(ಸಂದರ್ಶನ) ಕೃಷಿ ತಾಜ್ಯ ಮತ್ತು ಹಸುವಿನ ಸಗಣಿಯಿಂದ ಅನಿಲ ಉತ್ಪಾದಿಸುವ ಮೂಲಕ ದೇಶವನ್ನು ಸ್ವಾವಲಂಬಿಯಾಗಿಸುತ್ತಿರುವ ಯುವ ಉದ್ಯಮಿ ಆದಿ ತಿವಾರಿ
ಪ್ರಶಾಂತ್ ಶೇಖರ್ ಮಿಶ್ರಾ ನವದೆಹಲಿ, 28 ಅಕ್ಟೋಬರ್ (ಹಿ.ಸ.): ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಆತಂಕದ ನಡುವೆ, ಉತ್ತರ ಪ್ರದೇಶದ ಹರದೋಯಿ ಜಿಲ್ಲೆಯ ಭೈಲಾಮೌ ಗ್ರಾಮದ ಯುವ ಉದ್ಯಮಿ ಆದಿ ಉಪೇಂದ್ರ ತಿವಾರಿ ಅವರು ಕೃಷಿ
हरदोई के भैलामऊ स्थित यूटीएम एनर्जी के सीबीजी संयंत्र में पराली, गोबर और कृषि अपशिष्ट से संपीड़ित जैव गैस के मालिक युवा उद्यमी आदि उपेंद्र तिवारी साथ में कारखाना।


हरदोई के भैलामऊ स्थित यूटीएम एनर्जी के सीबीजी संयंत्र में पराली, गोबर और कृषि अपशिष्ट से संपीड़ित जैव गैस के मालिक युवा उद्यमी आदि उपेंद्र तिवारी ।


हरदोई के भैलामऊ स्थित यूटीएम एनर्जी के सीबीजी संयंत्र में पराली, गोबर और कृषि अपशिष्ट से संपीड़ित जैव गैस का कारखाना ।


हरदोई के भैलामऊ स्थित यूटीएम एनर्जी के सीबीजी संयंत्र में पराली, गोबर और कृषि अपशिष्ट से संपीड़ित जैव गैस का कारखाना ।


ಪ್ರಶಾಂತ್ ಶೇಖರ್ ಮಿಶ್ರಾ

ನವದೆಹಲಿ, 28 ಅಕ್ಟೋಬರ್ (ಹಿ.ಸ.):

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಆತಂಕದ ನಡುವೆ, ಉತ್ತರ ಪ್ರದೇಶದ ಹರದೋಯಿ ಜಿಲ್ಲೆಯ ಭೈಲಾಮೌ ಗ್ರಾಮದ ಯುವ ಉದ್ಯಮಿ ಆದಿ ಉಪೇಂದ್ರ ತಿವಾರಿ ಅವರು ಕೃಷಿ ತ್ಯಾಜ್ಯ ಮತ್ತು ಗೋಬರದಿಂದ ಅನಿಲ ಉತ್ಪಾದಿಸುವ ಮೂಲಕ ದೇಶದ ಇಂಧನ ಸ್ವಾವಲಂಬನೆಗೆ ಕೊಡುಗೆ ನೀಡುತ್ತಿದ್ದಾರೆ.

ಬ್ರಿಟನ್‌ನ ಲಿವರ್‌ಪೂಲ್ ವಿಶ್ವವಿದ್ಯಾಲಯದಲ್ಲಿ ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಆದಿ ತಿವಾರಿ, ಹರದೋಯಿಯಲ್ಲಿ ‘ಯುಟಿಎಂ ಎನರ್ಜಿ’ ಸಂಸ್ಥೆಯಡಿ ಸಂಕುಚಿತ ಜೈವಿಕ ಅನಿಲ ಉತ್ಪಾದನಾ ಘಟಕ ಸ್ಥಾಪಿಸಿದ್ದಾರೆ. ಈ ಘಟಕದಲ್ಲಿ ಭತ್ತದ ಹುಲ್ಲು ಸೇರಿದಂತೆ ಬೆಳೆಗಳ ಉಳಿಕೆ, ಕಬ್ಬಿನ ಸಿಪ್ಪೆ, ಸಕ್ಕರೆ ಕಾರ್ಖಾನೆಗಳ ತ್ಯಾಜ್ಯ ಮತ್ತು ಗೋಬರವನ್ನು ಬಳಸಿ ಅನಿಲ ಉತ್ಪಾದಿಸಲಾಗುತ್ತಿದೆ. ಪ್ರಸ್ತುತ ದಿನಕ್ಕೆ 3ರಿಂದ 3.5 ಟನ್ ಅನಿಲ ಉತ್ಪಾದನೆಯಾಗುತ್ತಿದ್ದು, ಈ ಪ್ರಮಾಣವನ್ನು ದಿನಕ್ಕೆ 12 ಟನ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ.

ಈ ಘಟಕದಿಂದ 62 ಮಂದಿಗೆ ನೇರವಾಗಿ ಹಾಗೂ 1,230ಕ್ಕೂ ಹೆಚ್ಚು ಜನರಿಗೆ ಪರೋಕ್ಷವಾಗಿ ಉದ್ಯೋಗ ದೊರೆತಿದೆ. ಜಾಗತಿಕ ಇಂಧನ ಬಿಕ್ಕಟ್ಟು, ಗ್ರಾಮೀಣ ಆರ್ಥಿಕತೆ, ಕೃಷಿ ತ್ಯಾಜ್ಯದ ಸದ್ಬಳಕೆ ಮತ್ತು ಉದ್ಯಮದ ಸವಾಲುಗಳ ಕುರಿತು ಆದಿ ತಿವಾರಿ ಅವರು ‘ಹಿಂದುಸ್ಥಾನ್ ಸಮಾಚಾರ್‌’ ಸುದ್ದಿಸಂಸ್ಥೆಯೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ.

ಪ್ರಶ್ನೆ: ಹಾರ್ಮುಜ್ ಜಲಸಂಧಿಯಲ್ಲಿನ ಬಿಕ್ಕಟ್ಟಿನಿಂದ ಜಾಗತಿಕ ಇಂಧನ ಪೂರೈಕೆಗೆ ಅಡ್ಡಿಯಾಗುತ್ತಿರುವ ಸಂದರ್ಭದಲ್ಲಿ ಹರದೋಯಿಯಲ್ಲಿರುವ ನಿಮ್ಮ ಘಟಕ ದೇಶದ ಆರ್ಥಿಕ ಭದ್ರತೆಗೆ ಹೇಗೆ ಕೊಡುಗೆ ನೀಡುತ್ತಿದೆ?

ಆದಿ ತಿವಾರಿ: ಇದು ದೇಶದ ಸಾರ್ವಭೌಮತ್ವ ಮತ್ತು ಆರ್ಥಿಕ ಭದ್ರತೆಗೆ ಸಂಬಂಧಿಸಿದ ವಿಷಯವಾಗಿದೆ. ಭಾರತ ತನ್ನ ಅಗತ್ಯದ ಬಹುಪಾಲು ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ನಮ್ಮ ಆಮದಿನ ದೊಡ್ಡ ಪಾಲು ಹಾರ್ಮುಜ್ ಜಲಸಂಧಿಯ ಕಿರಿದಾದ ಸಮುದ್ರ ಮಾರ್ಗದ ಮೂಲಕ ಬರುತ್ತದೆ. ಕೊಲ್ಲಿ ರಾಷ್ಟ್ರಗಳಲ್ಲಿ ಉದ್ವಿಗ್ನತೆ ಹೆಚ್ಚಾದಾಗ ಅಥವಾ ಹಡಗುಗಳ ಸಂಚಾರಕ್ಕೆ ಅಡ್ಡಿಯಾದಾಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಲದ ಬೆಲೆ ಅನಿರೀಕ್ಷಿತವಾಗಿ ಏರಿಕೆಯಾಗುತ್ತದೆ. ಇದರಿಂದ ದೇಶದ ವಿದೇಶಿ ವಿನಿಮಯದ ಮೇಲೆ ಒತ್ತಡ ಉಂಟಾಗುತ್ತದೆ.

ನಮ್ಮ ಘಟಕವು ವಿದೇಶಿ ಇಂಧನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ. ಆಮದು ಮಾಡಿಕೊಳ್ಳುವ ಅನಿಲಕ್ಕೆ ಸ್ವದೇಶಿ ಪರ್ಯಾಯವನ್ನು ಒದಗಿಸುತ್ತಿದ್ದೇವೆ. ಇಲ್ಲಿ ಉತ್ಪಾದಿಸುವ ಸಂಕುಚಿತ ಜೈವಿಕ ಅನಿಲವನ್ನು ವಾಹನಗಳ ಇಂಧನವಾಗಿ ಹಾಗೂ ಅನಿಲ ವಿತರಣಾ ವ್ಯವಸ್ಥೆಯ ಮೂಲಕ ಇತರ ಬಳಕೆಗಳಿಗೆ ಬಳಸಬಹುದು. ನಮ್ಮ ಮಣ್ಣು, ಕೃಷಿ ತ್ಯಾಜ್ಯ ಮತ್ತು ಗೋಬರದಿಂದಲೇ ಇಂಧನ ಉತ್ಪಾದಿಸಿದಾಗ ದೇಶದ ಹಣ ದೇಶದಲ್ಲೇ ಉಳಿಯುತ್ತದೆ. ರೈತರಿಗೂ ಆದಾಯ ದೊರೆಯುತ್ತದೆ. ವಿದೇಶಿ ಪೂರೈಕೆ ಮಾರ್ಗಗಳಲ್ಲಿನ ಅಡಚಣೆಗಳಿಂದ ದೇಶದ ಇಂಧನ ವ್ಯವಸ್ಥೆಗೆ ಉಂಟಾಗುವ ಅಪಾಯವನ್ನು ಕಡಿಮೆ ಮಾಡಲು ಇಂತಹ ಘಟಕಗಳು ನೆರವಾಗುತ್ತವೆ.

ಪ್ರಶ್ನೆ: ಪ್ರಸ್ತುತ ದಿನಕ್ಕೆ ಮೂರು ಟನ್‌ಗೂ ಅಧಿಕ ಅನಿಲ ಉತ್ಪಾದನೆಯಾಗುತ್ತಿದೆ. ಇದನ್ನು 12 ಟನ್‌ಗೆ ಹೆಚ್ಚಿಸಿದರೆ ಆಮದು ವೆಚ್ಚ ಮತ್ತು ವಿದೇಶಿ ವಿನಿಮಯದ ಉಳಿತಾಯ ಎಷ್ಟಾಗಬಹುದು?

ಆದಿ ತಿವಾರಿ: ನಮ್ಮ ಘಟಕದ ಮೂಲ ಉತ್ಪಾದನಾ ಸಾಮರ್ಥ್ಯ ದಿನಕ್ಕೆ 2.4 ಟನ್ ಆಗಿದ್ದರೂ, ಪ್ರಸ್ತುತ ದಿನಕ್ಕೆ 3ರಿಂದ 3.5 ಟನ್ ಅನಿಲ ಉತ್ಪಾದಿಸುತ್ತಿದ್ದೇವೆ. ನಮ್ಮ ಲೆಕ್ಕಾಚಾರದ ಪ್ರಕಾರ, ಈ ಉತ್ಪಾದನೆಯಿಂದ ವರ್ಷಕ್ಕೆ 1,200 ಟನ್‌ಗೂ ಅಧಿಕ ಆಮದು ಇಂಧನಕ್ಕೆ ಪರ್ಯಾಯ ಒದಗಿಸಬಹುದು. ಇದರಿಂದ ದೇಶಕ್ಕೆ ಕೋಟ್ಯಂತರ ರೂಪಾಯಿ ಮೌಲ್ಯದ ವಿದೇಶಿ ವಿನಿಮಯ ಉಳಿತಾಯವಾಗುತ್ತದೆ.

ಘಟಕದ ಸಾಮರ್ಥ್ಯವನ್ನು ದಿನಕ್ಕೆ 12 ಟನ್‌ಗೆ ಹೆಚ್ಚಿಸಿದರೆ ವರ್ಷಕ್ಕೆ 4,300 ಟನ್‌ಗೂ ಅಧಿಕ ಅನಿಲ ಉತ್ಪಾದಿಸಬಹುದು. ಇದರಿಂದ ಪ್ರತಿ ವರ್ಷ 50ರಿಂದ 60 ಕೋಟಿ ರೂಪಾಯಿ ಮೌಲ್ಯದ ವಿದೇಶಿ ವಿನಿಮಯ ಉಳಿತಾಯವಾಗುವ ಸಾಧ್ಯತೆಯಿದೆ. ಒಂದು ಸಣ್ಣ ಗ್ರಾಮದ ಘಟಕವೇ ಇಷ್ಟೊಂದು ಕೊಡುಗೆ ನೀಡಬಹುದಾದರೆ, ದೇಶಾದ್ಯಂತ ಇಂತಹ ಸಾವಿರಾರು ಘಟಕಗಳು ಕಾರ್ಯನಿರ್ವಹಿಸಿದರೆ ಆಮದು ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಇದು ದೇಶದ ಸ್ವಾವಲಂಬನೆಗೆ ನೆರವಾಗುವ ಪ್ರಯತ್ನವಾಗಿದೆ.

ಪ್ರಶ್ನೆ: ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳ ಏರಿಳಿತದ ನಡುವೆ ಗ್ರಾಮೀಣ ಜೈವಿಕ ಅನಿಲ ಘಟಕಗಳು ಬೆಲೆ ನಿಯಂತ್ರಣಕ್ಕೆ ರಕ್ಷಾಕವಚವಾಗಬಲ್ಲವೇ?

ಆದಿ ತಿವಾರಿ: ಖಂಡಿತವಾಗಿಯೂ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಲದ ಬೆಲೆ ಏರಿಕೆಯಾದಾಗ ಅದರ ಪರಿಣಾಮ ಸಾಮಾನ್ಯ ಜನರ ಮೇಲೂ ಬೀಳುತ್ತದೆ. ನಮ್ಮ ಘಟಕದಲ್ಲಿ ಕೃಷಿ ತ್ಯಾಜ್ಯ, ಗೋಬರ ಮತ್ತು ಸಕ್ಕರೆ ಕಾರ್ಖಾನೆಗಳ ತ್ಯಾಜ್ಯದಿಂದ ಅನಿಲ ಉತ್ಪಾದಿಸಲಾಗುತ್ತದೆ. ಹೀಗಾಗಿ ಇದರ ಉತ್ಪಾದನಾ ವೆಚ್ಚವು ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಲೆ ಏರಿಳಿತಗಳಿಂದ ನೇರವಾಗಿ ನಿರ್ಧಾರವಾಗುವುದಿಲ್ಲ.

ಸರ್ಕಾರಿ ತೈಲ ಕಂಪನಿಗಳಿಗೆ ನಿಗದಿತ ದರದಲ್ಲಿ ಅನಿಲ ಪೂರೈಸುತ್ತೇವೆ. ಇಂತಹ ಘಟಕಗಳ ಸಂಖ್ಯೆ ಹೆಚ್ಚಾದರೆ ದೇಶದ ಇಂಧನ ಅಗತ್ಯದ ಒಂದು ಭಾಗವನ್ನು ಸ್ಥಳೀಯವಾಗಿ ಪೂರೈಸಬಹುದು. ಇದರಿಂದ ಜಾಗತಿಕ ಮಾರುಕಟ್ಟೆಯ ಬೆಲೆ ಏರಿಕೆಯ ಪರಿಣಾಮವನ್ನು ತಗ್ಗಿಸಲು ನೆರವಾಗುತ್ತದೆ.

ಪ್ರಶ್ನೆ: ಲಿವರ್‌ಪೂಲ್‌ನಲ್ಲಿ ಉನ್ನತ ಶಿಕ್ಷಣ ಪಡೆದ ಬಳಿಕ ಹರದೋಯಿಯ ಗ್ರಾಮೀಣ ಪ್ರದೇಶಕ್ಕೆ ಮರಳಿ ಗೋಬರ ಮತ್ತು ಕೃಷಿ ತ್ಯಾಜ್ಯವನ್ನು ಉದ್ಯಮದ ಕಚ್ಚಾ ವಸ್ತುಗಳನ್ನಾಗಿ ಆಯ್ಕೆ ಮಾಡಿದ್ದು ಏಕೆ?

ಆದಿ ತಿವಾರಿ: 2022ರಲ್ಲಿ ಲಿವರ್‌ಪೂಲ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ವಿದೇಶದ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವ ಅವಕಾಶವಿತ್ತು. ಆದರೆ ದೇಶಕ್ಕೆ ಮರಳಿ ಏನಾದರೂ ಸಾಧಿಸಬೇಕು ಎಂಬ ನಿರ್ಧಾರ ಕೈಗೊಂಡೆ. ಹರದೋಯಿಯಲ್ಲಿ ಗೋಬರ, ಕೃಷಿ ತ್ಯಾಜ್ಯ ಮತ್ತು ಸಕ್ಕರೆ ಕಾರ್ಖಾನೆಗಳ ಉಳಿಕೆ ವಸ್ತುಗಳನ್ನು ಬಳಸಿ ಉದ್ಯಮ ಆರಂಭಿಸುವ ನಿರ್ಧಾರ ಹಲವರಿಗೆ ಅಚ್ಚರಿ ಮೂಡಿಸಿತ್ತು.

ನಾವು ಕಸವೆಂದು ಭಾವಿಸುವ ವಸ್ತುಗಳಲ್ಲಿಯೂ ಉಪಯುಕ್ತ ಸಂಪನ್ಮೂಲಗಳಿವೆ ಎಂಬುದು ನನ್ನ ನಂಬಿಕೆ. ಅವುಗಳನ್ನು ಬಳಸಿಕೊಂಡು ಇಂಧನ ಉತ್ಪಾದಿಸುವುದರ ಜತೆಗೆ ಗ್ರಾಮೀಣ ಪ್ರದೇಶಗಳನ್ನು ಉದ್ಯಮ ಮತ್ತು ಉದ್ಯೋಗ ಸೃಷ್ಟಿಯೊಂದಿಗೆ ಸಂಪರ್ಕಿಸಬಹುದು ಎಂಬ ಉದ್ದೇಶದಿಂದ ಈ ಪ್ರಯತ್ನ ಆರಂಭಿಸಿದೆ.

ಪ್ರಶ್ನೆ: ವಿದೇಶದಲ್ಲಿ ಪಡೆದ ಸೈದ್ಧಾಂತಿಕ ಜ್ಞಾನವನ್ನು ಗ್ರಾಮೀಣ ಪ್ರದೇಶದಲ್ಲಿ ಕಾರ್ಯರೂಪಕ್ಕೆ ತರುವಾಗ ಎದುರಾದ ಮೊದಲ ಸವಾಲು ಯಾವುದು?

ಆದಿ ತಿವಾರಿ: ತರಗತಿಗಳಲ್ಲಿ ವಿಷಯಗಳು ದಾಖಲೆಗಳು ಮತ್ತು ಅಂಕಿಅಂಶಗಳ ಆಧಾರದಲ್ಲಿ ಸುಲಭವಾಗಿ ಕಾಣಿಸುತ್ತವೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ವಾಸ್ತವ ಪರಿಸ್ಥಿತಿ ವಿಭಿನ್ನವಾಗಿರುತ್ತದೆ. 2024ರಲ್ಲಿ ಘಟಕ ಆರಂಭಿಸಿದಾಗ ರೈತರು ಮತ್ತು ಗ್ರಾಮಸ್ಥರ ವಿಶ್ವಾಸ ಗಳಿಸುವುದೇ ದೊಡ್ಡ ಸವಾಲಾಗಿತ್ತು.

ಕೃಷಿ ತ್ಯಾಜ್ಯ ಮತ್ತು ಗೋಬರದಿಂದಲೂ ಆಧುನಿಕ ಘಟಕವನ್ನು ಯಶಸ್ವಿಯಾಗಿ ನಡೆಸಬಹುದು ಎಂಬುದನ್ನು ಅವರಿಗೆ ಮನವರಿಕೆ ಮಾಡಬೇಕಾಯಿತು. ರೈತರೊಂದಿಗೆ ನೇರವಾಗಿ ಸಂವಹನ ನಡೆಸಿ, ಖರೀದಿಸಿದ ಕಚ್ಚಾ ವಸ್ತುಗಳಿಗೆ ಸಮಯಕ್ಕೆ ಸರಿಯಾಗಿ ಹಣ ಪಾವತಿಸಿದೆವು. ಇದರಿಂದ ಆರಂಭದಲ್ಲಿ ಅನುಮಾನ ವ್ಯಕ್ತಪಡಿಸಿದ್ದ ರೈತರೂ ಈಗ ನಮ್ಮೊಂದಿಗೆ ಕೈಜೋಡಿಸಿದ್ದಾರೆ.

ಪ್ರಶ್ನೆ: ಕೃಷಿ ತ್ಯಾಜ್ಯ ಸುಡುವುದರಿಂದ ದಂಡ ವಿಧಿಸುವ ಪರಿಸ್ಥಿತಿಯಲ್ಲಿದ್ದ ರೈತರಿಗೆ ಅದನ್ನೇ ಆದಾಯದ ಮೂಲವನ್ನಾಗಿ ಮಾಡಬಹುದು ಎಂದು ಹೇಗೆ ಮನವರಿಕೆ ಮಾಡಿದ್ದೀರಿ?

ಆದಿ ತಿವಾರಿ: ಮುಂದಿನ ಬೆಳೆ ಬೆಳೆಯಲು ಹೊಲವನ್ನು ಸಿದ್ಧಪಡಿಸುವ ಒತ್ತಡದಿಂದಾಗಿ ರೈತರು ಹಲವು ವರ್ಷಗಳಿಂದ ಕೃಷಿ ತ್ಯಾಜ್ಯವನ್ನು ಸುಡುತ್ತಿದ್ದರು. ಸರ್ಕಾರ ನಿಯಂತ್ರಣ ಕ್ರಮಗಳನ್ನು ಕೈಗೊಂಡು ದಂಡ ವಿಧಿಸುತ್ತಿದ್ದರೂ, ತ್ಯಾಜ್ಯ ವಿಲೇವಾರಿಗೆ ಸುಲಭವಾದ ಪರ್ಯಾಯ ಎಲ್ಲರಿಗೂ ಲಭ್ಯವಿರಲಿಲ್ಲ.

ನಾವು ರೈತರಿಂದ ಪ್ರತಿ ಕೆ.ಜಿ.ಗೆ ಎರಡು ರೂಪಾಯಿಯಂತೆ ಕೃಷಿ ತ್ಯಾಜ್ಯವನ್ನು ಮತ್ತು ಪ್ರತಿ ಕ್ವಿಂಟಾಲ್‌ಗೆ 85 ರೂಪಾಯಿಯಂತೆ ಗೋಬರವನ್ನು ಖರೀದಿಸಲು ಆರಂಭಿಸಿದೆವು. ಇದರಿಂದ ತ್ಯಾಜ್ಯವನ್ನು ಸುಡುವ ಬದಲು ಸಂಗ್ರಹಿಸಿ ಮಾರಾಟ ಮಾಡುವ ಮೂಲಕ ರೈತರಿಗೆ ಆದಾಯ ಗಳಿಸುವ ಅವಕಾಶ ದೊರೆಯಿತು. ಈಗ ಅನೇಕ ರೈತರು ಕೃಷಿ ತ್ಯಾಜ್ಯವನ್ನು ಸುಡುವ ಬದಲು ಸಂಗ್ರಹಿಸಿ ನಮಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ತ್ಯಾಜ್ಯ ಸುಡುವುದರಿಂದ ಉಂಟಾಗುವ ವಾಯುಮಾಲಿನ್ಯವನ್ನು ಕಡಿಮೆ ಮಾಡಲು ಸಹ ನೆರವಾಗುತ್ತಿದೆ.

ಪ್ರಶ್ನೆ: ಘಟಕ ನಿರಂತರವಾಗಿ ಕಾರ್ಯನಿರ್ವಹಿಸಬೇಕಾದರೆ, ಬೆಳೆ ಕಟಾವಿನ ಅವಧಿ ಸೀಮಿತವಾಗಿರುವ ಸಂದರ್ಭದಲ್ಲಿ ಉಳಿದ ತಿಂಗಳುಗಳಿಗೆ ಬೇಕಾದ ಕಚ್ಚಾ ವಸ್ತುಗಳನ್ನು ಹೇಗೆ ಸಂಗ್ರಹಿಸುತ್ತೀರಿ?

ಆದಿ ತಿವಾರಿ: ಘಟಕದ ಆವರಣದಲ್ಲಿ ಸುಮಾರು ಮೂರು ಎಕರೆ ಪ್ರದೇಶದಲ್ಲಿ ಸಂಗ್ರಹಣಾ ಕೇಂದ್ರ ನಿರ್ಮಿಸಿದ್ದೇವೆ. ಬೆಳೆ ಕಟಾವಿನ ಎರಡು-ಮೂರು ತಿಂಗಳ ಅವಧಿಯಲ್ಲಿ ಇಡೀ ವರ್ಷಕ್ಕೆ ಬೇಕಾಗುವ ಕೃಷಿ ತ್ಯಾಜ್ಯ ಮತ್ತು ಇತರ ಕಚ್ಚಾ ವಸ್ತುಗಳನ್ನು ಸಂಗ್ರಹಿಸುತ್ತೇವೆ.

ಬೆಂಕಿ ಅವಘಡಗಳನ್ನು ತಡೆಯಲು ಅಗ್ನಿಶಾಮಕ ಉಪಕರಣಗಳು, ನೀರು ಸಿಂಪಡಿಸುವ ವ್ಯವಸ್ಥೆ ಮತ್ತು ನಿರಂತರ ನಿಗಾ ವ್ಯವಸ್ಥೆಯನ್ನು ಅಳವಡಿಸಿದ್ದೇವೆ. ಹೀಗಾಗಿ ಬೆಳೆ ಕಟಾವಿನ ನಂತರದ ಎಂಟರಿಂದ ಒಂಬತ್ತು ತಿಂಗಳ ಅವಧಿಯಲ್ಲಿಯೂ ಘಟಕದ ಕಾರ್ಯಾಚರಣೆಯನ್ನು ಯಾವುದೇ ಅಡಚಣೆಯಿಲ್ಲದೆ ಮುಂದುವರಿಸಲು ಸಾಧ್ಯವಾಗುತ್ತಿದೆ.

ಪ್ರಶ್ನೆ: 62 ಮಂದಿಗೆ ನೇರವಾಗಿ ಹಾಗೂ 1,230ಕ್ಕೂ ಹೆಚ್ಚು ಜನರಿಗೆ ಪರೋಕ್ಷವಾಗಿ ಉದ್ಯೋಗ ದೊರೆತಿರುವುದರಿಂದ ಈ ಘಟಕ ಗ್ರಾಮೀಣ ಆರ್ಥಿಕತೆಯ ಪ್ರಮುಖ ಕೇಂದ್ರವಾಗಿ ಬೆಳೆದಿದೆಯೇ?

ಆದಿ ತಿವಾರಿ: ಖಂಡಿತವಾಗಿಯೂ. ಇದು ಕೇವಲ ಕೈಗಾರಿಕಾ ಘಟಕವಲ್ಲ; ಸ್ವಾವಲಂಬಿ ಗ್ರಾಮೀಣ ಆರ್ಥಿಕತೆಯ ಉದಾಹರಣೆಯಾಗಿದೆ. ನಮ್ಮ ಘಟಕದಲ್ಲಿ ಸ್ಥಳೀಯ 62 ಯುವಕರಿಗೆ ನೇರ ಉದ್ಯೋಗ ದೊರೆತಿದೆ. ಮತ್ತೊಂದೆಡೆ, 1,230ಕ್ಕೂ ಹೆಚ್ಚು ಜನರು ಪರೋಕ್ಷವಾಗಿ ಈ ಉದ್ಯಮದೊಂದಿಗೆ ಸಂಪರ್ಕ ಹೊಂದಿದ್ದಾರೆ.

ಸುತ್ತಮುತ್ತಲಿನ ಗ್ರಾಮಗಳ ಜನರು ಟ್ರ್ಯಾಕ್ಟರ್‌ಗಳು ಮತ್ತು ಟ್ರೇಲರ್‌ಗಳ ಮೂಲಕ ಕಚ್ಚಾ ವಸ್ತುಗಳನ್ನು ಸಾಗಿಸುತ್ತಾರೆ. ಸಕ್ಕರೆ ಕಾರ್ಖಾನೆಗಳಿಂದ ತ್ಯಾಜ್ಯವನ್ನು ತಂದುಕೊಡುವವರಿಗೆ ಪ್ರತಿ ಸುತ್ತಿಗೆ 3,000 ರೂಪಾಯಿ ದೊರೆಯುತ್ತದೆ. ಹಲವು ಗ್ರಾಮಸ್ಥರು ಗೋಬರ ಸಂಗ್ರಹಿಸಿ ಘಟಕಕ್ಕೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ರೈತರು, ವಾಹನ ಚಾಲಕರು ಮತ್ತು ಪಶುಪಾಲಕರಿಗೆ ಹೆಚ್ಚುವರಿ ಆದಾಯದ ಮೂಲ ಸೃಷ್ಟಿಯಾಗಿದೆ.

ಪ್ರಶ್ನೆ: ಸರ್ಕಾರಿ ತೈಲ ಕಂಪನಿಗಳಿಂದ ಅನಿಲದ ಹಣ ಪಾವತಿ ಹೇಗೆ ನಡೆಯುತ್ತದೆ? ಘಟಕವನ್ನು ನಡೆಸುವುದು ಆರ್ಥಿಕವಾಗಿ ಲಾಭದಾಯಕವಾಗಿದೆಯೇ?

ಆದಿ ತಿವಾರಿ: ಈ ವ್ಯವಸ್ಥೆಯ ಸಮನ್ವಯಕ್ಕಾಗಿ ಕೇಂದ್ರ ಸರ್ಕಾರ ಪ್ರಮುಖ ಅನಿಲ ಸಂಸ್ಥೆಯೊಂದನ್ನು ನೇಮಿಸಿದೆ. ಘಟಕದಲ್ಲಿ ಉತ್ಪಾದಿಸುವ ಅನಿಲವನ್ನು ಸುಮಾರು 250 ಪಟ್ಟು ಒತ್ತಡದಲ್ಲಿ ವಿಶೇಷ ಸಿಲಿಂಡರ್‌ಗಳಲ್ಲಿ ತುಂಬಿ, ಶಾಹಜಹಾನ್‌ಪುರ ಜಿಲ್ಲೆಯ ಪಿಪ್ರೋಲಾದಲ್ಲಿರುವ ವಿತರಣಾ ಕೇಂದ್ರ ಮತ್ತು ಸುತ್ತಮುತ್ತಲಿನ ಅನಿಲ ಪೂರೈಕೆ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ. ಸಾಲದ ಕಂತುಗಳನ್ನು ಪಾವತಿಸಿದ ಬಳಿಕವೂ ಸೂಕ್ತ ಲಾಭ ದೊರೆಯುತ್ತಿದೆ.

ಪ್ರಶ್ನೆ: ಘಟಕದಲ್ಲಿ ಉತ್ಪಾದನೆಯಾಗುವ ಅನಿಲವನ್ನು ಮುಖ್ಯ ಕೊಳವೆಮಾರ್ಗದ ಜಾಲಕ್ಕೆ ಸಂಪರ್ಕಿಸುವ ವ್ಯವಸ್ಥೆ ಜಾರಿಯಾಗಿದೆಯೇ?

ಆದಿ ತಿವಾರಿ: ಘಟಕದಲ್ಲಿ ಉತ್ಪಾದನೆಯಾಗುವ ಅನಿಲವನ್ನು ಹೆಚ್ಚಿನ ಒತ್ತಡದಲ್ಲಿ ಸಿಲಿಂಡರ್‌ಗಳಿಗೆ ತುಂಬಿ ಶಾಹಜಹಾನ್‌ಪುರ ಜಿಲ್ಲೆಯ ಪಿಪ್ರೋಲಾದಲ್ಲಿರುವ ವಿತರಣಾ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಅನಿಲದ ಒತ್ತಡವನ್ನು ಸಮತೋಲನಗೊಳಿಸಿ ನಗರ ಅನಿಲ ವಿತರಣೆಯ ಮುಖ್ಯ ಕೊಳವೆಮಾರ್ಗಕ್ಕೆ ಸೇರಿಸಲಾಗುತ್ತದೆ. ಬಳಿಕ ಈ ಅನಿಲವನ್ನು ವಿವಿಧ ಜಿಲ್ಲೆಗಳ ಕೈಗಾರಿಕಾ ಘಟಕಗಳು, ವಾಹನಗಳು ಮತ್ತು ಗೃಹಬಳಕೆಗೆ ಪೂರೈಸಲಾಗುತ್ತದೆ.

ಪ್ರಶ್ನೆ: ರಾಸಾಯನಿಕ ಗೊಬ್ಬರಗಳಿಗೆ ಸರ್ಕಾರದ ಸಹಾಯಧನ ಲಭ್ಯವಿರುವಾಗ, ನಿಮ್ಮ ಘಟಕದಿಂದ ದೊರೆಯುವ ಸಾವಯವ ಗೊಬ್ಬರವನ್ನು ರೈತರು ಏಕೆ ಬಳಸುತ್ತಿದ್ದಾರೆ?

ಆದಿ ತಿವಾರಿ: ಅನಿಲ ಉತ್ಪಾದನೆಯ ಬಳಿಕ ಉತ್ತಮ ಗುಣಮಟ್ಟದ ಸಾವಯವ ಗೊಬ್ಬರ ಮತ್ತು ನೈಸರ್ಗಿಕ ಗಂಧಕ ದೊರೆಯುತ್ತದೆ. ಈ ಗೊಬ್ಬರವನ್ನು ಬಳಸುವುದರಿಂದ ಬೆಳೆಗಳ ಗುಣಮಟ್ಟ ಮತ್ತು ಇಳುವರಿ ಹೆಚ್ಚಲು ನೆರವಾಗುತ್ತದೆ. ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆಯೂ ಕಡಿಮೆಯಾಗುತ್ತದೆ.

ಇದರಿಂದ ಮಣ್ಣಿನ ಫಲವತ್ತತೆಯನ್ನು ಕಾಪಾಡುವುದರ ಜತೆಗೆ ಸರ್ಕಾರದ ಗೊಬ್ಬರ ಸಹಾಯಧನದ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸಲು ಸಹಾಯವಾಗುತ್ತದೆ. ಈಗ ರೈತರೇ ಗೊಬ್ಬರ ಖರೀದಿಸಲು ನಮ್ಮ ಘಟಕಕ್ಕೆ ಬರುತ್ತಿದ್ದಾರೆ.

ಪ್ರಶ್ನೆ: ಕೇಂದ್ರ ಸರ್ಕಾರದ ‘ಸತತ್‌’ ಮತ್ತು ‘ಗೋವರ್ಧನ’ ಯೋಜನೆಗಳು ಹಾಗೂ ಉತ್ತರ ಪ್ರದೇಶದ ಜೈವಿಕ ಇಂಧನ ನೀತಿಯಿಂದ ಎಷ್ಟು ನೆರವು ದೊರೆತಿದೆ?

ಆದಿ ತಿವಾರಿ: ಕೇಂದ್ರ ಸರ್ಕಾರದ ‘ಸತತ್‌’ ಮತ್ತು ‘ಗೋವರ್ಧನ’ ಯೋಜನೆಗಳು ಹಾಗೂ ಉತ್ತರ ಪ್ರದೇಶ ಸರ್ಕಾರದ ಜೈವಿಕ ಇಂಧನ ನೀತಿಯು ಈ ಕ್ಷೇತ್ರದ ಬೆಳವಣಿಗೆಗೆ ಉತ್ತೇಜನ ನೀಡಿವೆ. ಹೊಸ ತಂತ್ರಜ್ಞಾನವಾಗಿದ್ದರಿಂದ ಆರಂಭದಲ್ಲಿ ಅಗತ್ಯ ಅನುಮತಿಗಳನ್ನು ಪಡೆಯಲು ಸಮಯ ಹಿಡಿಯಿತು. ಆದರೆ ಈಗ ಪ್ರಕ್ರಿಯೆಗಳು ಸುಲಭವಾಗಿದ್ದು, ಹೊಸ ಉದ್ಯಮಿಗಳಿಗೆ ಸಹಕಾರ ದೊರೆಯುತ್ತಿದೆ.

ಪ್ರಶ್ನೆ: ದಿನಕ್ಕೆ ಮೂರು ಟನ್‌ನಿಂದ 12 ಟನ್‌ಗೆ ಉತ್ಪಾದನೆ ಹೆಚ್ಚಿಸುವಾಗ ಎದುರಾಗುವ ಪ್ರಮುಖ ಸವಾಲು ಯಾವುದು? ಬಂಡವಾಳದ ಕೊರತೆಯೇ ಅಥವಾ ಕಚ್ಚಾ ವಸ್ತುಗಳ ಲಭ್ಯತೆಯೇ?

ಆದಿ ತಿವಾರಿ: ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವಾಗ ಎದುರಾಗುವ ಪ್ರಮುಖ ಸವಾಲು ಕಚ್ಚಾ ವಸ್ತುಗಳ ನಿರಂತರ ಲಭ್ಯತೆ. ಬಂಡವಾಳದ ವಿಷಯದಲ್ಲಿ ದೊಡ್ಡ ಸಮಸ್ಯೆಯಿಲ್ಲ. ರೈತರು ಮತ್ತು ಸಕ್ಕರೆ ಕಾರ್ಖಾನೆಗಳೊಂದಿಗೆ ಪೂರೈಕೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವತ್ತ ಗಮನ ಹರಿಸಿದ್ದೇವೆ.

ದಿನಕ್ಕೆ 12 ಟನ್ ಅನಿಲ ಉತ್ಪಾದಿಸುವ ಗುರಿ ತಲುಪಿದ ಬಳಿಕವೂ ಕಚ್ಚಾ ವಸ್ತುಗಳ ಕೊರತೆ ಎದುರಾಗಬಾರದು ಎಂಬುದು ನಮ್ಮ ಉದ್ದೇಶ. ನಮ್ಮ ಅನುಭವದ ಪ್ರಕಾರ, ಇಂತಹ ಘಟಕಗಳ ಯಶಸ್ವಿ ಕಾರ್ಯಾಚರಣೆಗೆ ಕಚ್ಚಾ ವಸ್ತುಗಳು ಸುಲಭವಾಗಿ ಮತ್ತು ನಿರಂತರವಾಗಿ ದೊರೆಯುವುದು ಅತ್ಯಂತ ಮುಖ್ಯವಾಗಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande