ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ ಮಾರ್ಗಸೂಚಿ ಬಿಡುಗಡೆ
ನವದೆಹಲಿ, 27 ಅಕ್ಟೋಬರ್ (ಹಿ.ಸ.): ಕೆಲಸದ ಸ್ಥಳಗಳು ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಮಹಿಳೆಯರ ಸುರಕ್ಷತೆ ಖಚಿತಪಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಈ ಸಂಬಂಧ ಎಂಟು ಪ್ರಮುಖ ಕ್ಷೇತ್ರಗಳನ್ನು ಕೇಂದ್ರೀಕರಿಸಿ ಸಮಗ್ರ ಮಾರ್ಗಸೂಚಿ ಬಿಡುಗಡೆ ಮ
ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ ಮಾರ್ಗಸೂಚಿ ಬಿಡುಗಡೆ


ನವದೆಹಲಿ, 27 ಅಕ್ಟೋಬರ್ (ಹಿ.ಸ.):

ಕೆಲಸದ ಸ್ಥಳಗಳು ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಮಹಿಳೆಯರ ಸುರಕ್ಷತೆ ಖಚಿತಪಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಈ ಸಂಬಂಧ ಎಂಟು ಪ್ರಮುಖ ಕ್ಷೇತ್ರಗಳನ್ನು ಕೇಂದ್ರೀಕರಿಸಿ ಸಮಗ್ರ ಮಾರ್ಗಸೂಚಿ ಬಿಡುಗಡೆ ಮಾಡಿರುವ ಆಯೋಗ, ಶಿಫಾರಸುಗಳ ಅನುಷ್ಠಾನದ ಪ್ರಗತಿ ಕುರಿತು ಎರಡು ತಿಂಗಳೊಳಗೆ ಕ್ರಮ ಕೈಗೊಂಡ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ.

ಹತ್ತು ಕೇಂದ್ರ ಸಚಿವಾಲಯಗಳ ಕಾರ್ಯದರ್ಶಿಗಳು, ರೈಲ್ವೆ ಮಂಡಳಿಯ ಅಧ್ಯಕ್ಷರು ಹಾಗೂ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಆಡಳಿತಾಧಿಕಾರಿಗಳಿಗೆ ಈ ಮಾರ್ಗಸೂಚಿಯನ್ನು ಕಳುಹಿಸಲಾಗಿದೆ. ಶಿಫಾರಸುಗಳನ್ನು ಆದಷ್ಟು ಬೇಗ ಜಾರಿಗೊಳಿಸುವಂತೆ ಎಲ್ಲ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇಲಾಖೆಗಳಿಗೆ ಆಯೋಗ ಮನವಿ ಮಾಡಿದೆ.

ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ದೇಶದಲ್ಲಿ ಕಠಿಣ ಕಾನೂನುಗಳಿದ್ದರೂ, ಕೆಲಸದ ಸ್ಥಳಗಳು ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಅವರ ಸುರಕ್ಷತೆ ಗಂಭೀರ ಕಳವಳದ ವಿಷಯವಾಗಿ ಮುಂದುವರಿದಿದೆ ಎಂದು ಆಯೋಗ ತಿಳಿಸಿದೆ. ಮಹಿಳೆಯರ ಸುರಕ್ಷತೆಯು ಅವರ ಸಾಂವಿಧಾನಿಕ ಹಕ್ಕುಗಳು, ನ್ಯಾಯ ಮತ್ತು ಸಮಾನ ಅವಕಾಶಗಳನ್ನು ಖಚಿತಪಡಿಸುವಲ್ಲಿ ಅತ್ಯಂತ ಮಹತ್ವದ್ದಾಗಿದೆ ಎಂದು ಒತ್ತಿಹೇಳಿದೆ.

ಆವರ್ತಕ ಕಾರ್ಮಿಕ ಬಲದ ಭಾಗವಹಿಸುವಿಕೆ ಸಮೀಕ್ಷೆಯ ಪ್ರಕಾರ, 2026ರ ಸೆಪ್ಟೆಂಬರ್‌ನಲ್ಲಿ ಕಾರ್ಮಿಕ ಬಲದಲ್ಲಿ ಮಹಿಳೆಯರ ಪಾಲು ಶೇ. 34.6ರಷ್ಟಿತ್ತು ಎಂದು ಆಯೋಗ ಉಲ್ಲೇಖಿಸಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆಯ 2026ರ ವರದಿಯ ಪ್ರಕಾರ, ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದಂತೆ ಸುಮಾರು 4.4 ಲಕ್ಷ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದೆ. ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಲು ನಿರಂತರ ಹಾಗೂ ಸಂಘಟಿತ ಪ್ರಯತ್ನಗಳ ಅಗತ್ಯವನ್ನು ಈ ಅಂಕಿಅಂಶಗಳು ಸೂಚಿಸುತ್ತವೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

ಎಂಟು ಪ್ರಮುಖ ಕ್ಷೇತ್ರಗಳಿಗೆ ಆದ್ಯತೆ

ಮಹಿಳೆಯರ ಸುರಕ್ಷತೆಗಾಗಿ ಜಾಗೃತಿ ಮೂಡಿಸುವುದು, ಅಗತ್ಯ ಮೂಲಸೌಕರ್ಯ ಕಲ್ಪಿಸುವುದು, ಘಟನೆಗಳು ಸಂಭವಿಸಿದಾಗ ಸುತ್ತಮುತ್ತಲಿನ ಜನರು ಮಧ್ಯಪ್ರವೇಶಿಸುವುದನ್ನು ಉತ್ತೇಜಿಸುವುದು ಹಾಗೂ ಪೊಲೀಸರ ಕಾರ್ಯವೈಖರಿಯನ್ನು ಹೆಚ್ಚು ಸಂವೇದನಾಶೀಲ ಮತ್ತು ಸಕ್ರಿಯಗೊಳಿಸುವುದು ಮಾರ್ಗಸೂಚಿಯ ಪ್ರಮುಖ ಅಂಶಗಳಾಗಿವೆ.

ಇದರ ಜತೆಗೆ ಸಂತ್ರಸ್ತರಿಗೆ ಅಗತ್ಯ ನೆರವು ಮತ್ತು ಪುನರ್ವಸತಿ ಒದಗಿಸುವುದು, ಮಹಿಳೆಯರ ವಿರುದ್ಧದ ಅಂತರ್ಜಾಲ ಅಪರಾಧಗಳನ್ನು ತಡೆಯುವುದು, ದೀರ್ಘಕಾಲೀನ ಸಾಂಸ್ಥಿಕ ಸುಧಾರಣೆಗಳನ್ನು ಜಾರಿಗೊಳಿಸುವುದು ಹಾಗೂ ಪ್ರಾಯೋಗಿಕ ಕ್ರಮಗಳನ್ನು ಕೈಗೊಳ್ಳುವುದಕ್ಕೂ ಒತ್ತು ನೀಡಲಾಗಿದೆ.

ಮಹಿಳೆಯರಿಗೆ ಸುರಕ್ಷಿತ ವಾತಾವರಣ ನಿರ್ಮಿಸುವ ಉದ್ದೇಶದಿಂದ ಶಿಫಾರಸುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಆಯೋಗ ಸೂಚಿಸಿದೆ. ಅನುಷ್ಠಾನದ ಪ್ರಗತಿ ವರದಿಯ ಆಧಾರದ ಮೇಲೆ ಮುಂದಿನ ಕ್ರಮಗಳನ್ನು ಪರಿಶೀಲಿಸುವುದಾಗಿ ತಿಳಿಸಿದೆ.

ಈ ಸಚಿವಾಲಯಗಳಿಗೆ ಮಾರ್ಗಸೂಚಿ

ರೈಲ್ವೆ ಮಂಡಳಿಯ ಜತೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ಗೃಹ, ಮಾಹಿತಿ ಮತ್ತು ಪ್ರಸಾರ, ಕಾರ್ಮಿಕ ಮತ್ತು ಉದ್ಯೋಗ, ಕಾರ್ಪೊರೇಟ್ ವ್ಯವಹಾರಗಳು, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು, ವಸತಿ ಮತ್ತು ನಗರ ವ್ಯವಹಾರಗಳು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಗಳಿಗೆ ಮಾರ್ಗಸೂಚಿ ಕಳುಹಿಸಲಾಗಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande