ಜೀನ್ ಸಂಶೋಧನೆಯಲ್ಲಿ ಭಾರತದ ಆನುವಂಶಿಕ ವೈವಿಧ್ಯವೇ ಪ್ರಮುಖ ಶಕ್ತಿ: ಜಿತೇಂದ್ರ ಸಿಂಗ್
ನವದೆಹಲಿ, 27 ಅಕ್ಟೋಬರ್ (ಹಿ.ಸ.): ಭಾರತದ ಸಮೃದ್ಧ ಆನುವಂಶಿಕ ವೈವಿಧ್ಯವು ಜೀನ್‌ ಸಂಶೋಧನಾ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಮಹತ್ವದ ಸ್ಥಾನ ಪಡೆಯಲು ನೆರವಾಗಲಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ. ನವದ
केन्द्रीय मंत्री डॉ. जितेन्द्र सिंह


ನವದೆಹಲಿ, 27 ಅಕ್ಟೋಬರ್ (ಹಿ.ಸ.):

ಭಾರತದ ಸಮೃದ್ಧ ಆನುವಂಶಿಕ ವೈವಿಧ್ಯವು ಜೀನ್‌ ಸಂಶೋಧನಾ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಮಹತ್ವದ ಸ್ಥಾನ ಪಡೆಯಲು ನೆರವಾಗಲಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.

ನವದೆಹಲಿಯ ಭಾರತ್ ಮಂಟಪದಲ್ಲಿ ಮಂಗಳವಾರ ನಡೆದ ಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಮ್ಮೇಳನ–2026ರಲ್ಲಿ ವ್ಯವಸ್ಥಾ ಜೀವಶಾಸ್ತ್ರ ಮತ್ತು ಕೃತಕ ಜೀವಶಾಸ್ತ್ರ ಕುರಿತ ಅಧಿವೇಶನವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಭಾರತೀಯರ ಆನುವಂಶಿಕ ಹಾಗೂ ದೈಹಿಕ ಲಕ್ಷಣಗಳಲ್ಲಿನ ವೈವಿಧ್ಯವು ವೈಜ್ಞಾನಿಕ ಸಂಶೋಧನೆಗೆ ಅಪಾರ ಅವಕಾಶಗಳನ್ನು ಒದಗಿಸುತ್ತದೆ. ವಿವಿಧ ಕಾಯಿಲೆಗಳ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಮತ್ತು ಆರೋಗ್ಯ ಸೇವೆಗಳಲ್ಲಿ ಹೊಸ ಪರಿಹಾರಗಳನ್ನು ಕಂಡುಕೊಳ್ಳಲು ಇದು ಸಹಕಾರಿಯಾಗಲಿದೆ. ಮುಂಬರುವ ವರ್ಷಗಳಲ್ಲಿ ಭಾರತದ ವಿಶಿಷ್ಟ ಆನುವಂಶಿಕ ಸಂಪನ್ಮೂಲಗಳತ್ತ ಇತರ ದೇಶಗಳೂ ಹೆಚ್ಚಿನ ಆಸಕ್ತಿ ತೋರಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಜೈವಿಕ ತಂತ್ರಜ್ಞಾನದ ಉದಯೋನ್ಮುಖ ಕ್ಷೇತ್ರಗಳಲ್ಲಿ ಭಾರತವು ತನ್ನದೇ ಆದ ತಾಂತ್ರಿಕ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕಿದೆ ಎಂದು ಸಚಿವರು ಹೇಳಿದರು. ದೇಶದ ವೈಜ್ಞಾನಿಕ ಪ್ರತಿಭೆ ಮತ್ತು ಸಂಶೋಧನಾ ಸಾಮರ್ಥ್ಯವನ್ನು ಪ್ರಾಯೋಗಿಕ ಬಳಕೆಗೆ ತರುವುದರಿಂದ ಆರೋಗ್ಯ ಕ್ಷೇತ್ರಕ್ಕೆ ಪ್ರಯೋಜನವಾಗುವುದರ ಜತೆಗೆ ದೇಶದ ಜೈವಿಕ ತಂತ್ರಜ್ಞಾನ ವ್ಯವಸ್ಥೆಯೂ ಬಲಗೊಳ್ಳಲಿದೆ ಎಂದರು.

ವಿಶೇಷವಾಗಿ, ಜೀನ್‌ ಸಂಶ್ಲೇಷಣೆ ಕ್ಷೇತ್ರದಲ್ಲಿ ಸ್ವದೇಶಿ ತಾಂತ್ರಿಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಅವರು ಒತ್ತಿಹೇಳಿದರು. ಸಂಶೋಧನೆಗೆ ಅಗತ್ಯವಾದ ವಿಶೇಷ ತಂತ್ರಜ್ಞಾನಗಳು ಮತ್ತು ಸಂಪನ್ಮೂಲಗಳಿಗಾಗಿ ವಿದೇಶಿ ಪೂರೈಕೆದಾರರನ್ನು ಅವಲಂಬಿಸುವುದರಿಂದ ಭಾರತೀಯ ವಿಜ್ಞಾನಿಗಳಿಗೆ ಅಗತ್ಯ ವಸ್ತುಗಳು ಸಕಾಲದಲ್ಲಿ ದೊರೆಯದಿರುವ ಹಾಗೂ ಸಂಶೋಧನೆಯನ್ನು ನಿರಂತರವಾಗಿ ಮುಂದುವರಿಸಲು ಅಡಚಣೆಗಳು ಎದುರಾಗುವ ಸಾಧ್ಯತೆಯಿದೆ ಎಂದು ತಿಳಿಸಿದರು.

ದೇಶದಲ್ಲೇ ಜೀನ್‌ ಸಂಶ್ಲೇಷಣೆಯ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿದರೆ ವಿಜ್ಞಾನಿಗಳು ಹೆಚ್ಚು ಪರಿಣಾಮಕಾರಿಯಾಗಿ ಸಂಶೋಧನೆ ನಡೆಸಬಹುದು. ಇದರಿಂದ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವುದರ ಜತೆಗೆ ಹೊಸ ವೈಜ್ಞಾನಿಕ ಪ್ರಯೋಗಗಳಿಗೆ ಉತ್ತೇಜನ ದೊರೆಯಲಿದೆ ಎಂದು ಹೇಳಿದರು.

ಭಾರತದಲ್ಲಿ ವೈಜ್ಞಾನಿಕ ಪ್ರತಿಭೆಗೆ ಕೊರತೆಯಿಲ್ಲ. ಸರ್ಕಾರವು ಸಂಶೋಧನೆ ಮತ್ತು ನಾವೀನ್ಯತೆಗೆ ಆದ್ಯತೆ ನೀಡಿದೆ. ವಿಜ್ಞಾನಿಗಳು ತಮ್ಮ ಸಂಶೋಧನೆಯನ್ನು ಮುಂದುವರಿಸಲು ಅಗತ್ಯ ಸಂಪನ್ಮೂಲಗಳು, ಆರ್ಥಿಕ ನೆರವು ಮತ್ತು ಕೈಗಾರಿಕಾ ವಲಯದ ಸಹಕಾರ ದೊರೆಯುವುದು ಮುಖ್ಯವಾಗಿದೆ. ಇದರಿಂದ ಹೊಸ ಆವಿಷ್ಕಾರಗಳನ್ನು ಉಪಯುಕ್ತ ತಂತ್ರಜ್ಞಾನಗಳು ಮತ್ತು ಉತ್ಪನ್ನಗಳಾಗಿ ರೂಪಿಸಲು ಸಾಧ್ಯವಾಗಲಿದೆ ಎಂದು ಜಿತೇಂದ್ರ ಸಿಂಗ್ ತಿಳಿಸಿದರು.

ಆಧುನಿಕ ವೈಜ್ಞಾನಿಕ ಸಂಶೋಧನೆಯಲ್ಲಿ ಜೀವಶಾಸ್ತ್ರ, ಎಂಜಿನಿಯರಿಂಗ್, ಗಣಿತ ಸೇರಿದಂತೆ ವಿವಿಧ ವಿಷಯಗಳ ನಡುವಿನ ಸಮನ್ವಯ ಹೆಚ್ಚುತ್ತಿರುವುದನ್ನು ಅವರು ಪ್ರಸ್ತಾಪಿಸಿದರು. ವಿವಿಧ ಕ್ಷೇತ್ರಗಳ ತಜ್ಞರು ಒಟ್ಟಾಗಿ ಕಾರ್ಯನಿರ್ವಹಿಸುವುದರಿಂದ ಸಂಕೀರ್ಣ ವೈಜ್ಞಾನಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮತ್ತು ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಅವಕಾಶಗಳು ಸೃಷ್ಟಿಯಾಗುತ್ತವೆ ಎಂದರು.

ಪರಮಾಣು ವೈದ್ಯಕೀಯ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಸಂಶೋಧನಾ ಅವಕಾಶಗಳ ಬಗ್ಗೆಯೂ ಸಚಿವರು ಮಾತನಾಡಿದರು. ಈ ಕ್ಷೇತ್ರದಲ್ಲಿನ ಹೊಸ ಸಾಧ್ಯತೆಗಳ ಕುರಿತು ಜಾಗೃತಿ ಮೂಡಿಸುವುದು ಮತ್ತು ಹೆಚ್ಚಿನ ಪಾಲ್ಗೊಳ್ಳುವಿಕೆಗೆ ಉತ್ತೇಜನ ನೀಡುವುದು ಅಗತ್ಯವಾಗಿದೆ ಎಂದು ಹೇಳಿದರು.

ಇತ್ತೀಚೆಗೆ ರೂಪಿಸಲಾದ ಶಾಂತಿ ಕಾಯ್ದೆಯ ನಿಬಂಧನೆಗಳನ್ನು ಉಲ್ಲೇಖಿಸಿದ ಅವರು, ಇದರ ಮೂಲಕ ಪರಮಾಣು ವೈದ್ಯಕೀಯ ಸಂಶೋಧನೆಯಲ್ಲಿ ಖಾಸಗಿ ವಲಯದ ಪಾಲ್ಗೊಳ್ಳುವಿಕೆಗೆ ಅವಕಾಶಗಳು ತೆರೆದುಕೊಂಡಿವೆ. ಇದರಿಂದ ಸಂಶೋಧನಾ ಸಂಸ್ಥೆಗಳು ಮತ್ತು ಕೈಗಾರಿಕಾ ವಲಯದ ನಡುವಿನ ಸಹಕಾರ ಹೆಚ್ಚಲು ನೆರವಾಗಲಿದೆ ಎಂದು ತಿಳಿಸಿದರು.

ವೈಜ್ಞಾನಿಕ ಆವಿಷ್ಕಾರಗಳನ್ನು ತಾಂತ್ರಿಕ ಅಭಿವೃದ್ಧಿ ಮತ್ತು ಪ್ರಾಯೋಗಿಕ ಬಳಕೆಗೆ ತರುವ ಅಗತ್ಯವನ್ನೂ ಅವರು ಒತ್ತಿಹೇಳಿದರು. ಸಂಶೋಧನಾ ಸಂಸ್ಥೆಗಳು, ಕೈಗಾರಿಕೆಗಳು ಮತ್ತು ಉದ್ಯಮಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಹೊಸ ಸಂಶೋಧನೆಗಳನ್ನು ಸಮಾಜಕ್ಕೆ ಪ್ರಯೋಜನವಾಗುವ ಉತ್ಪನ್ನಗಳು ಮತ್ತು ಪರಿಹಾರಗಳಾಗಿ ಪರಿವರ್ತಿಸಬಹುದು ಎಂದು ಹೇಳಿದರು.

ಈ ಅಧಿವೇಶನದಲ್ಲಿ ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ರಾಜೇಶ್ ಎಸ್. ಗೋಖಲೆ ಸೇರಿದಂತೆ ಹಲವು ವಿಜ್ಞಾನಿಗಳು ಮತ್ತು ತಜ್ಞರು ಭಾಗವಹಿಸಿದ್ದರು. ವ್ಯವಸ್ಥಾ ಜೀವಶಾಸ್ತ್ರ ಮತ್ತು ಕೃತಕ ಜೀವಶಾಸ್ತ್ರದ ಸಾಧ್ಯತೆಗಳು ಹಾಗೂ ಭಾರತದಲ್ಲಿ ಜೈವಿಕ ತಂತ್ರಜ್ಞಾನದ ಹೊಸ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ಕುರಿತು ಚರ್ಚೆ ನಡೆಯಿತು.

ಸಮ್ಮೇಳನದಲ್ಲಿ ವಿಜ್ಞಾನಿಗಳು, ನೀತಿ ನಿರೂಪಕರು, ಕೈಗಾರಿಕಾ ಪ್ರತಿನಿಧಿಗಳು, ನವೋದ್ಯಮಿಗಳು ಮತ್ತು ಯುವ ಸಂಶೋಧಕರನ್ನು ಒಂದೇ ವೇದಿಕೆಗೆ ತರಲಾಗಿದೆ. ವೈಜ್ಞಾನಿಕ ಸಂಶೋಧನೆ, ತಾಂತ್ರಿಕ ನಾವೀನ್ಯತೆ ಮತ್ತು ರಾಷ್ಟ್ರೀಯ ಅಭಿವೃದ್ಧಿಯ ನಡುವಿನ ಸಮನ್ವಯವನ್ನು ಬಲಪಡಿಸುವುದು ಹಾಗೂ ಹೊಸ ಆವಿಷ್ಕಾರಗಳನ್ನು ಪ್ರಾಯೋಗಿಕ ಬಳಕೆಗೆ ತರುವುದು ಸಮ್ಮೇಳನದ ಉದ್ದೇಶವಾಗಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande