
ನವದೆಹಲಿ, 28 ಅಕ್ಟೋಬರ್ (ಹಿ.ಸ.):
ಮಧ್ಯಪ್ರದೇಶದ ಕೂನೋ ರಾಷ್ಟ್ರೀಯ ಉದ್ಯಾನದಲ್ಲಿ ಗುಂಡೇಟಿನಿಂದ ಗಾಯಗೊಂಡು 19 ತಿಂಗಳ ಗಂಡು ಚಿರತೆ ಮೃತಪಟ್ಟ ಪ್ರಕರಣದ ತನಿಖೆಗಾಗಿ ಕೇಂದ್ರ ಸರ್ಕಾರ ಉನ್ನತ ಮಟ್ಟದ ತಂಡವನ್ನು ಕಳುಹಿಸಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಚಿರತೆ ಸಾವಿನ ಸನ್ನಿವೇಶಗಳು ಹಾಗೂ ಲಭ್ಯವಿರುವ ಸಾಕ್ಷ್ಯಗಳನ್ನು ಪರಿಶೀಲಿಸುವುದು ತಂಡದ ಉದ್ದೇಶವಾಗಿದೆ. ಮಧ್ಯಪ್ರದೇಶ ಅರಣ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ, ಪ್ರಕರಣದಲ್ಲಿ ತ್ವರಿತ ಹಾಗೂ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಪ್ರಕಾರ, ಕೇಂದ್ರ ತಂಡದಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅರಣ್ಯ ಮಹಾನಿರೀಕ್ಷಕರು, ವನ್ಯಜೀವಿ ಅಪರಾಧ ನಿಯಂತ್ರಣ ದಳದ ಹೆಚ್ಚುವರಿ ನಿರ್ದೇಶಕರು ಹಾಗೂ ಪ್ರಾದೇಶಿಕ ಉಪನಿರ್ದೇಶಕರು ಸೇರಿದ್ದಾರೆ. ಈ ತಂಡವು ರಾಜ್ಯ ಸರ್ಕಾರದ ತನಿಖೆಗೆ ಸಹಕರಿಸುವುದರ ಜತೆಗೆ ಚೀತಾಗಳ ರಕ್ಷಣೆಗಾಗಿ ಜಾರಿಯಲ್ಲಿರುವ ನಿಯಮಗಳು, ನಿಗಾ ವ್ಯವಸ್ಥೆ ಮತ್ತು ಸಂರಕ್ಷಣಾ ಕ್ರಮಗಳನ್ನು ಪರಿಶೀಲಿಸಲಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮಗಳನ್ನು ಶಿಫಾರಸು ಮಾಡಲಿದೆ.
ಚಿರತೆ ನಿರ್ವಾ ಸಂತಾನಕ್ಕೆ ಸೇರಿದ 19 ತಿಂಗಳ ಗಂಡು ಚಿರತೆ ಅಕ್ಟೋಬರ್ 25ರಂದು ಕೂನೋ ರಾಷ್ಟ್ರೀಯ ಉದ್ಯಾನದ ಸಂರಕ್ಷಿತ ಪ್ರದೇಶದಿಂದ ಹೊರಗೆ ಮೊರೆನಾ ಪ್ರಾದೇಶಿಕ ಅರಣ್ಯ ಪ್ರದೇಶದಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅದೇ ದಿನ ಅದನ್ನು ಶಿಯೋಪುರ ಪ್ರಾದೇಶಿಕ ಅರಣ್ಯ ವಿಭಾಗದಿಂದ ಜಬಲ್ಪುರದ ಪಶುವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು.
ಅಲ್ಲಿ ಚಿರತೆಗೆ ತೀವ್ರ ನಿಗಾ ಚಿಕಿತ್ಸೆ ನೀಡುವುದರ ಜತೆಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಈ ವೇಳೆ ಅದರ ದೇಹದಿಂದ ಗುಂಡಿನ ಐದು ಚೂರುಗಳನ್ನು ಹೊರತೆಗೆಯಲಾಗಿತ್ತು. ಆದಾಗ್ಯೂ, ಅಕ್ಟೋಬರ್ 27ರಂದು ಚಿರತೆ ಮೃತಪಟ್ಟಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಗುಂಡಿನ ಚೂರುಗಳಿಂದ ದೇಹದ ಒಳಭಾಗದಲ್ಲಿ ಹಲವು ಗಾಯಗಳಾಗಿರುವುದು ದೃಢಪಟ್ಟಿದೆ.
ಈ ಪ್ರಕರಣದ ತನಿಖೆಗಾಗಿ ಮಧ್ಯಪ್ರದೇಶ ಸರ್ಕಾರ ಈಗಾಗಲೇ ಅರಣ್ಯ ಮತ್ತು ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ಕಾರ್ಯಪಡೆಯನ್ನು ರಚಿಸಿದೆ. ಕೇಂದ್ರದ ತಂಡವು ರಾಜ್ಯದ ತನಿಖಾ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಲಿದೆ. ತನಿಖೆಯ ಬಳಿಕ ತನ್ನ ವರದಿ ಹಾಗೂ ಶಿಫಾರಸುಗಳನ್ನು ಸಚಿವಾಲಯಕ್ಕೆ ಸಲ್ಲಿಸಲಿದ್ದು, ಅದರ ಆಧಾರದ ಮೇಲೆ ಮುಂದಿನ ಕ್ರಮಗಳ ಕುರಿತು ಸೂಚನೆ ನೀಡಲಾಗುತ್ತದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.