
ಗದಗ, 29 ಅಕ್ಟೋಬರ್ (ಹಿ.ಸ.)
ವಿದ್ಯಾರ್ಥಿಗಳಲ್ಲಿ ಎಚ್ಐವಿ-ಏಡ್ಸ್ ಕುರಿತು ಅರಿವು ಮೂಡಿಸುವುದು ಹಾಗೂ ರಕ್ತದಾನದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಗದಗ ನಗರದ ಬಸವೇಶ್ವರ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿತ್ತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಬಸವೇಶ್ವರ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಅರುಂಧತಿ ಕುಲಕರ್ಣಿ, ಎಚ್ಐವಿ ಸೋಂಕಿತರು ಸೂಕ್ತ ಔಷಧೋಪಚಾರ ಪಡೆಯುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಹಾಗೂ ಜೀವನಾವಧಿಯನ್ನು ಹೆಚ್ಚಿಸಿಕೊಳ್ಳಬಹುದು ಎಂದು ತಿಳಿಸಿದರು. ರಕ್ತದಾನದ ಮಹತ್ವವನ್ನು ವಿವರಿಸಿದ ಅವರು, ಅರ್ಹರು ರಕ್ತದಾನ ಮಾಡಲು ಮುಂದೆ ಬರಬೇಕು. ರಕ್ತದಾನದಿಂದ ಅಗತ್ಯವಿರುವವರಿಗೆ ನೆರವಾಗುವುದರ ಜೊತೆಗೆ ಅಮೂಲ್ಯ ಜೀವಗಳನ್ನು ಉಳಿಸಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಕರ ಸಂಘದ ಕಾರ್ಯದರ್ಶಿ ಎಂ.ಎಸ್. ಧಾರವಾಡ ಮಾತನಾಡಿ, ವಿದ್ಯಾರ್ಥಿಗಳು ಇಂತಹ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ತಮ್ಮ ಶಾಲೆಗೆ ಕೀರ್ತಿ ತರಬೇಕು. ವಿದ್ಯಾರ್ಥಿ ಜೀವನದಲ್ಲಿ ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ನಿಗದಿತ ಗುರಿ ಸಾಧಿಸಬೇಕು ಎಂದು ಸಲಹೆ ನೀಡಿದರು.
ಡಿಡಿಪಿಐ ಕಚೇರಿಯ ವಿಷಯ ನಿರೀಕ್ಷಣಾಧಿಕಾರಿ ಯರಗುಡಿ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಬಂದು ಸಂಸ್ಕಾರಯುತ ಶಿಕ್ಷಣ ಪಡೆದು, ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಮುನ್ನಡೆಯಬೇಕು ಎಂದು ಹೇಳಿದರು.
ಬಸವರಾಜ ಲಾಲಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಯುವಜನರಲ್ಲಿ ರಕ್ತದಾನ ಹಾಗೂ ಎಚ್ಐವಿ-ಏಡ್ಸ್ ಕುರಿತು ಜಾಗೃತಿ ಮೂಡಿಸುವುದು ಸ್ಪರ್ಧೆಯ ಮುಖ್ಯ ಉದ್ದೇಶವಾಗಿದೆ. ಎಚ್ಐವಿ-ಏಡ್ಸ್ ನಿಯಂತ್ರಣ ಸೇವೆಗಳು, ಸೌಲಭ್ಯಗಳು, ಕಳಂಕ ಮತ್ತು ತಾರತಮ್ಯ ನಿವಾರಣೆ, ರಾಷ್ಟ್ರೀಯ ಸಹಾಯವಾಣಿ, ಎಚ್ಐವಿ-ಏಡ್ಸ್ ಕಾಯ್ದೆ-2017 ಹಾಗೂ ರಕ್ತದಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಆಧರಿಸಿ ಸ್ಪರ್ಧೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ 39 ಪ್ರೌಢಶಾಲೆಗಳ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ವಿಜೇತರು: ಸರ್ಕಾರಿ ಪ್ರೌಢಶಾಲೆ, ಹೊಳೆಮಣ್ಣೂರು ತಂಡದ ಸೋನಿಯಾ ನದಾಫ್ ಹಾಗೂ ಹೇಮಾವತಿ ಪ್ರಥಮ ಸ್ಥಾನ ಪಡೆದು ₹6,000 ಬಹುಮಾನಕ್ಕೆ ಭಾಜನರಾದರು. ಸರ್ಕಾರಿ ಪ್ರೌಢಶಾಲೆ, ಶಿರುಂಜ ತಂಡದ ಸಮರ್ಥ ಶಿಂಧೆ ಹಾಗೂ ಮಲ್ಲಣ್ಣ ಮಲ್ಲಣ್ಣವರ ದ್ವಿತೀಯ ಸ್ಥಾನ ಪಡೆದು ₹5,000 ಬಹುಮಾನ ಗಳಿಸಿದರು. ಸರ್ಕಾರಿ ಪ್ರೌಢಶಾಲೆ, ಇಟಗಿ ತಂಡದ ಸುನೀತಾ ಚನ್ನಪ್ಪಗೌಡರ ಹಾಗೂ ಕಾವ್ಯಾ ಮಾಸಗಿ ತೃತೀಯ ಸ್ಥಾನ ಪಡೆದು ₹4,000 ಬಹುಮಾನಕ್ಕೆ ಆಯ್ಕೆಯಾದರು. ವಿಜೇತರಿಗೆ ಪ್ರಶಸ್ತಿ ಪತ್ರದೊಂದಿಗೆ ಬಹುಮಾನವನ್ನು ಪಿಎಫ್ಎಂಎಸ್ ಮೂಲಕ ವಿತರಿಸಲಾಗುವುದು ಎಂದು ತಿಳಿಸಲಾಯಿತು.
ಕಾರ್ಯಕ್ರಮವನ್ನು ಬಸವರಾಜ ಲಾಲಗಟ್ಟಿ ನಿರ್ವಹಿಸಿದರು. ತನುಶ್ರೀ ಬದಿ ಪ್ರಾರ್ಥಿಸಿದರು. ಎನ್.ಬಿ. ಸೂರಪ್ಪಗೌಡರ ವಂದಿಸಿದರು. ಶಾಲೆಯ ಶಿಕ್ಷಕರು, ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP