
ನವದೆಹಲಿ, 28 ಅಕ್ಟೋಬರ್ (ಹಿ.ಸ.):
ದೇಶದಲ್ಲಿ ತಳಮಟ್ಟದ ಆಡಳಿತ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಸಚಿವ ಸಂಪುಟವು 7,395.55 ಕೋಟಿ ರೂ. ವೆಚ್ಚದ ‘ಪ್ರಧಾನಮಂತ್ರಿ ವಿಕಸಿತ ಗ್ರಾಮ ಸ್ವರಾಜ್ ಯೋಜನೆ’ಗೆ ಅನುಮೋದನೆ ನೀಡಿದೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. 2026-27ರಿಂದ 2030-31ರವರೆಗೆ ಜಾರಿಗೊಳ್ಳಲಿರುವ ಈ ಯೋಜನೆಯು ಕೇಂದ್ರದ ಪ್ರಾಯೋಜಿತ ಯೋಜನೆಯಾಗಿದ್ದು, 16ನೇ ಹಣಕಾಸು ಆಯೋಗದ ಅವಧಿಯಲ್ಲಿ ಅನುಷ್ಠಾನಗೊಳ್ಳಲಿದೆ ಎಂದು ಅವರು ಹೇಳಿದರು.
‘ವಿಕಸಿತ ಭಾರತ’ದ ರಾಷ್ಟ್ರೀಯ ದೃಷ್ಟಿಕೋನಕ್ಕೆ ಅನುಗುಣವಾಗಿ ಆಡಳಿತ ವ್ಯವಸ್ಥೆಯಲ್ಲಿ ಪರಿವರ್ತನೆ ತರುವ ಆಧುನಿಕ ಉಪಕ್ರಮವಾಗಿ ಈ ಯೋಜನೆಯನ್ನು ರೂಪಿಸಲಾಗಿದೆ. ದೇಶದ 2.55 ಲಕ್ಷಕ್ಕೂ ಅಧಿಕ ಪಂಚಾಯಿತಿಗಳು ಮತ್ತು ಸಾಂಪ್ರದಾಯಿಕ ಸ್ಥಳೀಯ ಆಡಳಿತ ಸಂಸ್ಥೆಗಳ ಸುಮಾರು 32 ಲಕ್ಷ ಚುನಾಯಿತ ಪ್ರತಿನಿಧಿಗಳು, ಪಂಚಾಯಿತಿ ಪದಾಧಿಕಾರಿಗಳು ಹಾಗೂ ಇತರ ಸಂಬಂಧಪಟ್ಟವರಿಗೆ ಇದರಿಂದ ಪ್ರಯೋಜನವಾಗಲಿದೆ.
ಕೇಂದ್ರ ಮತ್ತು ರಾಜ್ಯಗಳ ಪಾಲು
ಯೋಜನೆಯ ಒಟ್ಟು ವೆಚ್ಚ 7,395.55 ಕೋಟಿ ರೂ. ಆಗಿದ್ದು, ಇದರಲ್ಲಿ ಕೇಂದ್ರ ಸರ್ಕಾರದ ಪಾಲು 4,869.48 ಕೋಟಿ ರೂ. ಹಾಗೂ ರಾಜ್ಯ ಸರ್ಕಾರಗಳ ಪಾಲು 2,526.07 ಕೋಟಿ ರೂ. ಆಗಿರಲಿದೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದರು.
ಯೋಜನೆಯಡಿ ಜಾಗೃತಿ ಮೂಡಿಸುವ ಪ್ರತಿಯೊಂದು ಕಾರ್ಯಕ್ರಮದ ಮೂಲಕ ಕನಿಷ್ಠ ಒಂದು ಕೋಟಿ ನಾಗರಿಕರನ್ನು ತಲುಪುವ ಗುರಿ ಹೊಂದಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಆಡಳಿತ ವ್ಯವಸ್ಥೆಯನ್ನು ಬಲಪಡಿಸುವುದು, ಸ್ಥಳೀಯ ಸಂಸ್ಥೆಗಳ ಕಾರ್ಯನಿರ್ವಹಣೆಯನ್ನು ಸುಧಾರಿಸುವುದು ಮತ್ತು ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಉತ್ತೇಜನ ನೀಡುವುದು ಯೋಜನೆಯ ಪ್ರಮುಖ ಉದ್ದೇಶಗಳಾಗಿವೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.