
ನವದೆಹಲಿ, 27 ಅಕ್ಟೋಬರ್ (ಹಿ.ಸ.):
ಸಂಪನ್ಮೂಲ ಯೋಜನೆಗಳ ಅನುಷ್ಠಾನಕ್ಕೆ ಎದುರಾಗಿರುವ ಅಡೆತಡೆಗಳನ್ನು ಗುರುತಿಸಿ, ಅವುಗಳನ್ನು ಶೀಘ್ರವಾಗಿ ನಿವಾರಿಸುವ ಮೂಲಕ ನಿಗದಿತ ಅವಧಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಸಂರಕ್ಷಣಾ ಇಲಾಖೆಯ ವಿವಿಧ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೇಂದ್ರ ಜಲಶಕ್ತಿ ರಾಜ್ಯ ಸಚಿವ ರಾಜ್ ಭೂಷಣ್ ಚೌಧರಿ ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಇಲಾಖೆಯ ವಿವಿಧ ವಿಭಾಗಗಳು ಮತ್ತು ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಯೋಜನೆಗಳು ಹಾಗೂ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದವು. ಪ್ರವಾಹ ನಿರ್ವಹಣಾ ವಿಭಾಗ, ಫರಕ್ಕಾ ಅಣೆಕಟ್ಟು ಯೋಜನೆ, ರಾಷ್ಟ್ರೀಯ ಜಲ ಮಿಷನ್, ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಮತ್ತು ಜಲ ನಿರ್ವಹಣೆಯ ಆಧುನೀಕರಣ ಕಾರ್ಯಕ್ರಮ, ಜಲಾನಯನ ನಿರ್ವಹಣೆ, ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ, ಕೇನ್–ಬೆಟ್ವಾ ನದಿ ಜೋಡಣೆ ಯೋಜನಾ ಪ್ರಾಧಿಕಾರ, ಬ್ರಹ್ಮಪುತ್ರ ನದಿಗೆ ಸಂಬಂಧಿಸಿದ ವಿಷಯಗಳು, ಬ್ರಹ್ಮಪುತ್ರ ಮಂಡಳಿ, ಸಣ್ಣ ನೀರಾವರಿ ಅಂಕಿಅಂಶಗಳು ಹಾಗೂ ರಾಷ್ಟ್ರೀಯ ಜಲವಿಜ್ಞಾನ ಸಂಸ್ಥೆಯ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಲಾಯಿತು.
ಪ್ರವಾಹ ನಿರ್ವಹಣೆ ಮತ್ತು ಗಡಿ ಪ್ರದೇಶ ಕಾರ್ಯಕ್ರಮದಡಿ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಫರಕ್ಕಾ ಅಣೆಕಟ್ಟಿನ ಗೇಟ್ಗಳ ಬದಲಾವಣೆ ಹಾಗೂ ನದಿ ದಂಡೆಯ ಸವೆತ ತಡೆಗಟ್ಟುವ ಕ್ರಮಗಳಿಗೆ ಸಂಬಂಧಿಸಿದ ಕಾಮಗಾರಿಗಳು ಮತ್ತು ಅವುಗಳ ಅನುಷ್ಠಾನದಲ್ಲಿ ಎದುರಾಗಿರುವ ಸವಾಲುಗಳ ಬಗ್ಗೆಯೂ ಸಮಾಲೋಚನೆ ನಡೆಸಲಾಯಿತು. ರಾಷ್ಟ್ರೀಯ ಜಲ ಮಿಷನ್ನ ಆದ್ಯತೆಯ ಚಟುವಟಿಕೆಗಳು ಮತ್ತು ಪ್ರಮುಖ ಉಪಕ್ರಮಗಳ ಪ್ರಗತಿಯ ಮಾಹಿತಿ ಪಡೆಯಲಾಯಿತು.
ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಮತ್ತು ಜಲ ನಿರ್ವಹಣೆಯ ಆಧುನೀಕರಣ ಕಾರ್ಯಕ್ರಮದಡಿ ಅನುಷ್ಠಾನಗೊಳ್ಳುತ್ತಿರುವ 35 ಪ್ರಾಯೋಗಿಕ ಗುಂಪುಗಳ ಕಾರ್ಯಚಟುವಟಿಕೆಗಳನ್ನು ಸಚಿವರು ಪರಿಶೀಲಿಸಿದರು. ಕೇನ್–ಬೆಟ್ವಾ ನದಿ ಜೋಡಣೆ ಯೋಜನೆಯ ಪ್ರಗತಿ, ಸಂಪರ್ಕ ಕಾಲುವೆ ನಿರ್ಮಾಣ ಹಾಗೂ ದೌಧನ್ ಅಣೆಕಟ್ಟಿನ ಕಾಮಗಾರಿಗಳ ಸ್ಥಿತಿಗತಿಯ ಕುರಿತು ಚರ್ಚಿಸಲಾಯಿತು.
ಬ್ರಹ್ಮಪುತ್ರ ಮಂಡಳಿಯ ವತಿಯಿಂದ ರೂಪಿಸಲಾಗುತ್ತಿರುವ ಸಮಗ್ರ ಯೋಜನಾ ರೂಪುರೇಷೆ ಮತ್ತು ವಿವರವಾದ ಯೋಜನಾ ವರದಿಗಳ ಸಿದ್ಧತಾ ಕಾರ್ಯದ ಪ್ರಗತಿಯ ಬಗ್ಗೆಯೂ ಸಭೆಗೆ ಮಾಹಿತಿ ನೀಡಲಾಯಿತು.
ಸಣ್ಣ ನೀರಾವರಿ ಅಂಕಿಅಂಶಗಳ ಕಾರ್ಯಕ್ರಮದಡಿ ನಡೆಯುತ್ತಿರುವ ನಾಲ್ಕು ಜನಗಣತಿಗಳ ಪ್ರಗತಿ ಹಾಗೂ ರಾಷ್ಟ್ರೀಯ ಜಲವಿಜ್ಞಾನ ಸಂಸ್ಥೆಯ ಪ್ರಮುಖ ಕಾರ್ಯಕ್ರಮಗಳ ಗುರಿಗಳು ಮತ್ತು ಸಾಧನೆಗಳನ್ನು ಸಭೆಯಲ್ಲಿ ಪರಿಶೀಲಿಸಲಾಯಿತು.
ಸಭೆಯಲ್ಲಿ ಕೈಗೊಂಡ ನಿರ್ಧಾರಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಯೋಜನೆಗಳ ಪ್ರಗತಿಯನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕು. ಅಲ್ಲದೆ, ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ರಾಜ್ಯ ಸರ್ಕಾರಗಳೊಂದಿಗೆ ಉತ್ತಮ ಸಮನ್ವಯ ಸಾಧಿಸಬೇಕು ಎಂದು ಸಚಿವ ಸಿ.ಆರ್. ಪಾಟೀಲ್ ಅಧಿಕಾರಿಗಳು ಮತ್ತು ಸಂಬಂಧಿತ ಸಂಸ್ಥೆಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಿದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.