹2,500 ಬರ ಪರಿಹಾರ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಸಂಪುಟ ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (ಎನ್ಡಿಆರ್ಎಫ್) ಅನುದಾನ ಬಿಡುಗಡೆಯಾಗುವವರೆಗೆ ಕಾಯದೆ, ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದಲೇ ಪರಿಹಾರ ವಿತರಿಸಲು ನಿರ್ಧರಿಸಲಾಗಿದೆ.
ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಬರ ಪರಿಹಾರ ನೀಡುವ ಭರವಸೆ ನೀಡಿದ್ದ ಸರ್ಕಾರ, ಇದೀಗ ಹಣ ಬಿಡುಗಡೆಗೆ ಕ್ರಮ ಕೈಗೊಂಡಿದೆ. ರಾಜ್ಯದ 240 ತಾಲ್ಲೂಕುಗಳ ಪೈಕಿ 226 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಮಳೆ ಕೊರತೆಯಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಈ ನೆರವು ಒದಗಿಸಲಾಗುತ್ತದೆ.
ಅರ್ಜಿ ಸಲ್ಲಿಸುವ ಅಗತ್ಯವಿಲ್ಲ
ಬರ ಪರಿಹಾರ ಪಡೆಯಲು ರೈತರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಇ-ಆಡಳಿತ ಇಲಾಖೆಯ ಫ್ರೂಟ್ಸ್ ತಂತ್ರಾಂಶದಲ್ಲಿರುವ ರೈತರ ನೋಂದಣಿ ಮಾಹಿತಿ ಹಾಗೂ ಮುಂಗಾರು ಬೆಳೆ ಸಮೀಕ್ಷೆಯ ದತ್ತಾಂಶದ ಆಧಾರದ ಮೇಲೆ ಅರ್ಹ ಫಲಾನುಭವಿಗಳನ್ನು ಗುರುತಿಸಲಾಗುತ್ತದೆ. ಅರ್ಹ ರೈತರ ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮೂಲಕ ಹಣ ಜಮೆ ಮಾಡಲಾಗುತ್ತದೆ.
ಪರಿಹಾರ ವಿತರಣೆಯಲ್ಲಿ ಮಳೆಯಾಶ್ರಿತ ಬೆಳೆಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ನಂತರ ನೀರಾವರಿ ಬೆಳೆಗಳು ಹಾಗೂ ಬಹುವಾರ್ಷಿಕ ಬೆಳೆಗಳಿಗೆ ಪರಿಹಾರ ವಿತರಿಸುವ ಕ್ರಮ ಅನುಸರಿಸಲಾಗುತ್ತದೆ. ಒಬ್ಬ ರೈತನಿಗೆ ಗರಿಷ್ಠ ಎರಡು ಹೆಕ್ಟೇರ್ ಪ್ರದೇಶದವರೆಗೆ ಮಾತ್ರ ಪರಿಹಾರ ಸೀಮಿತವಾಗಿರುತ್ತದೆ.
ಕೆಲವು ಜಮೀನುಗಳಿಗೆ ಪರಿಹಾರ ಅನ್ವಯಿಸುವುದಿಲ್ಲ
ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತನೆಗೊಂಡಿರುವ ಜಮೀನುಗಳು, ನೀರಾವರಿ ಯೋಜನೆಗಳಿಗಾಗಿ ಭೂಸ್ವಾಧೀನವಾಗಿರುವ ಪ್ರದೇಶಗಳು ಹಾಗೂ ಸರ್ಕಾರಿ ಜಮೀನುಗಳಿಗೆ ಈ ಪರಿಹಾರ ನೀಡಲಾಗುವುದಿಲ್ಲ. ಪರಿಹಾರ ಪಾವತಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಡಿಜಿಟಲ್ ಸಹಿಯ ಮೂಲಕ ಅನುಮೋದನೆ ನೀಡಬೇಕಾಗುತ್ತದೆ.
ಪರಿಹಾರ ವಿತರಣೆಯ ವಿವರಗಳನ್ನು ಸಾರ್ವಜನಿಕರ ಮಾಹಿತಿಗಾಗಿ ‘ಪರಿಹಾರ’ ತಂತ್ರಾಂಶದ ಜಾಲತಾಣದಲ್ಲಿ ಪ್ರಕಟಿಸಲಾಗುತ್ತದೆ. ಮುಂದಿನ ಹಂತದಲ್ಲಿ ಎನ್ಡಿಆರ್ಎಫ್ ಅನುದಾನ ಬಿಡುಗಡೆಯಾದ ಬಳಿಕ, ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (ಎಸ್ಡಿಆರ್ಎಫ್) ಮಾರ್ಗಸೂಚಿಗಳ ಅನ್ವಯ ಅರ್ಹ ರೈತರಿಗೆ ಬಾಕಿ ಇರುವ ಹೆಚ್ಚುವರಿ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ.
ರೈತರು ಗಮನಿಸಬೇಕಾದ ಅಂಶಗಳು
ರೈತರು ತಮ್ಮ ಫ್ರೂಟ್ಸ್ ನೋಂದಣಿ ವಿವರಗಳು, ಭೂ ದಾಖಲೆಗಳು ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗಿರುವುದನ್ನು ಪರಿಶೀಲಿಸಿಕೊಳ್ಳುವುದು ಸೂಕ್ತ.
ಅರ್ಹತೆ ಇದ್ದರೂ ಹಣ ಜಮೆಯಾಗದಿದ್ದಲ್ಲಿ ಸಂಬಂಧಪಟ್ಟ ಕೃಷಿ ಇಲಾಖೆ ಅಥವಾ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R