ಚಂಡಮಾರುತ ಎದುರಿಸಲು ಸರ್ಕಾರ ಸನ್ನದ್ಧ: ಚಂದ್ರಬಾಬು ನಾಯ್ಡು
ಅರ್ನಬ್ ಚಂಡಮಾರುತದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದಲ್ಲಿ ಪರಿಹಾರ ಮತ್ತು ಪುನಃಸ್ಥಾಪನಾ ಕಾರ್ಯಗಳು ಚುರುಕುಗೊಂಡಿವೆ. ಸದ್ಯದವರೆಗೆ ಯಾವುದೇ ಜೀವಹಾನಿ ವರದಿಯಾಗಿಲ್ಲ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ. ಜನರು ಎಚ್ಚರಿಕೆಯಿಂದಿದ್ದು, ಅಧಿಕೃತ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಿದ್ದಾ
chandrababu-naidu-cyclone-arnab-andhra-pradesh-relief-operations


ಅಮರಾವತಿ, 28 ಅಕ್ಟೋಬರ್ (ಹಿ.ಸ.):

ಆಂಧ್ರಪ್ರದೇಶದಲ್ಲಿ ‘ಅರ್ನಬ್’ ಚಂಡಮಾರುತದ ಪರಿಣಾಮ ಎದುರಿಸಲು ರಾಜ್ಯ ಸರ್ಕಾರ ಸನ್ನದ್ಧವಾಗಿದ್ದು, ಜನರ ಸುರಕ್ಷತೆ ಮತ್ತು ಪರಿಹಾರ ಕಾರ್ಯಗಳಿಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಚಂಡಮಾರುತದ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದು, ರಾತ್ರಿಯಿಡೀ ಬೆಳವಣಿಗೆಗಳ ಪರಿಶೀಲನೆ ನಡೆಸಿದ್ದೇನೆ.

ಜಿಲ್ಲಾಧಿಕಾರಿಗಳು, ಹಿರಿಯ ಅಧಿಕಾರಿಗಳು ಹಾಗೂ ಸ್ಥಳಮಟ್ಟದ ಸಿಬ್ಬಂದಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಸಚಿವರು ಕೂಡ ಸ್ಥಳದಲ್ಲಿದ್ದು, ಪರಿಹಾರ ಮತ್ತು ಪುನಃಸ್ಥಾಪನಾ ಕಾರ್ಯಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಭಾರಿ ಮಳೆಯ ನಡುವೆಯೂ ಸಾವಿರಾರು ಸರ್ಕಾರಿ ಅಧಿಕಾರಿಗಳು, ತುರ್ತು ಕಾರ್ಯಪಡೆಗಳು ಮತ್ತು ಮುಂಚೂಣಿ ಸಿಬ್ಬಂದಿ ರಾತ್ರಿ-ಹಗಲೆನ್ನದೆ ಕಾರ್ಯನಿರ್ವಹಿಸುತ್ತಿದ್ದಾರೆ. ರಸ್ತೆಗಳಲ್ಲಿ ಬಿದ್ದಿರುವ ಅಡೆತಡೆಗಳನ್ನು ತೆರವುಗೊಳಿಸುವುದು, ವಿದ್ಯುತ್ ಸಂಪರ್ಕ ಪುನಃಸ್ಥಾಪಿಸುವುದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದು ಹಾಗೂ ಅಗತ್ಯ ಸೇವೆಗಳನ್ನು ನಿರಂತರವಾಗಿ ಒದಗಿಸುವ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.

ಸರ್ಕಾರದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ವಿವಿಧ ಇಲಾಖೆಗಳ ಸಂಘಟಿತ ಕಾರ್ಯಾಚರಣೆ ಉತ್ತಮ ಫಲಿತಾಂಶ ನೀಡುತ್ತಿವೆ. ಸದ್ಯದವರೆಗೆ ಯಾವುದೇ ಜೀವಹಾನಿ ವರದಿಯಾಗಿಲ್ಲ ಎಂಬುದು ಸಮಾಧಾನಕರ ಸಂಗತಿ.

ಚಂಡಮಾರುತದಿಂದ ಬಾಧಿತವಾಗಿರುವ ಜನರಿಗೆ ತಕ್ಷಣದ ನೆರವು ಒದಗಿಸುವುದು ಮತ್ತು ಪ್ರತಿಯೊಬ್ಬ ನಾಗರಿಕನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.

ಸಾಮಾನ್ಯ ಸ್ಥಿತಿ ಮರಳುವವರೆಗೆ ಸರ್ಕಾರದ ಸಂಪೂರ್ಣ ಆಡಳಿತ ಯಂತ್ರ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಚಂಡಮಾರುತ ಪೀಡಿತ ಪ್ರದೇಶಗಳ ಜನರು ಎಚ್ಚರಿಕೆಯಿಂದ ಇರಬೇಕು, ಅಧಿಕೃತ ಸೂಚನೆಗಳನ್ನು ಪಾಲಿಸಬೇಕು ಹಾಗೂ ಚಂಡಮಾರುತದ ಪ್ರಭಾವ ಕಡಿಮೆಯಾಗುವವರೆಗೆ ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

“ಜನರು ಆತಂಕಪಡದೆ ಧೈರ್ಯದಿಂದ ಇರಬೇಕು. ಪ್ರತಿಯೊಂದು ಹಂತದಲ್ಲೂ ಸರ್ಕಾರ ನಿಮ್ಮೊಂದಿಗಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ಈ ಸವಾಲನ್ನು ಎದುರಿಸೋಣ” ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande